ತ್ರಿವರ್ಣ ವಿದ್ಯುತ್ ದೀಪಾಲಂಕಾರದಲ್ಲಿ ಝಗಮಗಿಸುತ್ತಿರುವ ಐತಿಹಾಸಿಕ ಗೋಳಗುಮ್ಮಟ

ವಿಜಯಪುರ: ಐತಿಹಾಸಿಕ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟ ಪ್ರಾಚೀನ ಸ್ಮಾರಕಕ್ಕೆ ತ್ರಿವರ್ಣ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆ ಝಗಮಗಿಸುತ್ತಿದೆ.  ಆಜಾದಿ ಕಾ ಅಮೃತ ಮಹೋತ್ಸವ ಮತ್ತು ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ 100 ಕೋಟಿ ತಲುಪಿದ ಹಿನ್ನೆಲೆಯಲ್ಲಿ ಈಗ ಐತಿಹಾಸಿಕ ಗೋಳಗುಮ್ಮಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. 

ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಎಸ್ಪಿ ಎಚ್. ಡಿ. ಆನಂದ ಕುಮಾರ ಐತಿಹಾಸಿಕ ಗೋಳಗುಮ್ಮಟಕ್ಕೆ ಭೇಟಿ ನೀಡಿ ದೀಪಾಲಂಕಾರ ಕಾರ್ಯಕ್ರಮದ ಸಂಭ್ರಮಾಚರಣೆಗೆ ಚಾಲನೆ ನೀಡಿದರು.  ತ್ರಿವರ್ಣದ ಬುಗ್ಗಾಗಳನ್ನು ಅಂದರೆ ಬಲೂನುಗಳನ್ನು ಆಗಸಕ್ಕೆ ಹಾರಿ ಬಿಡುವ ಮೂಲಕ ಮೂರೂ ಜನ ಅಧಿಕಾರಿಗಳು ಚಾಲೆ ನೀಡಿದರು.

 

ಕೇಂದ್ರ ಸಂಸ್ಕೃತಿ ಸಚಿವಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ವ್ಯಾಪ್ತಿಯ ಒಂದು ನೂರು ಸ್ಮಾರಕಗಳನ್ನು ತ್ರಿವರ್ಣ ವಿದ್ಯುತ್ ದೀಪಗಳಿಂದ ಬೆಳಗಿಸಲು ಈ ಯೋಜನೆ ರೂಪಿಸಿದೆ.  ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಕೊರೊನಾ ಲಸಿಕಾರಣ 100 ಕೋಟಿ ಸಾಧನೆ ಹಿನ್ನೆಲೆಯಲ್ಲಿ ಆಯ್ಕೆ ಮಾಡಿರುವ ಪ್ರಾಚೀನ ಸ್ಮಾರಕಗಳಲ್ಲಿ ವಿಜಯಪುರದ ಐತಿಹಾಸಿಕ ಗೋಳ ಗುಮ್ಮಟವೂ ಸೇರಿದ್ದು ಗಮನಾರಹ್ವಾಗಿದೆ.  ಈಗ ಈ ಪ್ರಾಚೀನ ಸ್ಮಾರಕ ರಾತ್ರಿ ವೇಲೆಯಲ್ಲಿ ಅತ್ಯಂತ ಆಕರ್ಷಣೀಯವಾಗಿ ಎಲ್ಲರ ಕಣ್ಮನ ಸೆಳೆಯುತ್ತಿದೆ.

ಈ ಸಂಭ್ರಮಾಚರಣೆಗೆ ಚಾಲನೆ ನೀಡಿ ಮಾತನಾಡಿದ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ, ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನದ ಮೊದಲ ಡೋಸ್ ಲಸಿಕೆ 100 ಕೋಟಿ ತಲುಪಿರುವುದು ಹೊಸ ಮೈಲುಗಲ್ಲು ಸಾಧಿಸಿದಂತಾಗಿದೆ.  ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.  ಈಗ ಐತಿಹಾಸಿಕ ಗೋಳ ಗುಮ್ಮಟ ಸ್ಮಾರಕ ಅತ್ಯಂತ ತ್ರಿವರ್ಣ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ 16.34 ಲಕ್ಷ ಜನರಿಗೆ ಕೊರೊನಾ ಮೊದಲ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿತ್ತು.  ಈ ಪೈಕಿ 14.17 ಲಕ್ಷ ಜನರಿಗೆ ಮೊದಲ ಲಸಿಕೆಗಳನ್ನು ಹಾಕುವ ಮೂಲಕ ಶೇಕಡ 87 ರಷ್ಟು ಸಾಧನೆ ಮಾಡಲಾಗಿದೆ.  ನಗರ ಪ್ರದೇಶಗಳಲ್ಲಿ ಶೇ. 95 ರಷ್ಟು ಜನರಿಗೆ ಮೊದಲ ಡೋಸ್ ನೀಡಲಾಗಿದೆ.  ಜಿಲ್ಲಾದ್ಯಂತ ಇನ್ನುಳಿದ ಶೇ.13 ರಷ್ಟು ಸಾಧನೆ ಮಾಡಲು ಅಧಿಕಾರಿಗಳು  ಶ್ರಮ ಪಡುತ್ತಿದ್ದಾರೆ.  ಈವರೆಗೆ ನೀಡಿದ ಜನರ ಸಹಕಾರ ಮುಂದುವರೆಯಲಿ.  ಸಾರ್ವಜನಿಕರು ಕಡ್ಡಾಯವಾಗಿ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಸತತ ಪರಿಶ್ರಮ, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಮತ್ತು ವೈದ್ಯಕೀಯ ಅಧಿಕಾರಿಗಳ ಸಹಕಾರದಿಂದ ಈ ಸಾಧನೆ ಮಾಡಲಾಗಿದೆ.  ಅದರಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯೂ ಶೇ.95 ರಷ್ಟು ಲಸಿಕೆ ಹಾಕಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.

ಎರಡನೇ ಲಸಿಕೆ ನೀಡುವುದು ಅತ್ಯಂತ ಸವಾಲಾಗಿದೆ.  ಈ ಹಿಂದೆ ಎಲ್ಲ ಧರ್ಮ ಗುರುಗಳು, ನಾನಾ ಸಂಘಟನೆಗಳು, ಸರಕಾರದ ಹೊರತಾದ ಸಂಘ ಸಂಸ್ಥೆಗಳು ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ.  ಈ ಸಹಕಾರ ಮುಂಬರುವ ದಿನಗಳಲ್ಲಿ ಮುಂದುವರೆಯಲಿ.  ಆ ಮೂಲಕ ಬಸವ ನಾಡಿನಲ್ಲಿ ಲಸಿಕೆ ಅಭಿಯಾನ ಶೇ. 100 ಗುರಿ ತಲುಪವಂತಾಗಲಿ ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್. ಡಿ. ಆನಂದ ಕುಮಾರ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಭಜಂತ್ರಿ, ಜಿಲ್ಲಾ  ಆರ್ ಸಿ ಎಚ್ ಅಧಿಕಾj ಡಾ. ಮಹೇಶ ನಾಗರಬೆಟ್ಟ, ತಾಲೂಕು ಆರೋಗ್ಯಾಧಿಕಾರಿ ಕವಿತಾ ದೊಡಮನಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಸುಲೇಮಾನ ನದಾಫ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳು, ತ್ರಿವರ್ಣ ದೀಪಾಲಂಕಮಾರ ಮಾಡಿದ ಗುತ್ತಿಗೆದಾರ ಡಿ. ಪಿ. ಜಾಧವ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌