ವಿಜಯಪುರ: ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ.
ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರವರ ಪರ ಹಂದಿಗನೂರ ಗ್ರಾಮದಲ್ಲಿ ಪ್ರಚಾರ ಕೈಗೊಂಡ ಅವರು, ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿರುವ ಬಿಜೆಪಿ ಬೆಂಬಲಿಸಿದರೆ ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಾಗುತ್ತವೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವದರಿಂದ ರಾಜ್ಯದ ಅನೇಕ ಸಚಿವರು ಪ್ರಚಾರಕ್ಕೆ ಬಂದಾಗ ನಿಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ, ಚುನಾವಣೆ ಬಳಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಫಸಲ್ ಭೀಮಾ ವಿಮಾ ಯೋಜನೆ, ಪ್ರಧಾನ ಮಂತ್ರಿ ಜನೌಷಧಿ, ಬಿತ್ತನೆ ಬೀಜ, ಸಬ್ಸಿಡಿ ಬೆಲೆಯಲ್ಲಿ ರಸಗೊಬ್ಬರ ವಿತರಣೆ, ದೇಶದ ಸಾಮಾನ್ಯ ಜನರು ಸಹ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಜನಧನ್ ಯೋಜನೆಯಲ್ಲಿ ಉಳಿತಾಯ ಖಾತೆ ತೆರೆಯಲು ಅನುಕೂಲ ಮಾಡಿದ್ದಾರೆ, 100 ಕೋಟಿಗೂ ಅಧಿಕ ನಾಗರಿಕರಿಗೆ ಉಚಿತ ಕೋವಿಡ್ ಲಸಿಕೆ ವಿತರಣೆ ಮಾಡಿದ್ದಾರೆ ಎಂದು ಹೇಳಿದರು.
ದೇಶದ ನಾಗರಿಕರಿಗಾಗಿ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ನೀಡಿರುವ ದೇಶ ಈಗ ಪ್ರಾಮಾಣಿಕ ಪ್ರಧಾನಮಂತ್ರಿ ಕೈಯಲ್ಲಿದೆ. ಆದ್ದರಿಂದಲೇ ನಾವೆಲ್ಲ ಸುರಕ್ಷಿತವಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ದೇಶದಲ್ಲಿ ಮತ್ತು ರಾಜ್ಯದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಯಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಅಲ್ಲದೇ, ಶಾಸಕ ಯತ್ನಾಳ ಅವರು ಹಂದಿಗನೂರ, ಗುಬ್ಬೆವಾಡ, ಮೊರಟಗಿ, ಹಂಚಿವಾಳ, ಕುಳಕುಮಟಗಿ ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂ ಪರ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧೇಶ್ವರ ಸಂಸ್ಥೆ ಉಪಾಧ್ಯಕ್ಷ ಸಂಗನಬಸಪ್ಪ ಸಜ್ಜನ, ಮುಖಂಡರಾದ ಎಸ್. ಎ ಪಾಟೀಲ, ಮಡಿವಾಳಗೌಡ ಚನಗೊಂಡ, ಕೆ. ಆಯ್. ದೇಸಾಯಿ, ರಮೇಶ ಪಾಟೀಲ, ಅಶೋಕ ಅಚ್ಛೆಗಾವಿ, ಮುತ್ತುಗೌಡ ಪಾಟೀಲ ಸೇರಿದಂತೆ ಸ್ಥಳೀಯ ಮುಖಂಡರು, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು