ಪಂಜಾಬಿನ ಸಿದ್ದು, ಕರ್ನಾಟಕ ಸಿದ್ಧುಗಳಿಂದಾಗಿ ಕಾಂಗ್ರೆಸ್ ಮುಳುಗತ್ತಿರುವ ಹಡಗು ಆಗಿದೆ- ಮಾಜಿ ಸಿಎಂ ಜಗದೀಶ ಶೆಟ್ಟರ

ವಿಜಯಪುರ: ಪಂಜಾಬಿನಲ್ಲಿ ಸಿದ್ಧು ಮತ್ತು ಕರ್ನಾಟಕದಲ್ಲಿ ಸಿದ್ಧುಗಳಿಂದಾಗಿ ಕಾಂಗ್ರೆಸ್ ದೇಶದಲ್ಲಿ ಮುಳಗುವ ಹಡಗು ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದ್ದಾರೆ. 

ವಿಜಯಪುರ ಜಿಲ್ಲೆಯಲ್ಲಿ ಸಿಂದಗಿಯಲ್ಗಿ ಮಾತನಾಡಿದ ಅವರು, ಈ ಬಾರಿ ಬೈ ಎಲೆಕ್ಷನ್ ನಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ತಿಳಿಸಿದ್ದಾರೆ.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಪ್ರಚಾರ ಜೋರಾಗಿ ನಡೆಯುತ್ತಿದೆ.  ಇಲ್ಲಿನ ವಾತಾವರಣ ನೋಡಿದಾಗ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಎರಡು ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದಾರೆ.  ಕೇಂದ್ರದಲ್ಲಿ ನರೇಂದ್ರ ಮೋದಿ ಮತ್ತು ರಾಜ್ಯದಲ್ಲಿ ಬೊಮ್ಮಾಯಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿ ಚಾಂದಕವಟೆ ಎಂಬ ಗ್ರಾಮದಲ್ಲಿ ಸುಮಾರು 6000 ಮತದಾರರಿದ್ದು, ಇಂದು ಇಡೀ ಗ್ರಾಮಸ್ಥರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.  ಹಾನಗಲ್ ನಲ್ಲಿಯೂ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಕೂಡ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜಗದೀಶ ಶೆಟ್ಟರ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಏಳು ವರ್ಷಗಳಲ್ಲಿ ದೇಶಕ್ಕೆ ಗೌರವ ತರುವ ಕೆಲಸ ಮಾಡಿದ್ದಾರೆ.  ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಗುತ್ತಿರುವ ಸನ್ಮಾನ ಹೆಚ್ಚಾಗಿದೆ.  ದೇಶದ ಸ್ವಾಭಿಮಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ನರೇಂದ್ರ ಮೋದಿ ಮಾಡಿದ್ದಾರೆ.  ಅವರ ಜನಪರ, ರೈತ ಪರ ಕೆಲಸ ಕಾರ್ಯಗಳು, ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗುವ ಕೆಲಸಗಳು ಗಮನ ಸೆಳೆದಿವೆ.  ಕಿಸಾನ್ ಸಮ್ಮಾನ ಯೋಜನೆ ಪ್ರಧಾನಿ ರೂ. 6000 ಹಣ ನೀಡಿದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ ರೂ. 4000 ಸೇರಿಸಿ ಒಟ್ಟು ರೂ. 10 ಸಾವಿರ ಹಣ ಸಿಗುವಂತೆ ಮಾಡಿದ್ದಾರೆ.  ಪ್ರತಿಯೊಬ್ಬ ಭಾರತೀಯರು ಯಾವುದೇ ಠೇವಣಿ ಇಲ್ಲದೇ ಬ್ಯಾಂಕ್ ಖಾತೆ ತೆರೆಯಲು ಅವಕಾಶ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳು ರೈತರ ಖಾತೆಗಳಿಗೆ ನೇರವಾಗಿ ಜಮೆಯಾಗುವ ಮೂಲಕ ಹಣದ ಸೋರಿಕೆ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬಿದ್ದಂತಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು.  ಐದು ವರ್ಷ ಸಿಎಂ ಆಗಿ ಹಲವಾರು ಭಾಗ್ಯ ನೀಡಿದ್ದಾಗಿ ಮಾಜಿ ಸಿಎಂ ಎಸ್.ಸಿದ್ಧರಾಮಯ್ಯ ಹೇಳುತ್ತಿದ್ದಾರೆ.  ಆದರೆ, ಅವರ ಎಲ್ಲ ಭಾಗ್ಯಗಳು ಜನರನ್ನು ತಲುಪಿದ್ದರೆ ಅವರು ಐದು ವರ್ಷಗಳ  ಬಳಿಕ ಮತ್ತೆ ಅಧಿಕಾರಕ್ಕೆ ಬರುತ್ತಿದ್ದರು.  ಕೇವಲ ಪ್ರಚಾರಕ್ಕಾಗಿ ಅವುಗಳನ್ನು ಘೋಷಣೆ ಮಾಡಿದರು.  ಸ್ವತಃ ಸಿದ್ಧರಾಮಯ್ಯ 30 ಸಾವಿರ ಮತಗಳ ಅಂತರದಿಂದ ಸೋತರು.  ಐದು ವರ್ಷ ಮುಖ್ಯಮಂತ್ರಿಯಾದವರು ತಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿಲ್ಲವಾಗದೆ, ಕೇವಲ 70 ರಿಂದ 80 ಸ್ಥಾನಗಳಿಗೆ ಸೀಮಿತವಾಗಿದ್ದನ್ನು ನೋಡಿದರೆ ಜನರು ಇವರ ಬಗ್ಗೆ ಹೊಂದಿರುವ ಭಾವನೆಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ.  ಆದರೆ, ಇಂದು ನರೇಂದ್ರ ಮೋದಿ ನಾಯಕತ್ವವನ್ನು ರಾಜ್ಯದಲ್ಲಿ ಬಿಜೆಪಿಯನ್ನು ಜನ ಒಪ್ಪಿಕೊಂಡಿದ್ದಾರೆ.  2023ರಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತು 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ.  ಇದರಲ್ಲಿ ಎಳ್ಳಷ್ಟು ಸಂಶಯವಿಲ್ಲ.  ಕಾಂಗ್ರೆಸ್ಸಿನಲ್ಲಿ ಡಿ. ಕೆ. ಶಿವಕುಮಾರ ಮತ್ತು ಸಿದ್ಧರಾಮಯ್ಯ ಮಧ್ಯೆ ಆಂತರಿಕ ಕದನ ನಡೆಯುತ್ತಿದೆ.  ಪಂಜಾಬ ಮತ್ತು ಕರ್ನಾಟಕ ಸಿದ್ಧುಗಳ ಹಾವಳಿಯಿಂದಾಗಿ ಕಾಂಗ್ರೆಸ್ ಮನೆಗೆ ಹೋಗುತ್ತದೆ.  ಯಾರು ಸಿಎಂ ಆಗಬೇಕು ಎಂಬ ವಿಚಾರದಲ್ಲಿ ಕಾಂಗ್ರೆಸ್ಸಿಗರ ಮಧ್ಯೆ ಆಂತರಿಕ ಕದನ ನಡೆಯುತ್ತಿದೆ.  ಅವರಾರೂ ಮುಖ್ಯಮಂತ್ರಿಯಾಗುವುದಿಲ್ಲ.  ಮತ್ತೋಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ.  ಪ್ರಚಾರ ಸಭೆಯಲ್ಲಿ ಜನರ ಭಾವನೆ, ನಿರ್ಧಾರ, ಬಿಜೆಪಿಯ ಸಭೆಗಳಿಗೆ ಜನಬೆಂಬಲ ನೋಡಿ ಸೋಲುವ ಅವರಿಗೆ ಖಚಿತ ಎನಿಸಿದೆ.  ಇದಕ್ಕಾಗಿ ಕಾರಣ ಕಾರಣ ಹುಡುಕುತ್ತಿದ್ದಾರೆ.  ಈ ಹಿನ್ನೆಲೆಯಲ್ಲಿಯೇ ಬಿಜೆಪಿ ಹಣ ಹಂಚುತ್ತಿದೆ ಎಂದು ಆರೋಪಿಸುತ್ತಿದ್ದಾರೆ.  ಆದರೆ, ನಿಜಾಂಶ ಹೇಳಬೇಕೆಂದರೆ, ಹಣ ಹಂಚುವುದು, ಗೂಂಡಾಗಿರಿ ಮಾಡುವುದು, ಹೆಂಡ ಹಂಚುವುದು ಕಾಂಗ್ರೆಸ್ಸಿಗರ ಮೂಲ ಕೆಲಸವಾಗಿದೆ.  ಈ ಹಿಂದೆ ಅವರು ಮಾಡುತ್ತಿರುವುದನ್ನು ಈಗ ಅವರಿಗೆ ನೆನಪಾಗಿರಬೇಕು.  ಚುನಾವಣೆ ಸೋಲಿನ ಭೀತಿಯಿಂದಾಗಿ ಈಗ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಅವರು ಹೇಳಿದರು.

ಕೊರೊನಾ ಸಂಕಷ್ಟ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿ 130 ಕೋಟಿ ಜನರಲ್ಲಿ ಧೈರ್ಯ ತುಂಬಿ ಅಭಯ ನೀಡುವ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ.  ಭಾರತದ ಕಂಪನಿಗಳ ಮೂಲಕ ಕೊರೊನಾ ಲಸಿಕೆಗಳನ್ನು ತಯಾರಿಸುವ ಕೆಲಸ ಮಾಡಿ, ಉಚಿತ ಲಸಿಕೆಗಳನ್ನು ನೀಡುವ ಮೂಲಕ ಜನಪರ ಕೆಲಸ ಮಾಡಿದ್ದಾರೆ.  ಈಗ 100 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ದಾಖಲೆ ಮಾಡಲಾಗಿದೆ.  ಇದೆಲ್ಲ ಜನರ ಮನಸ್ಸಿನಲ್ಲಿದೆ.  ಹೀಗಾಗಿ ಈ ಎಲ್ಲ ಅಂಶಗಳನ್ನು ಇಟ್ಟುಕೊಂಡು ನಾವು ಚುನಾವಣೆಗೆ ಹೋಗುತ್ತಿದ್ದೇವೆ.  ಕಾಂಗ್ರೆಸ್ ಮುಳುಗತ್ತಿರುವ ಹಡಗು.  ಅದನ್ನು ದುರ್ಬಿನ ಹಾಕಿಕೊಂಡು ಹುಡುಕಬೇಕಾದ ಪರಿಸ್ಥಿತಿ ಇದೆ.  ಪಂಜಾಬನಲ್ಲಿನ ಸಿದ್ಧು ಮತ್ತು ಕರ್ನಾಟಕದಲ್ಲಿನ ಸಿದ್ಧು ಗಳಿಂದಾಗಿ ಎರಡೂ ಕಡೆ ಕಾಂಗ್ರೆಸ್ ಮನೆಗೆ ಹೋಗುತ್ತಿದೆ. ಶೀಘ್ರದಲ್ಲಿ ಕರ್ನಾಟಕ ಸಂಪೂರ್ಣವಾಗಿ ಕಾಂಗ್ರೆಸ್ ಮುಕ್ತವಾಗಲಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಅಲ್ಪಸಂಖ್ಯಾತರನ್ನು ಓಲೈಸಲು ಆರ್ ಎಸ್ ಎಸ್ ನ್ನು ಟೀಕಿಸುತ್ತಿದ್ದಾರೆ.  ಈ ಮೂಲಕ ಅವರನ್ನು ಓಲೈಕೆ ಮಾಡುತ್ತಿದ್ದಾರೆ.  ಆದರೆ, ಬಿಜೆಪಿಯ ಬಹಳಷ್ಟು ಸಭೆಗಳಲ್ಲಿ ಮುಸ್ಲಿಂ ಮತದಾರರೂ ಬಂದಿರುವುದು ಅಲ್ಪಸಂಖ್ಯಾತರ ಹೊಸ ದೃಷ್ಠಿಕೋನಕ್ಕೆ ಸಾಕ್ಷಿಯಾಗಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ವಿ. ಸೋಮಣ್ಣ, ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ವಿಜಯ ಜೋಶಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌