ಜೈಲಿಗೆ ಕಳುಹಿಸಲು ವ್ಯವಸ್ಥೆ ಮಾಡಲಿ ನಾನು ಹೋಗಲು ಸಿದ್ಧ- ಸಚಿವ ಸುಧಾಕರಗೆ ತಿರುಗೇಟು ನೀಡಿದ ಮಾಜಿ ಸ್ಪೀಕರ ರಮೇಶಕುಮಾರ

ವಿಜಯಪುರ: ಜೈಲಿಗೆ ಕಳುಹಿಸಲು ಅವರು ವ್ಯವಸ್ಥೆ ಮಾಡಿದರೆ ನಾನು ಹೋಗಲು ಸಿದ್ಧ ಎಂದು ಮಾಜಿ ಸ್ಪೀಕರ ರಮೇಶಕುಮಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರಿಗೆ ತಿರುಗೇಟು ನೀಡಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಮೇಶಕುಮಾರ ಅವರನ್ನು ಜೈಲಿಗೆ ಕಳುಹಿಸುವವರೆಗೂ ಸುಮ್ಮನಿರಲ್ಲ ಎಂದು ಸಚಿವ ಡಾ. ಕೆ. ಸುಧಾಕರ ಅವರ ಹೇಳಿಕೆಗೆ ವ್ಯಂಗ್ಯವಾಗಿಯೇ ಪ್ರತಿಕ್ರಿಯೆ ನೀಡಿದರು.

ನಾನೇನು ಬಿಡಬೇಕು ಅಂತ ನಾ ಹೇಳಿದಿನಾ? ಅವರ ಕೆಲಸ ಅವರು ಮುಂದುವರೆಸಲಿ.  ಜೈಲಿಗೆ ಹೊಗೋದಕ್ಕೆ ನಾನು ಸಿದ್ದವಾಗಿದ್ದೇನೆ.  ನಾನು ಈ ದೇಶದ ಪ್ರಜೆ.  ಈ ದೇಶದ ಕಾನೂನನ್ನು ಗೌರವಿಸುತ್ತೇನೆ.  ಸರಕಾರ ಅಂದಮೇಲೆ ಅವರು ಯೋಚನೆ ಮಾಡಿರುತ್ತಾರೆ.  ನನ್ನನ್ನು ಜೈಲಿಗೆ ಕಳುಹಿಸುವ ವ್ಯವಸ್ಥೆಯನ್ನು ಅವರು ಮಾಡಿದರೆ ನಾನು ಜೈಲಿಗೆ ಹೋಗಲು ಸಿದ್ಧ ಎಂದು ಅವರು ಸ್ಪಷ್ಟಪಡಿಸಿದರು.

ಡಾ. ಸುಧಾಕರ ಮತ್ತು ತಾವು ಒಂದೇ ಪಕ್ಷದಲ್ಲಿ ಇದ್ದವರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೆಲ್ಲಾ ಪಕ್ಷಗಿಕ್ಷ ಬಿಡ್ರಪ್ಪಾ.  ಅವರು ಮಾತನಾಡುವಾಗ ಗೌರವಯುತವಾಗಿ, ಯೋಚನೆ ಮಾಡಿ ಮಾತಾಡಬೇಕು.  ಸರಕಾರದಲ್ಲಿ ಇರುವವರು ಹೀಗೆ ಮಾಡ್ತಿವಿ ಅಂದ್ರೆ ಅವರ ಬಳಿ ಸಾಕ್ಷ್ಯಾಧಾರ ಇರಬೇಕು.  ಜೈಲಿಗೆ ಹೊಗೋ ಸ್ಥಿತಿ ಬಂದಾಗ ನಾನು ಹೊಗೋಕೆ ಸಿದ್ಧವಾಗಿದ್ದೇನೆ,  ನಂದೇನು ತಕರಾರಿಲ್ಲ ಎಂದು ಮಾಜಿ ಸ್ಪೀಕರ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಆರ್ ಎಸ್ ಎಸ್ ಕುರಿತು ಟೀಕಾ ಪ್ರಹಾರ ನಡೆಸುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನೊಬ್ಬ ಆರ್ಡಿನರಿ ಮನುಷ್ಯ,  ಏನೋ ಗ್ರಹಚಾರಕ್ಕೆ ರಾಜಕೀಯಕ್ಕೆ ಬಂದಿರ್ತೆವೆ,  ಜನ ನಮಗೊಂದು ಅವಕಾಶ ಕೊಟ್ಟಿರ್ತಾರೆ.  ದೊಡ್ಡ ದೊಡ್ಡ ವಿಚಾರಕ್ಕೆ ನಾವು ಮಾತಾಡೋದಿಲ್ಲ.  ಸಂಘದ ಬಗ್ಗೆ ನನಗೇನು ಅನಿಸೋದಿಲ್ಲ.  ಅದೊಂದು ಸಂಘಟನೆ,  ಅವರ ಪಾಡಿಗೆ ಅವರಿದ್ದಾರೆ,  ಹೇಳಬೇಕಾದ ಅಗತ್ಯ ಬಂದಾಗ ಹೇಳುತ್ತೇನೆಯ  ಎಲ್ಲವನ್ನು ಎಲ್ಲ ಕಡೆ ಮಾತನಾಡಲು ಬರುವುದಿಲ್ಲ.  ಅದಕ್ಕೊಂದು ವೇದಿಕೆ ಇರುತ್ತದೆ.  ನಾನೊಬ್ಬ ಶಾಸಕ.  ವಿಧಾನ ಸಭೆ ಕಲಾಪದಲ್ಲಿ ಈ ಹಿಂದೆ ಮಾತನಾಡಿದ್ದೇನೆ.  ಅದಕ್ಕೆ ಯಾರೂ ಪ್ರತಿಭಟಿಸಿಯೂ ಇಲ್ಲ.  ಪ್ರತಿರೋಧವನ್ನೂ ತೋರಿಸಿಲ್ಲ ಎಂದು ರಮೇಶಕುಮಾರ ಅವರು ತಿಳಿಸಿದರು.

 

ಬೈ ಎಲೆಕ್ಷನ್ ಪ್ರಚಾರಕ್ಕೆ ನಾಮಕಾವಾಸ್ತೆ ಬಂದ್ರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕ್ಯಾಂಪ್ ಆಫೀಸ್ ಎಲ್ಲಿ ಹೋಗಂದ್ರೆ ಹೊಗೋದು,  ಏನ್ ಹೇಳಿದ್ರೆ ಕೇಳೋದು.  ನಾನು ಮೊನ್ನೆ ಬಂದೆ,  ಹೆಚ್ಚು ಕೆಲಸ ಇದೆ ಅಂತ ನನಗೇನು ತೋಚುತ್ತಿಲ್ಲ.  ಇವತ್ತು ಕ್ಯಾಂಪ್ ಗೆ ಹೋಗಬೇಕು ಅನಕೊಂಡಿದಿನಿ.  ಹೊಗೋದಕ್ಕೆ ವ್ಯವಸ್ಥೆ ಆದರೆ ಇವತ್ತು ಅಥವಾ ನಾಳೆ ವಾಪಸ್ ಹೋಗುತ್ತೇನೆ ಎಂದು ಅವರು ತಿಳಿಸಿದರು.

 

ಬಿ. ಎಸ್. ಯಡಿಯೂರಪ್ಪ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿಲ್ಲ ಎಂದು ಹೇಳಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ಇದೊಂದು ರಾಜಕೀಯ ಹೇಳಿಕೆ ಅಷ್ಟೇ ಎಂದು ಮಾಜಿ ಸ್ಪೀಕರ ರಮೇಶಕುಮಾರ ಪ್ರತಿಕ್ರಿಯೆ ನೀಡಿದರು.

 

Leave a Reply

ಹೊಸ ಪೋಸ್ಟ್‌