ಮನಗೂಳಿ ಮಕ್ಕಳು ದೇವರ ಮುಂದೆ ಪ್ರಮಾಣ ಮಾಡಲಿ ಎಂದು ಪ್ರಜ್ವಲ ರೇವಣ್ಣ ಹೇಳಿದ್ದು ಯಾಕೆ ಗೊತ್ತಾ?

ವಿಜಯಪುರ: ಮಾಜಿ ಸಚಿವ ದಿ. ಎಂ. ಸಿ. ಮನಗೂಳಿ ಅವರ ಪುತ್ರರು ದೇವರ ಮುಂದೆ ಬಂದು ಪ್ರಮಾಣ ಮಾಡಿ ಅವರ ಆರೋಪಗಳನ್ನು ಸಾಬೀತು ಮಾಡಲಿ ಎಂದು ಹಾಸನ ಜೆಡಿಎಸ್ ಸಂಸದ ಪ್ರಜ್ವಲ ರೇವಣ್ಣ ಮನಗೂಳಿ ಸಹೋದರರಿಗೆ ಸವಾಲು ಹಾಕಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ತಮ್ಮ ಜೊತೆ ಸರಿಯಾಗಿ ನಡೆದುಕೊಂಡಿಲ್ಲ.  ಜಗಳವಾಡಿ ತಮ್ಮ ತಂದೆಗೆ ಸಚಿವ ಸ್ಥಾನ ಪಡೆದಿದ್ದೇವೆ ಎಂದು ಮನಗೂಳಿ ಸಹೋದರರು ಮಾಡಿರುವ ಆರೋಪಕ್ಕೆ ಪ್ರಜ್ವಲ ರೇವಣ್ಣ ಈ ರೀತಿ ತಿರುಗೇಟು ನೀಡಿದರು.

ಅಧಿಕಾರ ಎಂದರೆ ಮನಗೂಳಿ ಸಹೋದರರಿಗೆ ಬಟ್ಟೆ ಬದಲಿಸಿದಷ್ಟೇ ಸಲೀಸು ಎಂದು ಅವರು ಅಂದಕೊಂಡಿದ್ದಾರೆ.  ಕಾಂಗ್ರೆಸ್ಸಿಗೆ ಹೋದರೆ ಎಲ್ಲ ಸಮಾಜದವರು ತಮಗೆ ಓಟು ಹಾಕುತ್ತಾರೆ.  ಗೆದ್ದು ಮತ್ತೆ ಅಧಿಕಾರದಲ್ಲಿರಬಹುದು ಎಂದು ಕೊಂಡಿದ್ದಾರೆ.  ಇಡೀ ಸಿಂದಗಿ ತಾಲೂಕಿನ ಜನತೆ ಅವರ ಗುಣಗಳನ್ನು ಈಗ ತಿಳಿದುಕೊಂಡಿದ್ದಾರೆ.‌  ಯಾವುದೇ ಕಾರಣಕ್ಕೂ ಅಶೋಕ ಮನಗೂಳಿ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಗೆಲ್ಲುವುದಿಲ್ಲ ಎಂದು ಅವರು ಭವಿಷ್ಯ ನುಡಿದರು.

ಅಶೋಕ ಮನಗೂಳಿ ಅವರ ಪರ ಯಾರೇ ಬಂದು ಪ್ರಚಾರ ಮಾಡಿದರೂ ಅವರು ಗೆಲ್ಲುವುದಿಲ್ಲ. ಹೀಗಾಗಿ ಅವರು ಅಧಿಕಾರದ ಆಸೆಯನ್ನು ಬಿಟ್ಟು ಮನೆಯಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು ಎಂದು ಅವರು ವ್ಯಂಗ್ಯವಾಡಿದರು.

ಸಿಂದಗಿ ಪುರಸಭೆ ಅಧ್ಯಕ್ಷ ಶಾಂತವೀರ ಮನಗೂಳಿ ಅವರನ್ನು ಜೆಡಿಎಸ್ ನಿಂದ ಉಚ್ಛಾಟನೆ ಮಾಡಿದ್ದೇವೆ. ಶಾಂತವೀರ ಮನಗೂಳಿ ಅವರು ಬಹುಮತ ತೋರಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಜೆಡಿಎಸ್ ನ ಯಾರೊಬ್ಬ ಪುರಸಭೆ ಸದಸ್ಯರು ಅವರೊಂದಿಗೆ ಇಲ್ಲ. ಅವರು ಹೇಳಿರುವುದು‌ ಎಲ್ಲಾ ಸುಳ್ಳು. ಈಗಾಗಲೇ ಪುರಸಭೆ ಜೆಡಿಎಸ್ ಸದಸ್ಯರು ನಾವು ಶಾಂತವೀರ ಮನಗೂಳಿ ಅವರ ಜೊತೆ ಇಲ್ಲ. ನಾವು ಜೆಡಿಎಸ್ ಪಕ್ಷದೊಂದಿಗೆ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಂಸದರು ತಿಳಿಸಿದರು.

ದಿ. ಮನಗೂಳಿ ಅವರ ಪುತ್ರರು ಸುಳ್ಳು ಹೇಳುತ್ತಿದ್ದಾರೆ. ಅ. 30ನೇ ತಾರೀಖಿನವರೆಗೆ ಎಷ್ಟು ಸುಳ್ಳು ಹೇಳುತ್ತಾರೋ ಹೇಳಲಿ. ಆ ಬಳಿಕ ಅವರು ಮನೆಗೆ ಹೋಗುತ್ತಾರೆ ಎಂದು ಅವರು ಭವಿಷ್ಯ ನುಡಿದರು.

ಜೆಡಿಎಸ್ ತಮ್ಮನ್ನು ಸರಿಯಾಗಿ ನೋಡಿಕೊಂಡಿಲ್ಲ. ಜಗಳ ಮಾಡಿ ತಮ್ಮ ತಂದೆಯವರಿಗೆ ಸಚಿವ ಸ್ಥಾನ ಪಡೆದಿದ್ದೇವೆ ಎಂದು ಮನಗೂಳಿ ಅವರು ಮಾಡಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಮಾತನ್ನು ಅವರು ಯಾವುದಾದರೂ ದೇವರ ಮುಂದೆ ಬಂದು ಪ್ರಮಾಣ ಮಾಡಲಿ. ಆಗ ಈ ವಿಚಾರ ಒಪ್ಪಿಕೊಳ್ಳೋಣ. ಆ ಮಾತನ್ನು ಅವರು ಆಡಬಾರದು. ಹಾಗಿದ್ದರೆ ಟಿಕೆಟ್ ನೀಡುವನು ಕೂಡ ಇವರು ಹೊಡೆದುಕೊಂಡಿದ್ದಾರಾ? ಒಂದು ಕಾಲದಲ್ಲಿ ಜೆಡಿಎಸ್ ನ ಎಲ್ಲರೂ ಕೂಡ ಸಿಂದಗಿಯಲ್ಲಿ ಟಿಕೆಟ್ ಕೊಡಬೇಡಿ. ಮನಗೂಳಿ ಸೋಲುತ್ತಾರೆ ಎಂದು ಹೇಳಿದ್ದರು. ಆದರೆ ಯಾರ ಮಾತನ್ನು ಕೇಳದೆ ದೇವೇಗೌಡರು ಮನಗೂಳಿ ಅವರ ಮನೆಗೆ ಹೋಗಿ ಟಿಕೇಟ್ ಕೊಟ್ಟದ್ದರು. ಅದನ್ನು ಮರೆತುಬಿಟ್ರಾ? ಇದನ್ನೆಲ್ಲವನ್ನು ಮಾತನಾಡುವುದನ್ನು ಬಿಟ್ಟು ಸರಿಯಾಗಿ ಚುನಾವಣೆ ಮಾಡಬೇಕು ಇಲ್ಲದಿದ್ದರೆ ನಾನು ತಕ್ಕ ಉತ್ತರ ನೀಡುತ್ತೇನೆ ಎಂದು ಹಾಸನ ಸಂಸದ ಪ್ರಜ್ವಲ ರೇವಣ್ಣ ಎಚ್ಚರಿಕೆ ನೀಡಿದರು.

ಅವರು ಏನೇ ದೂರಬಹುದು. ಇಡೀ ರಾಜ್ಯದ ಜನ ಇವರನ್ನು ನೋಡಿದ್ದಾರೆ. ಸಿಂದಗಿ ಮತಕ್ಷೇತ್ರದಲ್ಲಿ 10 ಮನೆಗಳಲ್ಲಿ ಕೇಳಿದರೆ ಎಂಟು ಮನೆಗಳ ಜನ ಅವರನ್ನು ಛೀ ಥೂ ಎಂದು ಮಾತನಾಡುತ್ತಿದ್ದಾರೆ. ಏಳು ಬಾರಿ ಟಿಕೆಟ್ ಕೊಟ್ಟು ಎರಡು ಬಾರಿ ಅವರು ಗೆದ್ದಾಗ ಎರಡೂ ಸಲ ಅವರನ್ನು ಮಂತ್ರಿಯನ್ನಾಗಿ ಮಾಡಿದ್ದೇವೆ. ರೂ. 920 ಕೋ. ಅನುದಾನ ನೀಡಿದ್ದೇವೆ. ಆ ಅನುದಾನದಲ್ಲಿ ಅವರು ಯಾವ ರೀತಿಯ ವೃದ್ಧಿ ಮಾಡಿದರೆ ಎಂಬುದನ್ನು ನಾವು ಪ್ರಚಾರಕ್ಕೆ ಬಂದಾಗ ತಿಳಿಯಿತು ಎಂದು ಪ್ರಜ್ವಲ ರೇವಣ್ಣ ಕಿಡಿ ಕಾರಿದರು.

ಇಂಥ ಸಂದರ್ಭದಲ್ಲಿ ಅವರು ಆಡುವ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. ಆರೋಪಗಳಿಗೆ ನಾವು ಪ್ರಚಾರ ಸಂದರ್ಭದಲ್ಲಿ ಪ್ರತ್ಯುತ್ತರ ನೀಡಿದರೆ ಅವರಿಗಿರುವ ವರ್ಚಸ್ಸು ಕಡಿಮೆಯಾಗುತ್ತದೆ. ಅವರು ಆರೋಪ ಮಾಡುವುದಾದರೆ ಮಾಡಲಿ. ನಾವು ಕೆದಕುವುದಿಲ್ಲ. ಅವರೂ ಕೆದಕುವುದು ಬೇಡ ಎಂದು ಪ್ರಜ್ವಲ ರೇವಣ್ಣ ಹೇಳಿದರು.

 

Leave a Reply

ಹೊಸ ಪೋಸ್ಟ್‌