ಕಿತ್ತೂರು ಕರ್ನಾಟಕ ನಾಮಕರಣಕ್ಕೆ ನಿರ್ಧಾರ- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

ಬೆಳಗಾವಿ: ಮುಂಬೈ-ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ನಾಮಕರಣ ಮಾಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿದೆ.  ಆದ್ದರಿಂದ ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಘೋಷಿ,ಸಿದ್ದಾರೆ. 

ಬೆಳಗಾವಿ ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿರುವ ಎರಡು ದಿನಗಳ ಕಿತ್ತೂರು ಉತ್ಸವ-2021 ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂಬೈ-ಕರ್ನಾಟಕ ಪ್ರಾಂತ್ಯವನ್ನು ಕಿತ್ತೂರು-ಕರ್ನಾಟಕ ಎಂದು ಘೋಷಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ‌ಬೊಮ್ಮಾಯಿ ಅವರು ಜನರ ಕರತಾಡನ ಮಧ್ಯೆ ಪ್ರಕಟಿಸಿದರು.

ರಾಜ್ಯ ಮಟ್ಟದ ಉತ್ಸವ

ಕಿತ್ತೂರು ಉತ್ಸವವನ್ನು ರಾಜ್ಯ ಮಟ್ಟದ ಉತ್ಸವವಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಕೂಡಲೇ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಿತ್ತೂರು ಜ್ಯೋತಿಯು ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಸಂಚರಿಸುತ್ತಿತ್ತು. ಅದೇ ರೀತಿ ಮುಂದಿನ ಉತ್ಸವ ಸಂದರ್ಭದಲ್ಲಿ ವೀರಜ್ಯೋತಿ ರಾಜ್ಯದಾದ್ಯಂತ ಸಂಚರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಆದೇಶವನ್ನು ಸಿಎಂ ಈ ಸಂದರ್ಭದಲ್ಲಿ ನೀಡಿದರು.  ಕಿತ್ತೂರು ‌ಉತ್ಸವದ ಆರಂಭಿಕ‌ ದಿನಗಳನ್ನು ಮೆಲುಕು ಹಾಕಿದ‌ ಮುಖ್ಯಮಂತ್ರಿಗಳು, ಇತ್ತೀಚಿನ ದಿನಗಳಲ್ಲಿ ವೇದಿಕೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ.  ಕಿತ್ತೂರು ಚೆನ್ನಮ್ಮ ಝಾನ್ಸಿಯ ರಾಣಿಗಿಂತ ನಲವತ್ತು ವರ್ಷಗಳ ಮುಂಚೆಯೇ ಸ್ವಾತಂತ್ರ್ಯಕ್ಕಾಗಿ ಕತ್ತಿ ಝಳಪಿಸಿದಳು. ಈ ಐತಿಹಾಸಿಕ ಸಾಧನೆಯನ್ನು ಜಗತ್ತಿಗೆ ಸಾರುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಪ್ರಪ್ರಥಮ ಮಹಿಳೆ ಎಂಬುದನ್ನು ಸಾಬೀತು ಪಡಿಸಬೇಕಿದೆ.  ಬ್ರಿಟೀಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಕಿತ್ತೂರು ರಾಣಿ ಚೆನ್ನಮ್ಮ ಇಂದಿನ ಯುವ ಸಮುದಾಯ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.  ಸಂಗೊಳ್ಳಿ ರಾಯಣ್ಣ ಹಾಗೂ ಚೆನ್ನಮ್ಮ ಅವರದು ತಾಯಿ-ಮಗನ‌ ಸಂಬಂಧ.  ಬ್ರಿಟೀಷರ ಕುತಂತ್ರಕ್ಕೆ ರಾಯಣ್ಣ ಸೆರೆಸಿಕ್ಕಾಗ‌ ಚೆನ್ನಮ್ಮ ಅಧೀರಳಾಗುತ್ತಾಳೆ ಎಂದು ಅವರು ಇತಿಹಾಸ ಮೆಲಕು ಹಾಕಿದರು.

ಸತ್ಯ, ನ್ಯಾಯ‌ ಹಾಗೂ ದೇಶಕ್ಕಾಗಿ ಹೋರಾಡಲು ನಾವು ಸಂಕಲ್ಪ ಮಾಡಬೇಕಿದೆ. ದೇಶವನ್ನು ಆಂತರಿಕ ಮತ್ತು ‌ಬಾಹ್ಯಶಕ್ತಿಗಳಿಂದ ರಕ್ಷಿಸಬೇಕಿದೆ. ಈ‌ ನಿಟ್ಟಿನಲ್ಲಿ ‌ಶ್ರಮಿಸುತ್ತಿರುವ ಪ್ರಧಾನಮಂತ್ರಿಗಳು ದೇಶವನ್ನು ಸಶಕ್ತವಾಗಿಸಲು ಶ್ರಮಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಿತ್ತೂರು ಮಾಸ್ಟರ್ ಪ್ಲ್ಯಾನ್ ಗೆ ಹೆಚ್ಚಿನ ಅನುದಾನ

 

ಕಿತ್ತರೂ ಅಭಿವೃದ್ಧಿ ಪ್ರಾಧಿಕಾರದ ಮಾಸ್ಟರ್ ‌ಪ್ಲ್ಯಾನ್ ಗೆ ಒಟ್ಟಾರೆ ರೂ. 200 ಕೋ. ಅನುದಾನ ನೀಡಬೇಕು ಎಂಬ ಬೇಡಿಕೆ ಇದೆ.  ಮುಂದಿನ ಬಜೆಟ್ ನಲ್ಲಿ ಪ್ರಾಧಿಕಾರಕ್ಕೆ ಇನ್ನು ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ಮೀಸಲಾತಿ- ಕಾನೂನು ‌ಪರಿಶೀಲಿಸಿ ಸೂಕ್ತ ಕ್ರಮ

ಮೀಸಲಾತಿ ಒದಗಿಸಲು ‌ಹಾಗೂ ಪ್ರಮಾಣ ಹೆಚ್ಚಿಸಲು ಬೇಡಿಕೆಗಳು‌ ಕೇಳಿಬಂದಿವೆ.  ಇದಕ್ಕೆ ಸಂಬಂಧಿಸಿದಂತೆ ಅನೇಕ ಕಾನೂನು ‌ತೊಡಕುಗಳು ಇರುವುದರಿಂದ ಅವುಗಳನ್ನು ಗಮನದಲ್ಲಿಟ್ಟುಕೊಂಡು ‌ಯಾವ ರೀತಿಯ ‌ಕ್ರಮ ಕೈಗೊಳ್ಳಬೇಕು ಎಂಬುದನ್ನು ಸರಕಾರ ಪರಿಶೀಲಿಸುತ್ತಿದೆ.  ಕಾನೂನು ಇತಿಮಿತಿಗಳನ್ನು ಸಂಪೂರ್ಣವಾಗಿ ಅಧ್ಯಯನ ಕೈಗೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಬಸವರಾಜ ಬೊಮ್ಮಾಯಿ ಅವರು ವೇದಿಕೆಯ ಮೇಲಿದ್ದ ಶ್ರೀಗಳಿಗೆ ಭರವಸೆಯನ್ನು ನೀಡಿದರು.

ಸಂಗೊಳ್ಳಿ ಸೈನಿಕ ಶಾಲೆಯು ಕೂಡ ಮುಕ್ತಾಯ ಹಂತದಲ್ಲಿದೆ.  ರಕ್ಷಣಾ ಇಲಾಖೆಯ ಜತೆ ಚರ್ಚಿಸಿ ಶಾಲೆಯನ್ನು ರಾಜ್ಯ‌ ಸರಕಾರದ‌ ವ್ಯಾಪ್ತಿಗೆ ಸೇರಿಸಿ ಉನ್ನತ ಮಟ್ಟದ ಮಿಲಿಟರಿ ಶಾಲೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯ ತಿಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ವ್ಯವಹಾರ, ಗಣಿ ಮತ್ತು ಕಲ್ಲಿದ್ದಲು ಇಲಾಖೆಯ ಸಚಿವರಾದ ಪ್ರಹ್ಲಾದ ಜೋಶಿ ಮಾತನಾಡಿ, ಸ್ವಾತಂತ್ರ್ಯದ ಕಿಡಿ ಹೊತ್ತಿಸಿದ ಕಿತ್ತೂರು ಚೆನ್ನಮ್ಮಳಿಗೆ ಸಿಗಬೇಕಾದ ಮಾನ್ಯತೆ ‌ಇತಿಹಾಸದಲ್ಲಿ‌ ದೊರಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡj, ದೇಶದ‌ ಸ್ವಾತಂತ್ರ್ಯದ ಕಹಳೆ ಊದಿದ ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಸವಿನೆನಪಿನಲ್ಲಿ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವ ಎಂದು ಘೋಷಿಸಬೇಕು; ಮುಂಬೈ‌ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಎಂದು ಘೋಷಿಸಬೇಕು;  ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನಾನಾ ವಿಭಾಗಗಳನ್ನು ಕಿತ್ತೂರಿನಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಬೇಕು.  ಕಿತ್ತೂರು ಉತ್ಸವವನ್ನು ರಾಜ್ಯ‌ ಉತ್ಸವವೆಂದು ಘೋಷಿಸಿ ಪ್ರತಿವರ್ಷ ರೂ. 2 ಕೋ. ‌ಅನುದಾನ‌ ನೀಡಬೇಕು ಎಂದು ಶಾಸಕ‌ ಮಹಾಂತೇಶ ದೊಡ್ಡಗೌಡರ ಒತ್ತಾಯಿಸಿದರು.  ಅಲ್ಲದೇ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ರೂ. 50 ಕೋ. ‌ಅನುದಾನ ಒದಗಿಸಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.  ಒಟ್ಟಾರೆ ರೂ. 200 ಕೋ. ಅನುದಾನಕ್ಕೆ ಮನವಿ ಮಾಡಿಕೊಳ್ಳಲಾಗಿತ್ತು.  ಆದ್ದರಿಂದ ‌ಮುಂದಿನ‌ ಬಜೆಟ್ನಲ್ಲಿ ರೂ. 150 ಕೋಟಿ ಅನುದಾನ ಕಲ್ಪಿಸಬೇಕು ಎಂದು ಶಾಸಕ ದೊಡ್ಡಗೌಡರ ಒತ್ತಾಯಿಸಿದರು.

 

ಕಿತ್ತೂರಿನ ರಾಜಗುರು ಸಂಸ್ಥಾನಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಜಗದ್ಗುರು ಮಹಾಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ಹರಕ್ಷೇತ್ರದ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ವಚನಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು ಈ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.

ಬೆಳ್ಳಿಹಬ್ಬದ ಪ್ರಯುಕ್ತ ಸನ್ಮಾನ

ಕಿತ್ತೂರು ಉತ್ಸವದ ಬೆಳ್ಳಿಹಬ್ಬದ ಪ್ರಯುಕ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಹಾಗೂ ಪ್ರಗತಿಪರ ರೈತ ಮಹಿಳೆಯಾಗಿರುವ ರಾಯಚೂರು ಜಿಲ್ಲೆಯ ಕವಿತಾಳದ ಕವಿತಾ‌ ಮಿಶ್ರಾ ಹಾಗೂ ರಾಣಿ ಚನ್ನಮ್ಮನ ವಂಶಸ್ಥರಾದ ಬಾಳಾಸಾಹೇಬ್ ದೇಸಾಯಿ(ಕಿತ್ತೂರಕರ) ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಡಾ. ಸಂತೋಷ ಹಾನಗಲ ಅವರು ರಚಿಸಿದ ಭಾರತದ ಸ್ವಾತಂತ್ರ್ಯದ ‌ಬೆಳ್ಳಿಚುಕ್ಕಿ ಕಿತ್ತೂರು ರಾಣಿ ಚೆನ್ನಮ್ಮ ಕೃತಿಯನ್ನು ಮುಖ್ಯಮಂತ್ರಿ ‌ಬಸವರಾಜ‌ ಬೊಮ್ಮಾಯಿ ಬಿಡುಗಡೆ ಮಾಡಿದರು.  ಅಲ್ಲದೇ, ಕಿತ್ತೂರು ಪಟ್ಟಣದಲ್ಲಿ ‌ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳಿಗೆ ಚಾಲನೆ ನೀಡಿದರು.

 

ಬೆಳಗಾವಿ ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಅವರು ಅತಿಥಿಗಳಿಗೆ ಪುಸ್ತಕ ನೀಡುವ ಮೂಲಕ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಅರಣ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ, ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಕರ್ನಾಟಕತ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ‌ ಕುಮಠಳ್ಳಿ, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ರಾಮದುರ್ಗ ಶಾಸಕ‌ ಮಹಾದೇವಪ್ಪ ಯಾದವಾಡ, ಬೈಲಹೊಂಗಲ ಶಾಸಕ ಮಹಾಂತೇಶ‌ ಕೌಜಲಗಿ ಮುಂತಾದವರು ಉಪಸ್ಥಿತರಿದ್ದರು.  ಪ್ರಾದೇಶಿಕ ‌ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಉತ್ಸವದ ಮುಖ್ಯ ವೇದಿಕೆಯಲ್ಲಿ ಬೆಳಿಗ್ಗೆಯಿಂದಲೇ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಂಪ್ರದಾಯಿಕವಾಗಿ ನಡೆದ ಧ್ವಜಾರೋಹಣ, ವೀರಜ್ಯೋತಿ ಸ್ವಾಗತ, ಕಲಾವಾಹಿನಿ ಕಲಾ ತಂಡಗಳ ಮೆರವಣಿಗೆಯು ವಿಜೃಂಭಣೆಯಿಂದ ನಡೆದವು.

 

Leave a Reply

ಹೊಸ ಪೋಸ್ಟ್‌