ಎಚ್. ಡಿ. ದೇವೇಗೌಡ ಕೋಮುವಾದಿಗಳನ್ನು ದೂರ ಇಡಲು ಹೋರಾಟ ಮಾಡುತ್ತಿರುವ ವ್ಯಕ್ತಿ- ಮಾಜಿ ಸಚಿವ ಎಚ್. ಡಿ. ರೇವಣ್ಣ

ವಿಜಯಪುರ: ರಾಜ್ಯ ಮತ್ತು ದೇಶದಲ್ಲಿ ಕೋಮವಾದಿಗಳನ್ನು ದೂರ ಇಡಲು ಹೋರಾಟ ಮಾಡುತ್ತಿರುವ ವ್ಯಕ್ತಿ ಯಾರಾದರೂ ಇದ್ದಲಿ ಅದು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಎಂದು ಮಾಜಿ ಸಚಿವ ಎಚ್. ಡಿ. ರೇವಣ್ಣ ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಎಚ್. ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮನಸ್ಸು ಮಾಡಿದ್ದರೆ ಅಧಿಕಾರದಲ್ಲಿ ಮುಂದುವರೆಯಬಹುದಾಗಿತ್ತು.  ಅಂದು ಪ್ರತಿಪಕ್ಷದಲ್ಲಿದ್ದ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಮುಂದುವರೆಯಿರಿ.  ನಾವು ನಿಮ್ಮ ಪರವಾಗಿ ಕೈ ಎತ್ತುತ್ತೇವೆ ಎಂದು ಚೀಟಿ ಬರೆದು ಎಚ್. ಡಿ. ದೇವೇಗೌಡ ಅವರಿಗೆ ಕಳುಹಿಸಿದ್ದರು.  ಆದರೆ, ದೇವೇಗೌಡರು ಅಧಿಕಾರಕ್ಕಾಗಿ ತಮ್ಮ ತತ್ವಾದರ್ಶ ಮತ್ತು ಸಿದ್ಧಾಂತಗಳೊಂದಿಗೆ ರಾಜಿಯಾಗಲಿಲ್ಲ.  ಅಲ್ಲದೇ, ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ ಕೇಸರಿ ದೇವೇಗೌಡರಿಗೆ ಕ್ಷಮೆ ಕೇಳಿದರೆ ಪ್ರಧಾನಿಯಾಗಿ ಮುಂದುವರೆಸುತ್ತೇವೆ ಎಂದು ಹೇಳಿದ್ದರು.  ಆದರೆ, ಎಚ್. ಡಿ. ದೇವೇಗೌಡ ಅವರು ನಾನು ಈ ಕುರ್ಚಿಯಲ್ಲಿರುವುದು ದೇಶದ 120 ಕೋಟಿ ಜನರಿಗಾಗಿ.  ನಿಮಗಾಗಿ ಅಲ್ಲ ಎಂದು ರಾಜೀನಾಮೆ ಕೊಟ್ಟು ಹೊರ ಬಂದರು ಎಂದು ಅವರು ಹೇಳಿದರು.

ದಿ. ಎಂ. ಮನಗೂಳಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಅವರಿಗೆ ಮತ ಹಾಕಬೇಕು ಎಂದು ಸಿಂದಗಿ ಮತದಾರರಲ್ಲಿ ಮನವಿ ಮಾಡಿದ ಅವರು, ಕಾಂಗ್ರೆಸ್, ಅಶೋಕ ಮನಗೂಳಿ ಮತ್ತು ಬಿಜೆಪಿಯನ್ನು ಜನತೆ ದೂರ ಇಡಬೇಕು.  ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ಅವರಿಷ್ಟಕ್ಕೆ ಬಂದಂತೆ ಅವರು, ಇವರಿಷ್ಟಕ್ಕೆ ಬಂದಂತೆ ಇವರು ಹೊಡೆದುಕೊಳ್ಳುತ್ತಾರೆ ಎಂದು ಎಚ್. ಡಿ. ರೇವಣ್ಣ ಕಿಡಿ ಕಾರಿದರು.

ಜೆಡಿಎಸ್ ಅಧಿಕಾರದಲ್ಲಿದ್ದಾಗ ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಸಿಂದಗಿ ತಾಲೂಕಿನ 21 ಸಾವಿರ ರೈತರಿಗೆ ರೂ. 130 ಕೋ. ಸಾಲ ಮನ್ನಾ ಮಾಡಿದೆ.  ಸಿಂದಗಿ ತಾಲೂಕಿನ ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹೊಂದಿದ್ದ ರೂ. 1 ಲಕ್ಷ, ರೂ. 2 ಲಕ್ಷ ಸಾಲವನ್ನು ಮನ್ನಾ ಮಾಡಿದ್ದು ಯಾರು? ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಾಡಿದ್ರಾ? ಎಂದು ಪ್ರಶ್ನಿಸಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳ ಸಾವಿರಾರು ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದು ಅವರು ಹೇಳಿದರು.

ಮೋದಿ ಪ್ರಧಾನಿಯಾದರೆ ರಾಜೀನಾಮೆ ನೀಡುವುದಾಗಿ ಹೇಳಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ರಾಜೀನಾಮೆ ನೀಡಲು ಮುಂದಾಗಿದ್ದರು.  ಆಗ, ರಾಜಕೀಯದಲ್ಲಿ ಇದೆಲ್ಲ ಬೇಡ ಎಂದು ಪ್ರಧಾನಿಯೇ ಹೇಳಿದ್ದರು.  ಮೋದಿ ಅವರಿಗೆ ದೇವೇಗೌಡರ ಮೇಲೆ ಅಪಾರ ಗೌರವವಿದೆ ಎಂದು ಅವರು ತಿಳಿಸಿದರು.

ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಡಿ ರಾಜಕೀಯ ಮಾಡುತ್ತ ಬಂದಿದ್ದಾರೆ ಎಂದು ತಿಳಿಸಿದ ಮಾಜಿ ಸಚಿವ ಎಚ್. ಡಿ. ರೇವಣ್ಣ ಅವರು, ಈಗ ರಾಜ್ಯ ಮತ್ತು ದೇಶದಲ್ಲಿ ಇರುವದು ಡುಪ್ಲಿಕೇಟ್ ಕಾಂಗ್ರೆಸ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಸಿಂದಗಿ ಬೈ ಎಲೆಕ್ಷನ್ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌