ಜಾತಿ ಹೆಸರಲ್ಲಿ ವಿಭಜನೆಯಾದರೆ 25 ವರ್ಷಗಳಲ್ಲಿ ದೇಶದ ಸ್ಥಿತಿ ಗಂಭೀರವಾಗಲಿದೆ- ಬಸವರಾಜ ರಾಯರೆಡ್ಡಿ

ವಿಜಯಪುರ- ಜಾತಿ ಆಧಾರದಲ್ಲಿ ದೇಶ ವಿಭಜನೆಯಾಗುತ್ತಿದೆ. ಇದು ಇದೇ ರೀತಿ ಮುಂದುವರೆದರೆ ಮುಂದಿನ 20-25 ವರ್ಷಗಳ ನಂತರ ಭಾರತದ ಸ್ಥಿತಿ ಗಂಭೀರವಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ವಿಜಯಪುರ ನಗರದ ಎಂ. ಬಿ. ಪಾಟೀಲ್ ನಗರದಲ್ಲಿ ಡಾ. ಮಹಾಂತೇಶ ಬಿರಾದಾರ ಅವರ ಮನೆಯಲ್ಲಿ ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಇಂದು ಜಾತಿ, ಉಪಜಾತಿ ಮೂಲಕ ಆಳುವ ಪಕ್ಷಗಳೇ ಜನರನ್ನು ವಿಭಜನೆ ಮಾಡುತ್ತಿವೆ. ಆರಂಭದಲ್ಲಿ ಇದು ನಮಗೆ ಸುಂದರವಾಗಿ ಕಂಡರೂ ಮುಂಬರುವ ದಿನಗಳಲ್ಲಿ ಇದರ ಖಂಡಿತವಾಗಿಯೂ ಇದರ ದುಷ್ಪರಿಣಾಮವನ್ನು ಎಲ್ಲರೂ ಎದುರಿಸುತ್ತೇವೆ ಎಂದು ಹೇಳಿದರು.

ಸಿದ್ದರಾಮಯ್ಯ ಮತ್ತು ವಿಜಯಪುರ ಜಿಲ್ಲೆಯವರೇ ಆದ ಜಲಸಂಪನ್ಮೂಲ ಖಾತೆ ಮಾಜಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಮಹಿಳಾ ವಿವಿಗೆ ಅಕ್ಕಮಹಾದೇವಿ ಮರುನಾಮಕರಣ ಮಾಡಲು ತಿಳಿಸಿದಾಗ ಮರುವಿಚಾರ ಮಾಡದೆ ನಾಮಕಾರಣ ಮಾಡಿದೇವು. ನಾಮಕರಣ ಮುಖ್ಯವಲ್ಲ. ಆದರೆ ಆ ಶಿವಶರಣೆ ಆದರ್ಶ ಮಹಿಳೆ ವಿಚಾರಗಳು ಸದಾ ನಮ್ಮ ಮಹಿಳೆಯರಿಗೆ ಸ್ಮರಣೆ ಮಾಡುವ ದೃಷ್ಟಿಯಿಂದ ಇದನ್ನು ಮಾಡಲಾಯಿತು ಎಂದು ಅವರು ಹೇಳಿದರು.

ಅದೇ ರೀತಿ ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಬೇಕೆಂಬುದು ನನ್ನ ಆಶಯ ಇತ್ತು. ಆದರೆ ಅನಿವಾರ್ಯ ಕಾರಣಗಳಿಂದ ಆಗಲಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ ಹಲವಾರು ಮಹನೀಯರು ಮಾನವ ಕುಲಕ್ಕೆ ಸಾರಿದ ಸಂದೇಶಗಳನ್ನು ಮುಂದುವರೆಸುವದು ಮತ್ತು ಶರಣರ ತತ್ವ, ಆದರ್ಶಗಳನ್ನು ಉಳಿಸುವ ಕಾರ್ಯ ಮಾಡಬೇಕಿದೆ ಎಂದು ಮಾಜಿ ಸಚಿವ ಅವರು ಹೇಳಿದರು.

ಅಂದಿನ ಜಲಸಂಪನ್ಮೂಲ ಸಚಿವರಾಗಿದ್ದ ಎಂ. ಬಿ. ಪಾಟೀಲ ಅವರು ವಿಜಯಪುರ ಜಿಲ್ಲೆಯನ್ನು ನಂದವನವನ್ನಾಗಿ ಮಾರ್ಪಡಿಸಿದ್ದಾರೆ. ಕೆರೆ, ಬಾಂದಾರ್ಗಳು ಮತ್ತು ಕಾಲುವೆಗಳ ಮೂಲಕ ಜಮೀನುಗಳಿಗೆ ನೀರು ಹರಿಸುವದ ಮೂಲಕ ರೈತರಿಗೆ ಒಳ್ಳೆಯದನ್ನೇ ಮಾಡಿದ್ದಾರೆ. ರೈತರ ಪರವಾಗಿ ಅವರು ಸದಾ ಧ್ವನಿ ಎತ್ತಿದ್ದಾರೆ ಎಂದು ಬಸವರಾಜ ರಾಯರೆಡ್ಡಿ ಹೇಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ, ಈ ಭಾಗದಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಮಾಡುವ ಒತ್ತಡ ಇತ್ತು. ಸಿದ್ದರಾಮಯ್ಯ ಅವರಿಗೆ ಹೇಳಿ ರಾಜ್ಯ ಸರಕಾರದಿಂದ ಅಧೀಕೃತವಾಗಿ ಜಯಂತಿ ಆಚರಣೆಗೆ ಕ್ರಮ ಕೈಗೊಳ್ಳಲಾಯಿತು. ವಿಜಯಪುರ ಜಿಲ್ಲೆಗೆ ಎಂ. ಬಿ. ಪಾಟೀಲ ಅವರಿಂದ ನೀರಾವರಿ ಯೋಜನೆಗಳು ಯಶಸ್ವಿಯಾಗಿವೆ. ಅದರಂತೆ ರಾಜ್ಯದಲ್ಲಿ ಕೂಡ ಅವರು ಸಚಿವರಾಗಿದ್ದಾಗ ನಾನಾ ನೀರಾವರಿ ಯೋಜನೆಗಳನ್ನು ರೂಪಿಸಿ, ಕಾರ್ಯಗತ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

 

ಮಾಜಿ ಸಚಿವ ಎಚ್. ಎಂ. ರೇವಣ್ಣ ಮಾತನಾಡಿ, ರಾಮಲಿಂಗಾರೆಡ್ಡಿ ಮತ್ತು ನನ್ನ ಗೆಳೆತನ 50 ವರ್ಷಗಳಷ್ಟು ಹಳೆಯದ್ದಾಗಿದೆ. ಅವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದಾರೆ. ಉತ್ತರ ಕರ್ನಾಟಕದ ಜನ ಬಾಂಧವ್ಯಕ್ಕೆ ಹೆಚ್ಚು ಒತ್ತು ನೀಡುತ್ತಾರೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ವಿಜಯಪುರದಲ್ಲಿ ಸಮಾವೇಶ ನಡೆಸಲು ಉದ್ದೇಶಿಸಲಾಗಿದ್ದು, ಆ ಸಮಾವೇಶಕ್ಕಾಗಿ ತಾವು ತನು, ಮನ, ಧನದಿಂದ ಕೈಜೋಡಿಸಿ, ಯಶಸ್ವಿಗೊಳಿಸುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಮುಖಂಡರಾದ ಪ್ರಶಾಂತ ಹಿರೇದೇಸಾಯಿ ಜೈನಾಪುರ, ಸೋಮನಾಥ ಕಳ್ಳಿಮನಿ, ಈರಣ್ಣ ಕೊಪ್ಪದ, ಡಾ. ಗಂಗಾಧರ ಸಂಬಣ್ಣಿ, ಶಿವಾನಂದ ಹೊನವಾಡ, ಸುರೇಶ ದೇಸಾಯಿ, ಬಸನಗೌಡ ಪಾಟೀಲ ಚಬನೂರ, ವಿಠ್ಠಲ ತುಳಸಿಗೇರಿ, ಸುರೇಶ ಗೊಣಸಗಿ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌