ಗುಲಾಂ ನಬಿ ಆಜಾದರನ್ನು ಎಐಸಿಸಿ ಅಧ್ಯಕ್ಷರಾಗಿ ನೇಮಿಸಲಿ- ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಸಚಿವ ಗೋವಿಂದ ಕಾರಜೋಳ ಸವಾಲು

ವಿಜಯಪುರ: ಕಾಂಗ್ರೆಸ್ಸಿಗೆ ನಿಜವಾಗಿಯೂ ಅಲ್ಪಸಂಖ್ಯಾತರ ಮೇಲೆ ಕಾಳಜಿ ಇದ್ದರೆ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ನೇಮಿಸಬೇಕು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋನಿಯಾ ಗಾಂಧಿ ಮತ್ತು ಸಂಸದ ರಾಹುಲ ಗಾಂಧಿ ಅವರಿಗೆ ಸವಾಲು ಹಾಕಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು,: ಚುನಾವಣೆ ಬಂದಾಗ ಕಾಂಗ್ರೆಸ್ ನಾಯಕರು ದೀನ-ದಲಿತರ ಬಗ್ಗೆ ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಾರೆ.  ಬಿಜೆಪಿ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ.  ಆದರೆ, ನಿಜವಾಗಿಯೂ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್.  ಹಿರಿಯ ನಾಯಕರಾದ ಗುಲಾಂ ನಬಿ ಆಜಾದ ಅವರು ಸಂಜಯ ಗಾಂಧಿ ಕಾಲದಿಂದಲೂ ಕಾಂಗ್ರೆಸ್ಸಿನಲ್ಲಿದ್ದಾರೆ.  ಅವರನ್ನು ಈವರೆಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕಾಗಿತ್ತು.  ರಾಜ್ಯಸಭೆ ಸದಸ್ಯರನ್ನಾಗಿ ಮಾಡಿ ಮುಂದುವರೆಸಬೇಕಿತ್ತು.  ಆದರೆ, ಪ್ರಧಾನಿ ನರೇಂದ್ರ ಮೋದಿಜೀ ಅವರು ಗುಲಾಂ ನಬಿ ಅವರ ಬಗ್ಗೆ ನಾಲ್ಕು ಒಳ್ಳೆಯ ಮಾತುಗಳನ್ನು ಹೇಳಿದಾಗ ಕಾಂಗ್ರೆಸ್ಸಿನವರಿದೆ ಇರಗಿಸಿಕೊಳ್ಳಲು ಆಗಲಿಲ್ಲ.  ಗುಲಾಂ ನಬಿ ಆಜಾದ ಅವರನ್ನು ರಾಜ್ಯಸಭೆಗೆ ಕಳುಹಿಸುವುದನ್ನು ತಪ್ಪಿಸಿದರು.  ಮುಸ್ಲಿಂ ಸಮುದಾಯಕ್ಕೆ ಅನ್ಯಾಯ ಮಾಡಿದರು ಎಂದು ಅವರು ವಾಗ್ದಾಳಿ ನಡೆಸಿದರು.

ಗುಲಾಂ ನಬಿ ಆಜಾದ ಕಾಂಗ್ರೆಸ್ಸಿಗೆ ಗ್ರ್ಯಾಂಡ್ ಫಾದರ.  ನಾವು ಕಂಡಂತೆ 1975ರಿಂದ ಅವರು ಕಾಂಗ್ರೆಸ್ಸಿಗೆ ನಿಷ್ಠಾವಂತರಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡು ಅನೇಕ ವರ್ಷಗಳ ಕಾಲ ಕಾಂಗ್ರೆಸ್ಸಿನಲ್ಲಿ ತೊಡಗಿದ್ದಾರೆ.  ಅಲ್ಪಸಂಖ್ಯಾತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಅಲ್ಪಸಂಖ್ಯಾತರು ಮತ್ತು ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಗುಲಾಂ ನಬಿ ಆಜಾದ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಬೇಕು.  ನಿಮ್ಮ ಬದ್ಧತೆಯನ್ನು ತೋರಿಸಬೇಕು.  ಇರದಿದ್ದರೆ ಜನರಿಗೆ ಮೋಸ ಮಾಡುವ ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು ಎಂದು ಸಚಿವ ಗೋವಿಂದ ಕಾರಜೋಳ ವಾಗ್ದಾಳಿ ನಡೆಸಿದರು.

ಈ ಬೈ ಎಲೆಕ್ಶಷನ್ ನಲ್ಲಿ ಕಾಂಗ್ರೆಸ್ಸಿನ ಮೋಸದಾಟ ನಡೆಯುವುದಿಲ್ಲ.  ಸಿಂದಗಿಯಲ್ಲಿ ರಮೇಶ ಭೂಸನೂರ ಕನಿಷ್ಠ 25 ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸುತ್ತಾರೆ.  ಅದೇ ರೀತಿಯಾಗಿ ಹಾನಗಲನಲ್ಲಿ ಶಿವರಾಜ ಸಜ್ಜನ ಅವರು 20 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯವನ್ನು ಸಾಧಿಸುತ್ತಾರೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರು ಸೋಲಿನ ಭೀತಿಯಿಂದ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.  ರಾಜಕಾರಣದಲ್ಲಿ ಯಾವ ರೀತಿ ಜನರ ಮುಂದೆ ನಾವು ಬದ್ಧತೆಯಿಂದ ಮಾತನಾಡಬೇಕು.  ವೈಯಕ್ತಿಕ ಟೀಕೆ ಟಿಪ್ಪಣೆ ಮಾಡಬಾರದು.  ವಿನಾಕಾರಣ ಆರೋಪಗಳನ್ನು ಮಾಡಿ ಗೂಬೆ ಕೂಡಿಸುವ ಕೆಲಸ ಮಾಡಬಾರದು ಕಾಂಗ್ರೆಸ್ಸಿನವರಿಗೆ ಕಿವಿಮಾತನ್ನು ಹೇಳಲು ಬಯಸುತ್ತೇನೆ ಎಂದು ಅವರು ತಿಳಿಸಿದರು.

ಗೋಣಿ ಚೀಲದಲ್ಲಿ ಹಣ ತಂದು ಪ್ರತಿ ಮತಕ್ಕೆ ರೂ. 2000 ಹಣ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಆರೋಪಿಸಿದ್ದಾರೆ.  ಆದರೆ, ಆ ಸಂಸ್ಕೃತಿ ಕಾಂಗ್ರೆಸ್ಸಿನಲ್ಲಿದೆ.  ಬಿಜೆಪಿಯಲ್ಲಿ ಅಲ್ಲ ಎಂದು ತಿಳಿಸಿದ ಅವರು, ತೈಲ ಬೆಲೆ ಏರಿಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೇಲೆ ಅವಲಂಬಿತವಾಗಿದೆ.  ನಾವು ಇತಿಹಾಸ ಕೆದಕಿದರೆ ಸ್ವಾತಂತ್ರ್ಯ ಬಂದ ನಂತರ 60 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ಬಾರಿ ಬೆಲೆ ಏರಿಕೆ ಆಗಿದೆ.  ಅಂದಿನ ರೂಪಾಯಿ ಮೌಲ್ಯ ಎಷ್ಟು ಹೆಚ್ಚಾಗಿದೆ? ಇಂದಿನ ರೂಪಾಯಿ ಮೌಲ್ಯ ಎಷ್ಟು ಹೆಚ್ಚಾಗಿದೆ ಎಂಬುದನ್ನು ಲೆಕ್ಕ ಹಾಕಿ ಗಮನಿಸಬೇಕು.  ಎಲ್ಲರ ಕಾಲದಿಂದಲೂ ರೂಪಾಯಿ ಮೌಲ್ಯ ಕುಸಿಯುತ್ತಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌