ದಶಕಗಳ ಬೇಡಿಕೆ ಈಡೇರಿಸಿ, ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ತಾರಾಪುರ, ಬ್ಯಾಡಗಿಹಾಳ ಮತ್ತು ತಾವರಖೇಡ ಗ್ರಾಮಗಳ ಜನರ ದಶಕಗಳ ಬೇಡಿಕೆಯಾಗಿದ್ದ ಪುನರ್ವಸತಿ ಮತ್ತು ಹಕ್ಕು ಪತ್ರ ನೀಡಿ ನಾನು ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ಮುಜರಾಯಿ, ವಕ್ಫ್.ಮತ್ತು ಹಜ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. 

ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಪರ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಅವರು, ಭೀಮಾ ಏತನೀರಾವರಿಯಿಂದ ತಾರಾಪುರ, ಬ್ಯಾಡಗಿಹಾಳ ಹಾಗೂ ತಾವರಖೇಡ ಗ್ರಾಮಗಳು ಮುಳುಗಡೆಯಾಗಿ ಪುನರ್ವಸತಿಗಾಗಿ ಕಳೆದ 10 ವರ್ಷಗಳಿಂದ ಹೋರಾಟ ನಡೆಸುತ್ತ ಬಂದಿದ್ದರು.  ನಾನು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಬಂದ ನಂತರ ಮೂರು ಗ್ರಾಮಗಳಿಗೆ ಭೇಟಿ ನೀಡಿದಾಗ ಜನರು ತಮ್ಮ ದಶಕಗಳ ಸಮಸ್ಯೆ ಹೇಳಿಕೊಂಡಿದ್ದರು.  ಆ ಸಮಯದಲ್ಲಿ ಎಲ್ಲರಿಗೂ ಪುನರ್ವಸತಿ ಕಲ್ಪಿಸಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದ್ದೆ.  ಅದರಂತೆ ಒಂದು ವರ್ಷದಲ್ಲಿ 358 ಕುಟುಂಬಗಳನ್ನು ಸ್ಥಳಾಂತರಿಸಿ ಹಕ್ಕುಪತ್ರ ವಿತರಣೆ ಮಾಡಿ ನುಡಿದಂತೆ ನಡೆದಿದ್ದೇನೆ.  ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಎಲ್ಲರಿಗೂ ವಾಸಿಸಲು ಮನೆ ಹಾಗೂ ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕೆಲಸ ಮಾಡಿ ಕೊಡುತ್ತೇನೆ ಎಂದು ಸಚಿವರು ಭರವಸೆ ನೀಡಿದರು.

ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು ಅವರಿಗೆ ಮತ ಹಾಕಿ ಗೆಲ್ಲಿಸಿ ಕಳುಹಿಸುವ ಭರವಸೆ ನೀಡುವಂತೆ ಜನರಲ್ಲಿ ಮನವಿ ಮಾಡಿದ ಅವರು, ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದು ಎರಡೂ ಸರಕಾರಗಳು ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ.  ಪ್ರಧಾನಿ ನರೇಂದ್ರ ಮೋದಿಯವರು ರೈತರಿಗಾಗಿ ಕಿಸಾನ್ ಸಮ್ಮಾನ್  ಯೋಜನೆ ಜಾರಿಗೊಳಿಸುವುದಕ್ಕಾಗಿ ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಮೂರು ಕಂತಿನಲ್ಲಿ ರೂ. 6000 ಜಮೆ ಮಾಡಲಾಗುತ್ತಿದೆ.  ಅದಕ್ಕೆ ಪೂರಕವಾಗಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರೂ ರೂ. 4000 ಗಳನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಿ, ರೈತರು ಬಿತ್ತನೆ ಬೀಜಕ್ಕಾಗಿ ಬೇರೆಯವರ ಹತ್ತಿರ ಕೈಚಾಚದಂತೆ ಈ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೊಳಿಸುವ ಮೂಲಕ ರೈತರ ಮಕ್ಕಳೂ ಉನ್ನತ ಶಿಕ್ಷಣ ಕಲಿಯಲಿ ಎಂದು ಪ್ರೋತ್ಸಾಹ ನೀಡಿದ್ದಾರೆ.  ಇದಲ್ಲದೇ ಕೇಂದ್ರ ಸರಕಾರ ರೈತರು ತಾವು ಬೆಳೆದ ಬೆಲೆಯನ್ನು ತಾವೇ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಮಾರಾಟ ಮಾಡಲು ರೈತ ಉತ್ಪಾದಕರ ಸಂಘ(ಎಫ್ ಪಿ ಒ) ಗಳನ್ನು ಸ್ಥಾಪಿಸಲಾಗುತ್ತಿದೆ.  ಇದರಿಂದ ರೈತರು ತಮ್ಮ ಬೆಳೆಗೆ ತಾವೇ ದರ ನಿಗದಿ ಮಾಡಿ ರಫ್ತು ಕೂಡ ಮಾಡಬಹುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವರಾದ ಶಶಿಕಲಾ ಜೊಲ್ಲೆ ಅವರ ಸಮ್ಮುಖದಲ್ಲಿ ನಾನಾ ಪಕ್ಷಗಳ ನೂರಾರು ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.

ಈ ಸಂದರ್ಭದಲ್ಲಿ ಸಚಿವರೊಂದಿಗೆ ಬಿಜೆಪಿ ಅಭ್ಯರ್ಥಿ ರಮೇಶ ಬೂಸನೂರು, ತೇಜಸ್ವಿಗೌಡ, ಅಶೋಕ ಬಗಲಿ, ಯಶವಂತರಾಯಗೌಡ, ಅಂಬರೀಶ ಸಾಲಕ್ಕಿ, ನ್ಯಾಯವಾದಿ ಜಿರಾಳೆ, ವಿವೇಕಾನಂದ ಡಬ್ಬಿ ಹಾಗೂ ಶ್ರೀಮಂತ ನಾಗುರೆ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌