ಬಸವರಾಜ ಬೊಮ್ಮಾಯಿ ನೀವೇನಾದರೂ ಕುರಿ ಕಾಯ್ದಿದ್ದೀರಾ ಎಂದು ಪ್ರಶ್ನಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ

ವಿಜಯಪುರ: ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರು ಬಸವರಾಜ ಬೊಮ್ಮಾಯಿ ನೀವೇನಾದರೂ ಕುರಿ ಕಾಯ್ದಿದ್ದೀರಾ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಮಾತನಾಡಿದ ಅವರು, ಹೇ ಬಸವರಾಜ ಬೊಮ್ಮಾಯಿ ನೀನೇವಾಗಾದ್ರೂ ಕುರಿ ಕಾದಿದ್ದಿಯಾ? ನಾನು ಕುರಿ ಕಾಯ್ದಿದ್ದೇನೆ.  ಬಸವರಾಜ್ ಬೊಮ್ಮಾಯ್ ಯಾವಾತ್ತಾದ್ರೂ ಕರಿ ಕಂಬಳಿ ಹೊತ್ತಿದ್ದೀಯೇನಯ್ಯ? ಅದನ್ನು ಹೊತ್ಕೊಳ್ಳೊಕೆ ಯೋಗ್ಯತೆ ಬೇಕು ನಿನಗೆ ಎಂದು ವಾಗ್ದಾಳಿ ನಡೆಸಿದರು.  ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಬ್ಬರು ಕಂಬಳಿಯನ್ನು ತಂದು ಸಿದ್ಧರಾಮಯ್ಯ ಅವರ ಹೆಗಲ ಮೇಲೆ ಹಾಕಿದರು.

ತಮ್ಮ ಭಾಷಣ ಮುಂದುವರೆಸಿದ ಸಿದ್ಧರಾಮಯ್ಯ, ಕಾಗಿನೆಲೆಯಲ್ಲಿ ಕನಕ ಗುರುಪೀಠ ಸ್ಥಾಪಿಸಿದ್ದು ನಾನು.  ಬಸವರಾಜ್ ಬೊಮ್ಮಾಯಿ ನೀನೆಲ್ಲಿದ್ದೀಯಪ್ಪಾ? ಹಲವು ಜಯಂತಿಗಳನ್ನು ಮಾಡಿದ್ದು ಸಿದ್ದರಾಮಯ್ಯ.  ವಿಜಯಪುರ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟಿದ್ದು ಸಿದ್ದರಾಮಯ್ಯ.  ಎಲ್ಲಾ ಕಚೇರಿಗಳಲ್ಲೂ ಬಸವಣ್ಣನವರ ಪೋಟೋ ಹಾಕಿಸಿದ್ದು ಸಿದ್ದರಾಮಯ್ಯ.  ಕಿತ್ತೂರು ಚೆನ್ನಮ್ಮ ಜಯಂತಿ ಆರಂಭಿಸಿದ್ದು ನಾನು ಸಿದ್ದರಾಮಯ್ಯ.  ಹೀಗೆ ಹಲವು ಜಯಂತಿಗಳನ್ನು ಮಾಡಿಸಿದ್ದು ಸಿದ್ದರಾಮಯ್ಯ.  ಹಾಗಾದರೆ ಬಸವರಾಜ ಬೊಮ್ಮಾಯಿ ನೀನೆಲ್ಲಿದ್ದಿಯಪ್ಪಾ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪನಿಗೆ ತಾನು ಕುರುಬ ಅಂತಾ ಹೇಳೋಕೂ ಭಯ.  ಆದರೆ ನಾನು ಎಲ್ಲಾ ಕಡೆ ಎದೆತಟ್ಟಿ ಹೆಳ್ತಿನಿ ನಾನೊಬ್ಬ ಕುರುಬ, ಕುರುಬ ಕುರುಬ ಎಂದು ಸಿದ್ಧರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಇದಕ್ಕೂ ಮುಂಚೆ ಸಿಂದಗಿ ಬೈ ಎಲೆಕ್ಷನ್ ಪ್ರಚಾರದಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂದಗಿ ತಾಲೂಕಿನ ಕೊಕಟನೂರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಬಸವರಾಜ ಬೊಮ್ಮಾಯಿ ಅವರಿಗೆ ಕಂಬಳಿಯನ್ನು ತಂದು ಹಾಕಿದರು.  ಜನರಿಂದ ವ್ಯಕ್ತವಾದ ಬೆಂಬಲದಿಂದ ಫುಲ್ ಖುಷ್ ಆಗಿದ್ದ ಸಿಎಂ ಭಾಷಣದ ವೇಳೆ ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಹೇಳಿದರು.

ಉಣ್ಣೆಯನ್ನು ನೇಯ್ದು ಕಂಬಳಿ ಮಾಡಲಾಗುತ್ತದೆ. ಇದರ ಹಿಂದೆ ಹಾಲುಮತದವರ ಗೌರವ ಮತ್ತು ಪರಿಶ್ರಮ ಅಡಗಿದೆ.  ಕಂಬಳಿ ಹೊದ್ದುಕೊಳ್ಳಲು ಯೋಗ್ಯತೆ ಇರಬೇಕು.  ಉಣ್ಣೆ ಕಂಬಳಿಯನ್ನು ಯಾರು ಬೇಕಾದರೂ ಹಾಕಿಕೊಂಡರೆ ಯೋಗ್ಯತೆ ಬರುವುದಿಲ್ಲ.   ಹಾಲುಮತದ ಸಮಾಜಕ್ಕೆ ಸರಿಯಾದ ಅಭಿವೃದ್ಧಿ ಮಾಡಿದವರಿಗೆ ಮಾತ್ರ ಆ ಯೋಗ್ಯತೆ ಪ್ರಾಪ್ತವಾಗುತ್ತದೆ.  ದಾಸಶ್ರೇಷ್ಠರಾದ ಕನಕದಾಸರ ಜನ್ಮಸ್ಥಳ ಬಾಡ ಹಾಗೂ ಅವರ ಕರ್ಮಭೂಮಿ ಕಾಗಿನೆಲೆಯನ್ನು ಬಿಜೆಪಿ ಅಧಿಕಾರದ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಸಿಂದಗಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಕೆ. ಎಸ್. ಈಶ್ವರಪ್ಪ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply

ಹೊಸ ಪೋಸ್ಟ್‌