ಕಣ್ಣೀರಿಟ್ಟು ಮತ ಕೇಳಿದ ಜೆಡಿಎಸ್ ಅಭ್ಯರ್ಥಿ ನಾಜಿಯಾ, ಅತ್ತೆ ನಸೀಮಾ ಅಂಗಡಿ- ಸಿಂದಗಿಯಲ್ಲಿ ದೇವೆಗೌಡರ ಸಮ್ಮುಖದಲ್ಲಿ ನಡೆದ ಘಟನೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ಚುನಾವಣೆ ಪ್ರಚಾರ ಜೋರಾಗಿದ್ದು, ರಾಜಕೀಯ ಆರೋಪಗಳಿಂದ ನೊಂದ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಮತ್ತು ಅವರ ಅತ್ತೆ ನಸೀಮಾ ಅಂಗಡಿ ಕಣ್ಣೀರು ಹಾಕಿ ಮತ ಕೆಳಿದ ಪ್ರಸಂಗ ಸಿಂದಗಿಯಲ್ಲಿ ನಡೆದಿದೆ.

ಸಿಂದಗಿ ಪಟ್ಟಣದಲ್ಲಿರುವ ರಾಜರಾಜೇಶ್ವರ ಕಲ್ಯಾಣ ಮಂಟಪದಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ನೇತೃತ್ವದಲ್ಲಿ ಜೆಡಿಎಸ್ ಮಹಿಳಾ ಸಮಾವೇಶ ಆಯೋಜಿಸಿತ್ತು.  ಈ ಕಾರ್ಯಕ್ರಮದಲ್ಲಿ ನಾನಾ ಸಮುದಾಯಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಈ ಸಮಾವೇಶದಲ್ಲಿ ಮಾತನಾಡಿದ ನಾಜಿಯಾ ಶಕೀಲ ಅಂಗಡಿ ಅವರ ಅತ್ತೆ ನಸೀಮಾ ಅಂಗಡಿ, ತಮ್ಮ ಪತಿಯನ್ನು ನೆನೆದು ಕಣ್ಣೀರು ಹಾಕಿದರು.  ನನ್ನ ಪತಿ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿದ್ದರು.  ಪಕ್ಷದ ಪರ ಪ್ರಚಾರಕ್ಕೆ ತೆರಳಿದ್ದಾಗ ನಡೆದ ರಸ್ತೆ ಅಪಘಾತದಲ್ಲಿ ಸಾವಿಗೀಡಾದರು ಎಂದು ಗದ್ಘದಿತರಾದರು.  ನನ್ನ ಸೊಸೆಗೆ ತಾವೆಲ್ಲ ಮತ ಹಾಕಬೇಕು.  ಈ ಮೂಲಕ ನನ್ನ ಪತಿಯನ್ನು ಗೆಲ್ಲಿಸಬೇಕು.  ಈಗ ಸೊಸೆ ಚುನಾವಣೆಗೆ ನಿಂತಿದ್ದಾಳೆ.  ಅವರನ್ನು ಮತ ಹಾಕುವ ಮೂಲಕ ಆಶೀರ್ವದಿಸಬೇಕು.  ದಯವಿಟ್ಟು ನನ್ನ ಸೊಸೆಯನ್ನು ಕೈ ಬಿಡಬೇಡಿ.  ಅವಳನ್ನು ನಿಮ್ಮ ಮಗಳು ಎಂದುಕೊಂಡು ಮತ ಹಾಕಿ.  ನನ್ನ ಪತಿ ಕಂಡ ಕನಸನ್ನು ನನಸು ಮಾಡಲು ಸಹಕರಿಸಿ ಎಂದು ಎಂದು ಕೈ ಮುಗಿದು ಕಣ್ಣೀರು ಹಾಕಿದರು.

ಅತ್ತೆ ನಸೀಮಾ ಅಂಗಡಿ ಅವರು ಕಣ್ಣೀರು ಹಾಕುತ್ತಿದ್ದಂತೆ ಪಕ್ಕದಲ್ಲಿಯೇ ಇದ್ದ ಸೊಸೆ ಮತ್ತು ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲ ಅಂಗಡಿ ಕೂಡ ತಡೆಯಲಾಗದೇ ಭಾವುಕರಾಗಿ ಕಣ್ಣೀರು ಹಾಕಿದರು.  ಈ ಪ್ರಸಂಗ ಸಭಾಂಗಣದಲ್ಲಿ ನೆರೆದಿದ್ದ ಮಹಿಳೆಯರ ಕಣ್ಣಂಚಿನಲ್ಲಿಯೂ ನೀರು ತರಿಸಿತ್ತು.  ಈ ಭಾವನಾತ್ಮಕ ಕ್ಷಣಗಳು ಇಡೀ ಸಭಾಂಗಣದಲ್ಲಿ ನೆರೆದ ಜನ ಕೆಲಕಾಲ ಮೌನಕ್ಕೆ ಶರಣಾಗುವಂತೆ ಮಾಡಿತ್ತು.

ಸಿಂದಗಿಯಲ್ಲಿ ಚುನಾವಣೆ ಮತದಾನ ಹತ್ತಿರವಾಗುತ್ತಿದ್ದಂತೆ ಆರೋಪ ಪ್ರತ್ಯಾರೋಪಗಳೂ ಹೆಚ್ಚಾಗುತ್ತಿದ್ದು, ಜೆಡಿಎಸ್ ಕಾಂಗ್ರೆಸ್ಸನ್ನು ಸೋಲಿಸಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.  ಇದು ಸುಶಿಕ್ಷಿತರಾಗಿರುವ ಅತ್ತೆ ನಸೀಮಾ ಅಂಗಡಿ ಮತ್ತು ಸೊಸೆ ನಾಜಿಯಾ ಶಕೀಲ ಅಂಗಡಿ ಅವರ ಮನಸ್ಸಿಗೆ ಘಾಸಿ ಮಾಡಿದೆ ಎನ್ನಲಾಗಿದೆ.  ಇದು ಈಗ ಕಣ್ಣೀರಿನ ಮೂಲಕ ಹೊರ ಬಂದಿದೆ ಎಂದು ಜೆಡಿಎಸ್ ಕಾರ್ಯಕರ್ತರು ಸಭೆಯಲ್ಲಿ ಪರಸ್ಪರ ಮಾತನಾಡುತ್ತಿರುವುದು ಕಂಡು ಬಂತು.

Leave a Reply

ಹೊಸ ಪೋಸ್ಟ್‌