ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕೆನ್ನುವುದು ಮತದಾರರ ಅಪೇಕ್ಷೆಯಾಗಿದೆ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಜನಪರ ಯೋಜನೆಗಳು ಶೇ. 100 ರಷ್ಟು ರೈತರನ್ನು ತಲುಪಿವೆ.  ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇರುವುದರಿಂದ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲ್ಲಬೇಕೆನ್ನುವುದು ಜನರ ಅಪೇಕ್ಷೆಯಾಗಿದೆ.  ಇದು ಅವರ ಗೆಲುವಿಗೆ ಶ್ರೀರಕ್ಷೆಯಾಗಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆ ಹಾಗೂ ರೈತರ ಮಕ್ಕಳಿಗೆ ರಾಜ್ಯ ಸರಕಾರ ಜಾರಿಗೆ ತಂದಿರುವ ವಿದ್ಯಾನಿಧಿ ಯೋಜನೆಗಳು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ 100 ರಷ್ಟು ಫಲಾನುಭವಿಗಳಿಗೆ ತಲುಪಿವೆ ಎಂದು ತಿಳಿಸಿದರು.

ರಮೇಶ ಬೂಸನೂರ ಅವರು ಶಾಸಕರಾಗಿದ್ದಾಗ ಕ್ಷೇತ್ರದ ಗ್ರಾಮೀಣ ಪ್ರದೇಶದಲ್ಲಿ ಸಮುದಾಯ ಭವನ, ಶಾದಿಮಹಲ್, ಅಂಬೇಡ್ಕರ್ ಭವನ, ದೇವಸ್ಥಾನಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಅವರು ಅಧಿಕಾರದಲ್ಲಿ ಇಲ್ಲದಿದ್ದರೂ ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಜನರಿಗೆ ನೆರವು ನೀಡುವ ಕೆಲಸ ಮಾಡಿದ್ದಾರೆ. ಈಗ ಅವರು ಮತ್ತೆ ಚುನಾವಣೆಯಲ್ಲಿ ಗೆದ್ದುಬಂದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಇನ್ನಷ್ಟು ಯೋಜನೆಗಳನ್ನು ತಂದು ಕ್ಷೇತ್ರದ ಅಭಿವೃದ್ಧಿ ಮಾಡಲು ಅನುಕೂಲವಾಗುತ್ತದೆ. ಈ ಚುನಾವಣೆಯಲ್ಲಿ ರಮೇಶ ಬೂಸನೂರು ಅವರು ಕನಿಷ್ಟ 25000 ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.

ಮಹಿಳಾ ಬೃಹತ್ ಸಮಾವೇಶ

ಸಿಂಧಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನೊಳ್ಳಿಯಲ್ಲಿ ಇಂದು ಸಂಜೆ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಮಹಿಳೆಯರು ಹೊರಗೆ ಬರಲು ಹಿಂಜರಿಯುತ್ತಾರೆ. ಈಗ ನಾವು ಬಿಜೆಪಿ.ಮಹಿಳಾ ಮೋರ್ಚಾ ವತಿಯಿಂದ ಮಹಿಳಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಅನೇಕ ಮಹಿಳೆಯರು ಹೊರಗೆ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇದುವರೆಗೂ ಮಹಿಳೆಯರು ಮನೆಯವರು ಹೇಳಿದ ಪಕ್ಷಕ್ಕೆ ಮತ ಹಾಕಿ ಸುಮ್ಮನಾಗುತ್ತಿದ್ದರು. ಅವರ ಸಮಸ್ಯೆ ಏನು ಎಂದು ಹೇಳಿಕೊಳ್ಳುತ್ತಿರಲಿಲ್ಲ. ಈಗ ಮಹಿಳೆಯರು ತಮ್ಮ ಸ್ವಂತ ಕಚ್ಚೆಯಿಂದ ಮತದಾನ ಮಾಡಿ, ತಮ್ಮ ಸಮಸ್ಯೆ ಹೇಳಿಕೊಳ್ಳುವಂತೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಸಿಂಧಗಿ.ಕ್ಷೇತ್ರದಲ್ಲಿ ಸಚಿವರಾದ ಸೋಮಣ್ಣ, ಗೋವಿಂದ ಕಾರಜೋಳ, ಬೈರತಿ ಬಸವರಾಜ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ನಾನು ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರ ಮಾಡುತ್ತಿದ್ದು, ರಮೇಶ ಬೂಸನೂರು ಅವರ ಗೆಲುವು ಖಚಿತ ಎಂದು ಅವರು ಹೇಳಿದರು.

ಇದೇ ವೇಳೆ ಸಿಂಧಗಿ.ಕ್ಷೇತ್ರದಲ್ಲಿ ಜಲ ಜೀವನ್ ಮಷಿನ್ ಯೋಜನೆ ಅಡಿಯಲ್ಲಿ ಜಾರಿಯಾಗುತ್ತಿರುವ ಕಾಮಗಾರಿ ತೀವ್ರಗೊಳಿಸುವುದು, ಹಾಗೂ ಮುದ್ದರಬಿಹಾಳದಲ್ಲಿ ಈ ಯೋಜನೆಯ ಕಾಮಗಾರಿ ನಡೆಯುವ ಸದರ್ಭದಲ್ಲಿ ಮೃತರಾದವರ ಕುಟುಂಬದ ಜೊತೆ ಮಾತನಾಡುವಂತೆ ಅಲ್ಲಿನ ಎಸಿ ಜೊತೆಗೆ ಮಾತನಾಡಿರುವುದಾಗಿ ಸಚಿವರು ತಿಳಿಸಿದರು.

ಇನ್ನು ಕೊರೊನಾದಿಂದ ಮೃತರಾದವರ ಕುಟುಂಬದವರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ನೀಡುವ ಪರಿಹಾರ ತಲುಪದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉಪ ಚುನಾವಣೆ ಮುಗಿದ ತಕ್ಷಣ ಅಧಿಕಾರಿಗಳ ಜೊತೆ ಸಭೆ ನಡೆಸಿ ಎಲ್ಲ ಕುಟುಂಬಗಳಿಗೂ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

 

ಈ ಸಂದರ್ಭದಲ್ಲಿ ವಿಜಯಪುರ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌