ವಿಜಯಪುರ: ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ರಸ್ತೆಗಳ ದುರಸ್ಥಿ ಕಾರ್ಯ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ. ಸಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಹಲವು ರಸ್ತೆಗಳನ್ನು ಮೇಲ್ದರ್ಜೆಗೇರಿಸುವ ಕುರಿತು ಕೇಂದ್ರ ಸಾರಿಗೆ ಸಚಿವ ನಿತೀನ ಗಡ್ಕರಿ ಅವರಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬೈ ಎಲೆಕ್ಷನಗ ನಲ್ಲಿ ಜಾತಿ ರಾಜಕಾರಣ ಪ್ರಸ್ತಾಪಿಸುವುದು ಸರಿಯಲ್ಲ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ಕುರಿತು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ತಿಳಿಸಿದರು.
ಪಂಚಮಸಾಲಿ ಸಮಾಜವನ್ನು 2ಎ ಮೀಸಲಾತಿ ಪಟ್ಟಿಗೆ ಸೇರಿಸಲು ಮುಖ್ಯಮಂತ್ರಿಗಳು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಜಯಪ್ರಕಾಶ ಹೆಗಡೆ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದಾರೆ. ಮೂರ್ನಾಲ್ಕು ಸಮಾಜಗಳ ಬೇಡಿಕೆ ಇದೇ ರೀತಿ ಇದೇ. ಎಲ್ಲವನ್ನು ಕ್ರೂಢಿಕರಿಸಿ, ಪರಿಶೀಲಿಸಿ ನಮ್ಮ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.
ಸಿಂದಗಿ ಮತ್ತು ಹಾನಗಲ್ ಮತಕ್ಷೇತ್ರದ ಮತದಾರ ಪ್ರಭುಗಳು ಬಿಜೆಪಿ ಬೆಂಬಲಿಸಲಿದ್ದಾರೆ. ಈ ಚುನಾವಣೆಯಲ್ಲಿ ಪರಿಸ್ಥಿತಿಯ ಲಾಭ ತೆಗೆದುಕೊಳ್ಳಲು ವಿಜಯಾನಂದ ಕಾಶಪ್ಪನವರ ಪ್ರಯತ್ನಿಸುವುದಿಲ್ಲ ಎಂಬ ನಂಬಿಜೆಯಿದೆ. ನಮಗಿಂತಲೂ ಮುಂಚೆ ಅವರೇ ಅಧಿಕಾರದಲ್ಲಿದ್ದರು. ಆಗ ಯಾಕೆ ಮೀಸಲಾತಿ ಧ್ವನಿ ಎತ್ತಲಿಲ್ಲ? ಎಂದು ಪ್ರಶ್ನಿಸಿದ ಸಿ. ಸಿ. ಪಾಟೀಲ, ನಮ್ಮ ಸರಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ಈಗಾಗಲೇ ಮುಖ್ಯಮಂತ್ರಿಗಳು ಕೂಡಲಸಂಗಮ ಸ್ವಾಮಿಗಳ ಜೊತೆ ಒಂದು ಗಂಟೆ 10 ನಿಮಿಷ ಸುದೀರ್ಘ ಮಾತುಕತೆ ನಡೆಸಿದ್ದಾರೆ. ಸ್ವಾಮೀಜಿಗಳು ಈ ಸಭೆಯಿಂದ ಸಂತೃಪ್ತರಾಗಿದ್ದಾರೆ. ಅಂದು ಕಾಶಪ್ಪನವರ ಕೂಡ ಸಮಾಧಾನ ವ್ಯಕ್ತಪಡಿಸಿದ್ದರು. ಈಗ ಅವರು ಈ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ ಎಂಬ ವಿಶ್ವಾಸ ಇದೆ ಎಂದು ಸಚಿವರು ತಿಳಿಸಿದರು.
ರಾಜಕೀಯ ಪಕ್ಷದ ತತ್ವ ಮತ್ತು ಸಿದ್ಧಾಂತಗಳ ಆಧಾರದ ಮೇಲೆ ನಾವು ಚುನಾವಣೆಗೆ ಎದುರಿಸುತ್ತಿದ್ದೇವೆ.ಅಭಿವೃದ್ಧಿ ಚುನಾವಣೆ ಅಜೆಂಡಾ ಆಗಬೇಕೇ ಆಗಬೇಕು ಹೊರತು ಜಾತಿ ರಾಜಕಾರಣ,, ವೈಯಕ್ತಿಕ ಟೀಕೆ ಟಿಪ್ಪಣಿಗಳು ಚರ್ಚೆಯಾಗಬಾರದು ಎಂದು ಹೇಳಿದರು.
ಸಿಂದಗಿ ಮತ್ತು ಹಾನಗಲ್ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಾಧನೆಯ ಪ್ರತಿಫಲವಾಗಿ ಮತದಾರರು ಬಿಜೆಪಿಗೆ ಆಶೀರ್ವಾದಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
100 ಕೋಟಿ ಗೂ ಹೆಚ್ಚು ಜನರಿಗೆ ಕೊರೊನಾ ಲಸಿಕಾಕರಣ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕನಸು ಸಾಕಾರಗೊಳಿಸಿದ ವೈದ್ಯಕೀಯ ಸಿಬ್ಬಂದಿ ಸಾಧನೆಗೆ ಅಭಿನಂದಿಸುವೆ. ಕೃಷಿ ಸಮ್ಮಾನ ಯೋಜನೆಯಡಿ ರೂ. 10 ಸಾವಿರ ಹಣವನ್ನು ರೈತರ ಖಾತೆಗೆ ನೇರವಾಗಿ ಜಮೆ ಮಾಡುತ್ತಿರುವುದು ಬಿಜೆಪಿ ಸಾಧನೆಯಾಗಿದೆ. ಯಡಿಯೂರಪ್ಪ ಕಾಲದಲ್ಲಿ ಜಾರಿಗೆ ಬಂದ ಭಾಗ್ಯ ಲಕ್ಷ್ಮಿ ಯೋಜನೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ
ಯಲ್ಲಿ ಎಸ್ ಸಿ ಪಿ, ಟಿಎಸ್ ಪಿ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಒದಗಿಸಲಾಗಿದೆ. ಬೊಮ್ಮಾಯಿ ಈ ಹಿಂದೆ ಗೃಹ ಸಚಿವರಾಗಿದ್ದಾಗ
16397 ನಾನಾ ಹುದ್ದೆಗಳಿಗೆ ನೇಮಕ ಮಾಡಿದ್ದು ದಾಖಲೆಯಾಗಿದೆ ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಂದಗಿ ಬೈ ಎಲೆಕ್ಷನ್ ನಲ್ಲಿ 12 ಗ್ರಾಮಗಳಲ್ಲಿ ನಡೆಸಿದ ರೋಡ್ ಶೋ ದಾಖಲೆಯಾಗಿದೆ. ಗೊಲಗೇರಿ ಗ್ರಾಮದಲ್ಲಿ ಸುಮಾರು 10 ಸಾವಿರ ಜನರು ಕಾರ್ಯಕ್ರಮಕ್ಕೆ ಬಂದುದ್ದು ಗಮನಾರ್ಹವಾಗಿದೆ ಎಂದು ತಿಳಿಸಿದ ಸಿ. ಸಿ. ಪಾಟೀಲ, ಕರ್ನಾಟಕದ ರಸ್ತೆಗಳ ಬಗ್ಗೆ ಸಿಎಂ ಬೊಮ್ಮಯಿ ಅವರ ಗಮನಕ್ಕೂ ಬಂದಿದೆ. ನಾನು ಲೋಕೋಪಯೋಗಿ ಇಲಾಖೆ ಸಚಿವನಾಗಿ ಎಲ್ಲ ರಸ್ತೆಗಳ ಅಭಿವೃದ್ಧಿ ಗೆ ಗಮನ ಹರಸಿದ್ದೇನೆ ಎಂದು ತಿಳಿಸಿದರು.ರ
ರಸ್ತೆಗಳ ರಿಪೇರಿ ವಿಚಾರ
ಹೈಕೋರ್ಟ್ ಛೀಮಾರಿ ಹಾಕುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ರಾಜ್ಯದ ರಸ್ತೆಗಳು ಹದಗೆಟ್ಟಿದ್ದು ನಿಜ. ಇದನ್ನು ಒಪ್ಪಿಕೊಳ್ಳಬೇಕು. ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಜಯಪುರ ಬಿಜೆಪಿ ಜಿಲ್ಲಾ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.