ಹಾವೇರಿ: ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಜನರೇ ನನ್ನ ರಿಮೋಟ್ ಕಂಟ್ರೋಲ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಮಾಡಿದ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ ವಿಧಾನಸಭೆ ಕ್ಷೇತ್ರದ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಹಾನಗಲ ಪಟ್ಟಣದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ರೋಡ್ ಶೋ ಉದ್ದೇಶಿಸಿ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ನನ್ನನ್ನು ರಿಮೋಟ್ ಕಂಟ್ರೋಲ್ ಮುಖ್ಯಮಂತ್ರಿ ಎಂದು ಕರೆದಿದ್ದಾರೆ. ಅವರು ಹೇಳಿದ್ದು ನಿಜ. ನನ್ನ ರಿಮೋಟ್ ಕಂಟ್ರೋಲ್ ಜನರ ಬಳಿ ಇದೆ. ಆದರೆ ಸಿದ್ದರಾಮಯ್ಯ ಕಂಟ್ರೋಲ್ ದೆಹಲಿಯ ಕುಟುಂಬವೊಂದರ ಕೈಯಲ್ಲಿದೆ ಎಂದು ಅವರು ಆರೋಪಿಸಿದರು.
ಸ್ವಾಭಿಮಾನ ತೋರಿಸಿ
ಹಾನಗಲ ಮತಕ್ಷೇತ್ರದ ಜನ ಸ್ವಾಭಿಮಾನಿಗಳು. ಹಾವೇರಿ ಜಿಲ್ಲೆಯ ಜನ ಸ್ವಾಭಿಮಾನಿಗಳು. ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಮಾಡಿರುವುದು ಸಿಎಂ ಉದಾಸಿ. ಹೀಗಾಗಿ ನಮ್ಮ ಸ್ವಾಭಿಮಾನವನ್ನು ಪ್ರದರ್ಶಿಸುವ ಅವಕಾಶ ಒದಗಿ ಬಂದಿದೆ. ಪ್ರತಿಯೊಬ್ಬ ಮತದಾರರು ಮತ ಚಲಾಯಿಸಿ. ನಿಮ್ಮ ಹಕ್ಕು ಚಲಾಯಿಸಿ. ಸ್ವಾಭಿಮಾನವನ್ನು ಪ್ರದರ್ಶಿಸಿ. ಬಿಜೆಪಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಪಕ್ಷದವರು ಕತ್ತಲರಾತ್ರಿ ಮಾಡಲು ಬರುತ್ತಾರೆ. ನಿಮ್ಮ ಮತ ಕದಿಯಲು ಪ್ರಯತ್ನ ಮಾಡುತ್ತಾರೆ. ಅವರ ಆಮೀಷಕ್ಕೆ ಬಲಿ ಆಗಬೇಡಿ ಎಂದು ಬಸವರಾಜ ಬೊಮ್ಮಾಯಿ ಮತದಾರರಿಗೆ ಮನವಿ ಮಾಡಿದರು.
ತಾಕತ್ತಿದ್ದರೆ ಸವಾಲು ಸ್ವೀಕರಿಸಿ ಸಿದ್ದರಾಮಯ್ಯ ಗೆ ಸಿಎೞ ಸವಾಲು
ಹಾನಗಲ್ ವಿಧಾನಸಭೆ ಕ್ಷೇತ್ರಕ್ಕೆ ಬಿಜೆಪಿಯ ಕೊಡುಗೆ ಏನು ಎಂದು ಸಿದ್ದರಾಮಯ್ಯ ಪದೇಪದೇ ಪ್ರಶ್ನಿಸುತ್ತಿದ್ದಾರೆ. ಅವರಿಗೆ ನಾನು ಒಂದು ಮಾತನ್ನು ಹೇಳಲು ಬಯಸುತ್ತೇನೆ. ಸಿಎಂ ಉದಾಸಿ ಅವರು ಸಚಿವರಾಗಿ, ಶಾಸಕರಾಗಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಬಾಳಂಬೀಡ ಏತ ನೀರಾವರಿ ಯೋಜನೆಯಿಂದ 56 ಹಳ್ಳಿಗಳಿಗೆ ಲಾಭವಾಗುತ್ತದೆ. ಇನ್ನೂ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಇವುಗಳು ಉದಾಸಿ ಅವರ ಕೊಡುಗೆ. ಅವುಗಳನ್ನು ದಾಖಲೆ ಸಮೇತ ನಿಮಗೆ ಕಳಿಸುತ್ತೇನೆ. ತಾಕತ್ತಿದ್ದರೆ ಈ ದಾಖಲೆಗಳನ್ನು ಸ್ವೀಕರಿಸಿ. ನನ್ನ ಸವಾಲನ್ನು ಸ್ವೀಕರಿಸಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದರು.
ಹಾನಗಲ್ ಮತಕ್ಷೇತ್ರದಲ್ಲಿ ನಡೆದ ರೋಡ್ ಶೋ ಕಾರ್ಯಕ್ರಮಲ್ಲಿ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಲ, ಸಚಿವರಾದ ಡಾ. ಕೆ. ಸುಧಾಕರ, ಬಿ. ಸಿ. ಪಾಟೀಲ, ಹಾವೇರಿ ಬಿಜೆಪಿ ಸಂಸದ ಶಿವಕುಮಾರ ಉದಾಸಿ, ಹಾನಗಲ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಸೇರಿದಂತೆ ನಾನಾ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.