ವಿಜಯಪುರ: ಕಾಂಗ್ರೆಸ್ ದೇಶಕ್ಕೆ ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗಳನ್ನು ಕೊಡುಗೆಯಾಗಿ ನೀಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಬೈ ಎಲೆಕ್ಷನ್ ಅಂಗವಾಗಿ ನಡೆದ ರೋಡ್ ಶೋ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಹಾವೇರಿ ಜಿಲ್ಲೆಯ ಹಾನಗಲ್ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಅಭೂತ ಪೂರ್ವ ಗೆಲವು ಸಾಧಿಸಲಿದ್ದಾರೆ ಎಂದು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯಿಂದಾಗಿ ಎರಡೂ ಕ್ಷೇತ್ರದಲ್ಲಿ ನಮ್ಮ ಗೆಲವಾಗಲಿದೆ. ವಿಶೇಷವಾಗಿ ಭ್ರಷ್ಟಾಚಾರ ರಹಿತ ಆಡಳಿತ, ಭಯೋತ್ಪಾದನೆ ನಿಗ್ರಹ ಮತ್ತು ನಕ್ಸಲ್ ಚಟುವಟಿಕೆಗಳಿಗೆ ಬ್ರೇಕ್ ಹಾಕಿರುವುದು ವರದಾನವಾಗಲಿದೆ. ಇಂದು ರಾಜ್ಯದಲ್ಲಿ ಅಭಿವೃದ್ಧಿ ಪರವಾದ ಚಿಂತನೆಗಳ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರಕಾರ ನೀಡಿದ ಕೊಡುಡೆಗಳು ಮಾಡಿದ ಕಾರ್ಯಗಳು ಮತ್ತು ಈಗ ಅವರ ಮಾರ್ಗದರ್ಶನದಲ್ಲಿ ನಡೆಚಯುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರದ ಯೋಜನೆಗಳು ಹಳ್ಳಿ ಹಳ್ಳಿಗೆ ತಲುಪಿವೆ. ಈ ಕಾರ್ಯಗಳು ಪಕ್ಷದ ಅಭ್ಯರ್ಥಿಗಳಿಗೆ ವರದಾನವಾಗಲಿವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ದೇಶಕ್ಕೆ ನಾಲ್ಕು ಕೊಡುಗೆಗಳನ್ನು ನೀಡಿದೆ. ಭಯೋತ್ಪಾದನೆ, ಭ್ರಷ್ಟಾಚಾರ, ನಿರುದ್ಯೋಗ, ಬಡತನ ಇವು ಕಾಂಗ್ರೆಸ್ ದೇಶಕ್ಕೆ ನೀಡಿರುವ ಕೊಡುಗೆಗಳಾಗಿವೆ ಎಂದು ವ್ಯಂಗ್ಯವಾಗಿ ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಬಿಜೆಪಿ ಸಂಸದ ನಳೀನ ಕುಮಾರ ಕಟೀಲ, ಭ್ರಷ್ಟಾಚಾರ ಮತ್ತು ಭಯೋತ್ಪಾದಯನ್ನು ಕಾಂಗ್ರೆಸ್ ಮಾಡಿತ್ತು. 60 ವರ್ಷಗಳ ಕಾಲ ರಾಷ್ಟ್ರ ರಾಜ್ಯವನ್ನು ಕಾಂಗ್ರೆಸ್ಸ್ ದೇಶವನ್ನು ಆಳಿತ್ತು. ಸಿದ್ದರಾಮಯ್ಯ ತಾವು ಮಾಡಿದ ಅಭಿವೃದ್ಧಿ ಕಾರ್ಯ ಜನರಿಗೆ ಕೇಳಬೇಕಿತ್ತು. ಅದರ ಬದಲು ವಿಷಯಾಂತರ ಮಾಡಿತು. ಈಗ ಕಾಂಗ್ರೆಸ್ ಸೋಲಿನ ಭೀತಿಯಲ್ಲಿದೆ ಎಂದು ಅವರು ತಿಳಿಸಿದರು.
ಬಿಜೆಪಿ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣದ ಗುರಿ ಇಟ್ಟುಕೊಂಡು ಚುನಾವಣೆಗೆ ಹೋಗಿದೆ. ಕಾಂಗ್ರೆಸ್ ನಾಯಕರು ತಾವು ಹಾಗೂ ತಮ್ಮ ಪಕ್ಷ ಮಾಡಿದ ಸಾಧನೆಗಳನ್ನು ಹೇಳದೇ ಜಾತೀಯತೆ, ಮತೀಯ ವಿಷಯ ಇಟ್ಟುಕೊಂಡು ಚುನಾವಣೆಗೆ ಹೋಗಿದೆ. ಟಿಪ್ಪು ಜಯಂತಿಯನ್ನ ಸೃಷ್ಟಿ ಮಾಡಿದರು. ವೀರಶೈವ ಲಿಂಗಾಯತರನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಮುಂದಿನ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಸೋಲಿನ ಭೀತಿ ಇದೆ ಎಂದು ನಳೀನ ಕುಮಾರ ಕಟೀಲ ಹೇಳಿದರು.
ಬಿಜೆಪಿ ಹಣ ಬಲದಿಂದ ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸುತ್ತಾರೆ. ನೀವು ಎಲ್ಲ ಕಡೆ ಹಣದಿಂದ ಗೆದ್ದಿದ್ರಾ ಎಂದು ಪ್ರಶ್ನಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ, ಮುಂದಿನ ದಿನಗಳಲ್ಲಿ ಸಿಂದಗಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇವೆ. ಬಿಜೆಪಿಯ ಅಭ್ಯರ್ಥಿ ರಮೇಶ ಭೂಸನೂರ ಅವರು 25 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದರು.
ಕಂಬಳಿ ಹಾಗೂ ಟೋಪಿ ಹಾಕಿರುವದು ಒಂದು ವರ್ಗಕ್ಕೆ ಸೀಮಿತವಾಗಿಲ್ಲ ಎಂದು ನಳೀನ ಕುಮಾರ ಕಟೀಲ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಡಿಸಿಎೞ ಲಕ್ಷ್ಮಣ ಸವದಿ, ಸಿಂದಗಿ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.