ವಿಜಯಪುರ: ಕಾಂಗ್ರೆಸ್ಸಿನಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಸಿಂದಗಿ ಮತ್ತು ಹಾನಗಲ ಎರಡೂ ಕಡೆ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ನ. 2ರ ನಂತರ ಯಾರ ಠೇವಣಿ ಜಪ್ತಿಯಾಗಲಿದೆ ಎಂಬುದು ತಿಳಿಯಲಿದೆ ಎಂದು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಯಾವುದೇ ಆಂತರಿಕ ಭಿನ್ನಾಭಿಪ್ರಾಯವಿಲ್ಲ. ಮಾಜಿ ಶಾಸಕ ಶರಣಪ್ಪ ಸುಣಗಾರ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಅವರು ಬಹಳ ಶಿಸ್ತಿನಿಂದ ವ್ಯವಸ್ಥಿತವಾಗಿ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಮೇಲ್ನೋಟ ಅಷ್ಟೇ ಅಲ್ಲ, ಕೆಳನೋಟದಲ್ಲಿಯೂ ಚೆನ್ನಾಗಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಕೆಳ ಮಟ್ಟದ ಕಾರ್ಯಕರ್ತರಿಂದ ಹಿಡಿದು ದೊಡ್ಡ ಲೀಡರ್ ವರೆಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಕೂಡ ಒಗ್ಗಟ್ಟಾಗಿದ್ದಾರೆ. ಪಾಪ ಹೊರಗಿನಿಂದ ಬಂದಿರುವ ಎಂ ಎಲ್ ಎ ಗಳೂ ಕೂಡ ಭೂತ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು.
ಪಂಚಮಸಾಲಿ ಮೀಸಲಾತಿ ವಿಚಾರ ಈ ಚುನಾವಣೆ ಸಂದರ್ಭದಲ್ಲಿ ಮಾತನಾಡುವುದಿಲ್ಲ. ಸರಕಾರದ ಜೊತೆ ಈ ಬಗ್ಗೆ ಯಾವ ಚರ್ಚೆ ನಡೆದಿದೆ ಎಂಬುದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಗೊತ್ತಿದೆ. ಆ ವಿಚಾರದ ಬಗ್ಗೆ ನನಗೇನೂ ಗೊತ್ತಿಲ್ಲ. ಹೀಗಾಗಿ ಗೊತ್ತಿಲ್ಲದ ವಿಚಾರವನ್ನು ನಾನು ಮಾತನಾಡುವುದು ತಪ್ಪಾಗುತ್ತದೆ ಎಂದು ಹೇಳಿದ ಅವರು, ಲಿಂಗಾಯಿತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ವಿಚಾರ ಕುರಿತು ನಾನು ಈಗಾಗಲೇ ಹೇಳಿದ್ದೇನೆ. ಅದನ್ನು 2023ರ ಚುನಾವಣೆಯ ನಂತರ ಮಾತನಾಡುತ್ತೇನೆ. ಈಗ ಆ ವಿಚಾರ ಬೇಡ ಎಂದು ಸ್ಪಷ್ಟಪಡಿಸಿದರು.
ಈ ಎರಡೂ ಬೈ ಎಲೆಕ್ಷನ್ ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದ ಮೇಲೆ 2023 ರಲ್ಲಿ ಕಾಂಗ್ರೆಸ್ 150 ಸೀಟುಗಳಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ನಿಶ್ಚಿತವಾಗಿಯೂ ಅಧಿಕಾರ ಹಿಡಿಯುತ್ತೇವೆ. ಈ ಬೈ ಎಲೆಕ್ಷನ್ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಂತ ಹೇಳುವುದಿಲ್ಲ. ಸಿಂದಗಿ ಮತ್ತು ಹಾನಗಲ್ ನಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಶಾಸಕರಿದ್ದರು. ಹೀಗಾಗಿ ಈ ಬಾರಿ ಈ ಎರಡೂ ಕ್ಷೇತ್ರಗಳನ್ನು ನಾವು ಗೆದ್ದೆ ಗೆಲ್ಲುತ್ತೇವೆ. ಜನರ ಭಾವನೆಗಳನ್ನು ನೋಡಿದರೆ, ಜನ ಬೇಸರಗೊಂಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ಸ್ಟೀಲ್, ಗೊಬ್ಬರ, ಎಣ್ಣೆ ಬೆಲೆ ಏರಿಕೆಯಿಂದ ಜನ ಬೇಸತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವಿರುದ್ಧ ಜನತೆ ಬೇಸತ್ತಿದ್ದಾರೆ. ಹೀಗಾಗಿ ಸಿಂದಗಿಯಲ್ಲಿ ಅಶೋಕ ಮನಗೂಳಿ ಗೆಲ್ಲಲಿದ್ದಾರೆ. ಹಾನಗಲ್ ನಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಎಂ. ಬಿ. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ನ. 2ಕ್ಕೆ ಚುನಾವಣೆ ಫಲಿತಾಂಶ ಹೊರ ಬರಲಿದೆ. ಯಾರು ಗೆಲ್ಲುತ್ತಾರೆ? ಯಾರು ದ್ವಿತೀಯ ಸ್ಥಾನ ಪಡೆಯುತ್ತಾರೆ? ಯಾರಿಗೆ ಎಷ್ಟು ಮತ ಬರುತ್ತದೆ? ಯಾರ ಡಿಪಾಸಿಟ್ ಜಪ್ತ್ ಆಗುತ್ತದೆ? ಮತದಾರರ ಕೈಯಲ್ಲಿದೆ. ಅದು ಅಂದು ಗೊತ್ತಾಗುತ್ತದೆ. ಸಿಂದಗಿ ಬೈ ಎಲೆಕ್ಷನ್ ನಲ್ಲಿ ಮಾಜಿ ಸಿಎಂ ಎಸ್.ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ, ಎಲ್ಲ ಪಕ್ಷದ ಪದಾಧಿಕಾರಿಗಳು, ಶಾಸಕರು, ಇಲ್ಲಿಯ ಎಲ್ಲ ನಾಯಕರು ವ್ಯವಸ್ಥಿತವಾಗಿ ತಂತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ಬಹಳ ಉತ್ತಮ ಪ್ರತಿಕ್ರಿಯೆ ಕಾಂಗ್ರೆಸ್ ಪರವಾಗಿದೆ. ಸಿಂದಗಿ ಚುನಾವಣೆಯನ್ನು 15 ರಿಂದ 20 ಅಂತರದಿಂದ ನಾವು ಗೆಲ್ಲುತ್ತೇವೆ. ಹಾನಗಲ್ ಬೈ ಎಲೆಕ್ಷನ್ ನಲ್ಲಿಯೂ ನಾವು ಭಾರಿ ಅಂತರದಿಂದ ಗೆಲ್ಲುತ್ತೇವೆ. ಎಲ್ಲರೂ ನ. 2ರ ವರೆಗೆ ಕಾಯಿರಿ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಚಂದ್ರಕಾಂತ ಶೆಟ್ಟಿ, ದಿನೇಶ ಹಳ್ಳಿ ಮುಂತಾದವರು ಉಪಸ್ಥಿತರಿದ್ದರು.