ವಿಜಯಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡದಿ ಅವರು, ಕಂಬಳಿ ವಿಚಾರವನ್ನು ರಾಜಕೀಯಕ್ಕೆ ಎಳೆದು ತಂದಿದ್ದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಕಂಬಳಿ ಬಗ್ಗೆ ಪ್ರಸ್ತಾಪ ಮಾಡಿದ್ದು ನಾನಲ್ಲ. ಮೊದಲು ಮಾತನಾಡಿದ್ದು ಯಾರು? ಸಿಎಂ ಹೇಳಿದ್ದೆಲ್ಲ ಸತ್ಯನಾ? ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು ಎಂದು ಹೇಳಿದವರು ಮಿಸ್ಟರ್ ಬಸವರಾಜ ಬೊಮ್ಮಾಯಿ. ಆಗ ನಾನು ಕುರಿ ಕಾಯ್ದಿರೋನು. ಕುರುಬರ ಜಾತಿಯಲ್ಲಿ ಹುಟ್ಟಿರೋನು. ಕಂಬಳಿ ಹೊತ್ತುಕೊಂಡಿರೋನು. ಕಂಬಳಿ ಹಾಕಿಕೊಂಡಿರೋನು ಎಂದು ಹೇಳಿದೆ. ಅದು ಹೇಗೆ ಅವಮಾನ ಮಾಡಿದ್ದೇನೆ ನಾನು? ಸಿಎಂ ಹೇಳಿ ಬಿಟ್ಟು ಇದನ್ನು ಅವರೇ ಅಸ್ತ್ರ ಮಾಡಿಕೊಂಡರೆ ಇದು ಅವರಿಗೆ ತಿರುಗುಬಾಣ ಆಗುತ್ತೆ ಎಂದು ಅವರು ಹೇಳಿದರು.
ಕಂಬಳಿ ಬಗ್ಗೆ ನಮಗೆ ಗೌರವವಿದೆ. ಕಂಬಳಿ ನೇಯುವವರು ಕುರುಬರು. ಹೆಚ್ಚೆಂದರೆ ಗೊಲ್ಲರು ನೇಯುತ್ತಾರೆ. ಬೇರೆಯವರಾರು ಕಂಬಳಿ ನೇಯುವಿದಿಲ್ಲ. ಬಸವರಾಜ ಬೊಮ್ಮಾಯಿ, ಅವರ ಮನೆಯವರು ಕುರಿ ಕಾಯ್ದಿದ್ದಾರಾ? ಬಸವರಾಜ ಬೊಮ್ಮಾಯಿ ಎಲ್ಲಿ ಕುರಿ ಕಾಯ್ದಿದ್ದಾರೆ? 2008ರಲ್ಲಿ ಇವರು ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು? ಕುಮಾರಸ್ವಾಮಿ ನಾನೂ ಕುರಿಗಳ ಮಂದೆಯಲ್ಲಿ ಮಲಗಿದ್ದೇನೆ ಎಂದು ಹೇಳಿದ್ದಾರೆ. ಇವರ ತಂದೆ 1962ರಲ್ಲಿ ಎಂಎಲ್ಎ ಆಗಿದ್ದಾರೆ. ಆ ಬಳಿಕ ಇವರು ಜನಿಸಿದ್ದಾರೆ. ಇವರು ಎಲ್ಲಿ ಕುರಿ ಕಾಯ್ದಿದ್ದಾರೆ? ಹೇಳಿ ನೋಡೋಣ. ಬಸವರಾಜ ಬೊಮ್ಮಾಯಿ ತಂದೆ ಎಸ್. ಆರ್. ಬೊಮ್ಮಾಯಿ ಎಂಎಲ್‌ಎ, ಎಂ ಎಲ್ ಸಿ, ವಿಧಾನ ಸಭೆ ಪ್ರತಿಪಕ್ಷದ ನಾಯಕರಾಗಿದ್ದರು. ಇವರು ಅವರ ಮಗ ಇವರು ಎಲ್ಲಿ ಕುರಿ ಕಾಯ್ದಿದ್ದಾರೆ? ಎಂದು ಪ್ರಶ್ನಿಸಿದರು.
ಬಾಳು ಮಾಮಾನ ಕುರಿ ಕಾಯ್ದಿದ್ದಾಗಿ ಹೇಳುವತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಕೇವಲ ಪ್ರಚಾರಕ್ಕಾಗಿ ಹೇಳುತ್ತಾರೆ. ನಾನು ಅದರ ಬಗ್ಗೆ ಮಾತನಾಡಲ್ಲ. ಕಂಬಳಿ ನಮ್ಮ ಸಂಕೇತ. ನಾನು ಅದಕ್ಕೆ ಅಗೌರವ ಮಾಡಲು ಹೋಗಲ್ಲ. ನಾನು ಅದನ್ನು ಇವತ್ತಿನ ವರೆಗೂ ರಾಜಕೀಯಕ್ಕೆ ತಂರಿದಲಿಲ್ಲ. ಬಸವರಾಜ ಬೊಮ್ಮಾಯಿ ಅದನ್ನು ರಾಜಕೀಯಕ್ಕೆ ತಂದಿದ್ದಾರೆ ಎಂದು ಸಿದ್ಧರಾಮಯ್ಯ ವಾಗ್ದಾಳಿ ನಡೆಸಿದರು.
ಕಂಬಳಿ ವಿಚಾರವಾಗಿ ಸಿ ಟಿ ರವಿ ಟೋಪಿ ಚಿತ್ರ ಹಾಕಿ ಟ್ವಿಟಾ ಮಾಡಿದ ವಿಚಾರ
ನಾನು ಕಂಬಳಿನೂ ಹಾಕಿಕೊಳ್ತೇನೆ. ಟೋಪಿನೂ ಹಾಕಿಕೊಳ್ತೇನೆ. ಇವನಾರು ಕೇಳೋಕೆ? ನಾನು ಮುಸ್ಲಿಮರ ಟೋಪಿಯನ್ನು ಹಾಕಿಕೊಳ್ತೇನೆ. ಕ್ರಿಶ್ಚಿಯನರದ್ದು ಹಾಕಿಕೊಳ್ತೇನೆ. ಕುರುಬರದು ಹಾಕಿಕೊಳ್ತೇನೆ. ಹಿಂದೂಗಳದ್ದು ಹಾಕಿಕೊಳ್ತೇನೆ. ಗಾಂಧಿ ಟೋಪಿನೂ ಹಾಕಿಕೊಳ್ತೇನೆ. ಇವನಾರು ಕೇಳೋಕೆ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ಕಂಬಳಿ ಮಾಡಿ ತೋರಿಸಲು ಕುಮಾರಸ್ವಾಮಿ ಸವಾಲು ವಿಚಾರ
ನಾನು ಕಂಬಳಿ ನೇಯ್ದಿದ್ದೇನೆ ಎಂದು ಹೇಳಿಲ್ಲ. ನಾನು ಕಂಬಳಿ ನೇಯ್ದಿಲ್ಲ. ಕಂಬಳಿ ತಯಾರಿಸುವವರಿಗೆ ತುಪ್ಪಳ ನೀಡಿದ್ದೇವೆ. ಕುರಿ ತುಪ್ಪಟ ಕೊಟ್ಟಿದ್ದೇವೆ. ನಮ್ಮ ಮನೆಗೆ ಬಂದು ಕುರಿ ತುಪ್ಪಟ ತೆಗೆದುಕೊಂಡು ಕಂಬಳಿ ಕೊಡ್ತಿದ್ದರು. ನಾನೆಂದೂ ನೇಯ್ದಿಲ್ಲ. ಸುಳ್ಳು ಹೇಳಬಾರದು. ತುಪ್ಪಟ ತೆಗೆದುಕೊಳ್ಳುವವರು, ಕಂಬಳಿ ನೇಯುವವರು ಬೇರೆಯವರಿದ್ದಾರೆ. ನಾನು ಕುರಿ ಮೇಯ್ಸಿದ್ದೇನೆ ಅಷ್ಟೆ. ಕುರಿಗಳ ತುಪ್ಪಳ ತೆಗೆದುಕೊಂಡು ಫ್ರೀಯಾಗಿ ಪಡೆದು ಕಂಬಳಿ ಮಾಡಿ ಕೊಡುತ್ತಾರೆ. ಇದು ಅವರಿಗೆ ಗೊತ್ತಾ? ಎಂದು ಎಸ್. ಸಿದ್ಧರಾಮಯ್ಯ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ವಾಗ್ದಾಳಿ
ಬಿಜೆಪಿ ಸುನಾಮಿ ಅಲೆ ಇದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯೆ. ಸುನಾಮಿ ಎಂದರೆ ಏನು? ಅಭಿವೃದ್ಧಿ ಬಗ್ಗೆ ಹೇಳಲಿ. ಸಿಂದಗಿಯಲ್ಲಿ ಏನೇನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಹೇಳಲಿ. ಯಾರು ಅಧಿಕಾರದಲ್ಲಿದ್ದಾರೆ ಎಂಬುದನ್ನು ಹೇಳಲಿ. ಎಂ. ಸಿ.. ಮನಗೂಳಿ ಸಚಿವ, ಶಾಸಕರಾಗಿದ್ದಾಗ ಈ ಭಾಗಲ್ಲಿ ಕುಡಿಯಲು ನೀರು ಕೊಟ್ಟಿದ್ದಾರೆ. ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮಾಜಿ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಎರಡು ಬಾರಿ ಶಾಸಕರಾಗಿ ಏನು ಅಭಿವೃದ್ಧಿ ಮಾಡಿದ್ದಾರೆ? ಎಂದು ಅವರು ಪ್ರಶ್ನಸಿದರು.
ಡ್ರಗ್ಸ್, ಕ್ರಿಪ್ಕೋ ಕರೆನ್ಸಿ ಆರೋಪಿಗಳ ರಕ್ಷಣೆ ವಿಚಾರ
ಪ್ರಧಾನಿ ಕಚೇರಿಯಿಂದ ರಾಜ್ಯ ಡಿಜಿಐಜಿ ಕಚೇರಿಕೆ ಗಪ್ತ ಡ್ರಗ್ ಮತ್ತು ಬಿಟ್ ಕಾಯಿನ್ ಮಾಫಿಯಾದಲ್ಲಿ ಪ್ರಭಾವಿಗಳು ಬಿಜೆಪಿಯಲ್ಲಿ ಶಾಮೀಲಾಗಿದ್ದಾರೆ. ಅದನ್ನು ಮುಚ್ಚಿ ಹಾಕುವ ಪ್ರಯತ್ನವನ್ನು ತನಿಖಾಧಿಕಾರಿಗಳು ಮಾಡುತ್ತಿದ್ದಾರೆ. ಅದನ್ನು ಯಾವುದೇ ಕಾರಣಕ್ಕೂ ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು. ಯಾರು ತಪ್ಪಿತಸ್ಥರಿದ್ದಾರೆ, ಯಾರೇ ಪ್ರಭಾವಿಗಳಿದ್ದರೂ ಅದನ್ನು ಬಯಲು ಮಾಡಬೇಕು. ಅವರಿಗೆ ರಕ್ಷಣೆ ಕೊಡಬಾರದು. ಭಾಗಿಯಾದವರನ್ನು ಬಹಿರಂಗ ಮಾಡಬೇಕು. ಈ ಪ್ರಕರಣದ ಅಂತಿಮ ವರದಿ ಇನ್ನೂ ಸಲ್ಲಿಕೆಯಾಗಿಲ್ಲ. ಎಷ್ಟೇ ಪ್ರಭಾವಿಗಳಿರಿ, ಆಡಳಿತ ಪಕ್ಷದವರಿದ್ದರೂ ರಕ್ಷಣೆ ಕೊಡಕೂಡದು ಎಂದು ಅವರು ತಿಳಿಸಿದರು.
ಸಿಂದಗಿ, ಹಾನಗಲ್ ಎರಡೂ ಕಡೆ ಗೆಲ್ಲುತ್ತೇವೆ
ನಿರೀಕ್ಷೆಗೆ ಮೀರಿ ಪ್ರತಿಕ್ರಿಯೆ ಬರ್ತಿದೆ. ನಮ್ಮ ಎಲ್ಲ ಶಾಸಕರು, ಮುಖಂಡರು ಪಕ್ಷಕ್ಕಾಗಿ ದುದಿಡಿದ್ದಾರೆ. ಸಿಂದಗಿ ಪಟ್ಟಣ, ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಪರ ಅಲೆಯಿದೆ. ಬಿಜೆಪಿಯವರಿಗೆ ಸಾಧನೆ ಹೇಳಿಕೊಳ್ಳಲು ಯಾವುದೇ ಯೋಜನೆಗಳಿಲ್ಲ. ಕಳೆದ ಎರಡೂ ಕಾಲು ವರ್ಷದಿಂದ ಏನು ಸಾಧನೆ ಮಾಡಿದ್ದೇವೆ ಎಂದು ಹೇಳಲು ಆಗುತ್ತಿಲ್ಲ. ಕೇಂದ್ರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರಕಾರ ಜನವಿರೋಧಿ ಕೆಲಸ ಮಾಡುತ್ತ ಕುಳಿತಿದೆ. ಬೆಲೆ ಏರಿಕೆ ಇಂದು ಗಗನಕ್ಕೇರಿದೆ. ಜನರು ಈಗ ಕರ್ನಾಟಕ ಮತ್ತು ದೇಶದಲ್ಲಿ ಇವರ ಆಡಳಿತದಿಂದ ಬೇಸತ್ತಿದ್ದಾರೆ. ಕರ್ನಾಟಕದಲ್ಲಂತೂ ಜನರು ಬಿಜೆಪಿಗೆ ಶಾಪ ಹಾಕುತ್ತಿದ್ದಾರೆ. ಎರಡೂ ಕಡೆ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಸ್ಪರ್ಧೆ ಇದೆ. ಜೆಡಿಎಸ್ ಸ್ಪರ್ಧೆಯಲ್ಲಿ ಇಲ್ಲ. ಅಲ್ಪಸಂಖ್ಯಾತರು ಬುದ್ದಿವಂತರಿದ್ದಾರೆ. ಜಾತ್ಯತೀತ ಪಕ್ಷ ಎಂಬುದು ಅವರಿಗೆ ಗೊತ್ತಿದೆ. ಸಂವಿಧಾನ ಉಳಿಸುವ ಪಕ್ಷಕ್ಕೆ ಅವರು ಮತ ಹಾಕುತ್ತಾರೆ. ಕೋಮುವಾದಿಗಳ ಜೊತೆ ಕೈ ಜೋಡಿಸುವವರಿಗೆ ಅವರು ಓಟು ಹಾಕುವುದಿಲ್ಲ. ಮಾಜಿ ಪ್ರಧಾನಿ ಮನಮೋಹನಸಿಂಗ್ ಮತ್ತು ನಾನು ಸಿಎಂ ಆಗಿದ್ದಾಗ ಮಾಡಿದ ಸಾಧನೆಗಳನ್ನು ಜನ ಈಗ ನೆನಪಿಸಿಕೊಳ್ಳುತ್ತಿದ್ದಾರೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ ಅಭಿಪ್ರಾಯವಾಗಿದೆ. ಬೆಲೆ ಏರಿಕೆ ವಿರೋದ್ಧವಾದಂಥ ಅಭಿಪ್ರಾಯವಿದೆ. ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಜನಸಾಮಾನ್ಯರು ಈಗ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಈಗ ಅಡ್ವಾಂಟೇಜ್ ಇದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಮತ್ತು ಬಬಲೇಶ್ವರ ಹಾಲಿ ಶಾಸಕ ಎಂ. ಬಿ. ಪಾಟೀಲ, ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಭೀಮಾ ನಾಯಕ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.