ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಡಿ. ರಂದೀಪ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಜಯಪುರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು, ಜಲಧಾರೆ ಯೋಜನೆ ಅಡಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಶಾಶ್ವತ ಕುಡಿಯುವ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಪ್ರತಿ ಮನೆಗಳು, ಗ್ರಾಮಗಳು ಮತ್ತು ನಗರ ಪ್ರದೇಶಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಜನವಸತಿ ಇಲ್ಲದ ಪ್ರದೇಶಗಲ್ಲಿ ಕಸ ವಿಲೇವಾರಿ ಮಾಡಬೇಕು. ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು 25 ಗ್ರಾ. ಪಂ. ಗಳನ್ನು ಆಯ್ಕೆ ಮಾಡಲಾಗಿದ್ದು, ಉತ್ತಮ ಪ್ರಗತಿ ಸಾಧಿಸಲಾಗಿದೆ. ಪ್ರಗತಿ ಕಡಿಮೆಯಾಗಿರುವ ಗ್ರಾ. ಪಂ. ಗಳು ಇನ್ನು ಮುಂದೆ ಕಡ್ಡಾಯವಾಗಿ ಉತ್ತಮ ಪ್ರಗತಿ ತೋರಿಸಬೇಕು ಎಂದು ಅವರು ತಿಳಿಸಿದರು.
ಪಶುಸಂಗೋಪನೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಕ್ರಮ ಕೈಗೊಳ್ಳಲಾಗುವುದು. ವಿಜಯಪುರ ಜಿಲ್ಲೆಯಲ್ಲಿರುವ ಆಕ್ಸಿಜನ್ ಪ್ಲ್ಯಾಂಟ್ ಗಳಿಗೆ ವಿದ್ಯುತ್ ಸರಬರಾಜು ವ್ಯತ್ಯಯವಾಗದಂತೆ ಪ್ರತ್ಯೇಕ ವಿದ್ಯುತ್ ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಎಲ್ಲಾ ಇಲಾಖೆಗಳು ಸಹಕಾರದಿಂದ ಕಾರ್ಯವನ್ನು ನಿರ್ವಹಿಸಿ ಜಿಲ್ಲೆಯ ಏಳಿಗೆಗಾಗಿ ಶ್ರಮಿಸಬೇಕು ಎಂದು ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.