ವಿಜಯಪುರ: ಬಸವ ನಾಡಿನ ವಿಜಯಪುರ ನಗರದ ಕಾಲೇಜಿಗೆ ಈ ಬಾರಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಆವರಣ ಪ್ರಶಸ್ತಿ ಲಭಿಸಿದೆ.
ವಿಜಯಪುರ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಮತ್ತು ಅತಿ ಹೆಚ್ಚು ವಿದ್ಯಾರ್ಥಿಗಳ ಸಂಖ್ಯೆ ಹೊಂದಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಛತ್ರಪತಿ ಶಿವಾಜಿ ಮಹಾರಾಜರ ಎಜ್ಯುಕೇಷನ್ ಸೊಸೈಟಿಯ ಶ್ರೀ ರವೀಂದ್ರನಾಥ ಠಾಗೋರ್ ಶಾಲೆ ಮತ್ತು ಕಾಲೇಜಿಗೆ ಕರ್ನಾಟಕ ರಾಜ್ಯೋತ್ಸವವದ ಅಂಗವಾಗಿ ಪ್ಲಾಸ್ಟಿಕ್ ಮುಕ್ತ ಶಾಲೆ ಆವರಣ ಪ್ರಶಸ್ತಿ ಲಭಿಸಿದೆ.
ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಇತ್ತಿಚೆಗೆ ಪ್ಲಾಸ್ಟಿಕ್ ಮುಕ್ತ ಶಾಲೆಗಳ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದಾರೆ. ಅಲ್ಲದೇ, ಪ್ಲಾಸ್ಟಿಕ್ ಮುಕ್ತ ಶಾಲೆಗಳನ್ನಾಗಿ ಮಾಡುವಂತೆ ಮಕ್ಕಳು, ಪಾಲಕರು ಹಾಗೂ ಸಿಬ್ಬಂದಿ ವರ್ಗದವರಲ್ಲಿ ಜಾಗೃತಿ ಮೂಡಿಸಿದ್ದರು. ಇದನ್ನು ಅನುಸರಿಸಿದ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾ ಶಿವಾಜಿ ಗಾಯಕವಾಡ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ವಸಂತ ಗಾಯಕವಾಡ ಹಾಗೂ ಕಾರ್ಯದರ್ಶಿ ರೀತಾ ಗಾಯಕವಾಡ ಇವರ ಮಾರ್ಗದರ್ಶನದಲ್ಲಿ ಶಾಲಾ ಕಾಲೇಜಿನ ಪ್ರಿನ್ಸಿಪಲ್ ಜಯರಾಮ ಮತ್ತು ಮುಖ್ಯ ಗುರುಮಾತೆ ದರ್ಶನಾ ಬೊಹಿಟೆ ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಮುಕ್ತ ಆವರಣದ ಕುರಿತು ಜಾಗೃತಿ ಮೂಡಿಸಿದ್ದರು. ಶಾಲೆಯಲ್ಲಿ ಪರಿಸರ ರಕ್ಷಿಸುವ ಸಲಕರಣೆಗಳನ್ನು ಬಳಸಲಾಗಿದೆ. ತರಗತಿಗಳಲ್ಲಿ ಕೂಡ ಪ್ಲಾಸ್ಟಿಕ್ ರಹಿತ ಸಲಕರಣೆಗಳ ಬಳಕೆಯಾಗುತ್ತಿದೆ. ವಿದ್ಯಾರ್ಥಿಗಳು ಸಹ ಪ್ಲಾಸ್ಟಿಕ್ ರಹಿತ ವಸ್ತುಗಳನ್ನು ಬಳಸತೊಡಗಿದ್ದಾರೆ. ವಿಜಯಪುರ ನಗರದ 67 ಶಾಲೆಗಳಲ್ಲಿ ಎರಡು ವಿಭಾಗಕ್ಕೆ ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಪ್ರಶಸ್ತಿ ಬಂದಿದೆ. ಸಂ. 4.30 ಕ್ಕೆ ಐತಿಹಾಸಿಕ ಗೋಲಗುಂಬಜ್ ಆವರಣದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ತಮ್ಮ ಶಾಲೆಗೆ ಪ್ರಶಸ್ತಿ ಬಂದಿರುವುದಕ್ಕೆ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸಂತಸ ವ್ಯಕ್ತಪಡಿಸಿದ್ದಾರೆ.