25 ಸಾವಿರ ಮತಗಳ ಅಂತರ ನಿರೀಕ್ಷಿಸಿದ್ದೆ- ಒಂದು ವಾರದಲ್ಲಿ ಎಲ್ಲ ನಾಯಕರನ್ನು ಕರೆಯಿಸಿ ವಿಜಯೋತ್ಸವ ಮಾಡುತ್ತೇವೆ ಎಂದ ಸಿಂದಗಿ ನೂತನ ಶಾಸಕ ರಮೇಶ ಭೂಸನೂರ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ನಲ್ಲಿ 25 ಸಾವಿರ ಮತಗಳ ಅಂತರ ನಿರೀಕ್ಷೆ ಮಾಡಿದ್ದೆ.  ಆದರೆ, ನಿರೀಕ್ಷೆಗೂ ಮೀರಿ ಜನ ತಮಗೆ ಭಾರಿ ಅಂತರದಿಂದ ಗೆಲ್ಲಿಸಿದ್ದಾರೆ.  ಚುನಾವಣೆಯಲ್ಲಿ ಪ್ರಚಾರ ಕೈಗೊಂಡ ಎಲ್ಲ ಬಿಜೆಪಿ ನಾಯಕರನ್ನು ಕರೆಯಿಸಿ ವಿಜಯೋತ್ಸವ ಮಾಡುವುದಾಗಿ ಸಿಂದಗಿ ನೂತನ ಬಿಜೆಪಿ ಶಾಸಕ ರಮೇಶ ಭೂಸನೂರ ತಿಳಿಸಿದ್ದಾರೆ.

ವಿಜಯಪುರದಲ್ಲಿ ಚುನಾವಣೆ ಗೆಲುವಿನ ಸಂದರ್ಭದಲ್ಲಿ ಮಾತನಾಡಿದ ಅವರು, ತಮ್ಮ ಗೆಲುವಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ ಕುಮಾರ ಕಟೀಲ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಲಕ್ಷ್ಮಣ ಸವದಿ, ವಿ. ಸೋಮಣ್ಣ. ಸಿ. ಸಿ. ಪಾಟೀಲ, ಶಶಿಕಲಾ ಜೊಲ್ಲೆ ಮತ್ತು ಇತರ ಸಚಿವರ ದಂಡು ಇಲ್ಲಿಗೆ ಬಂದು ಕೆಲಸ ಮಾಡಿದ್ದಾರೆ.  ಶ್ರಮ ಹಾಕಿದ್ದಾರೆ.  ಪಕ್ಷದ ಕಾರ್ಯಕರ್ತರು, ಸಂಘಟನೆ ಪ್ರಮುಖರು, ಜಿಲ್ಲಾಧ್ಯಕ್ಷರು, ಶಾಸಕ ಪಿ. ರಾಜೀವ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸೋಮನಗೌಡ ಪಾಟೀಲ ಸಾಸನೂರ, ಎ. ಎಸ್. ಪಾಟೀಲ ನಡಹಳ್ಳಿ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ ಸದಸ್ಯ ಅರುಣ ಶಹಾಪುರ ಸೇರಿದಂತೆ ನಾಯಕರು ಇಲ್ಲಿಗೆ ಬಂದು ಪ್ರಚಾರ ಮಾಡಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗ್ರಾಮೀಣ ಭಾಗದಲ್ಲಿ ಪ್ರಚಾರ ನಡೆಸಿ ಒಂದೇ ದಿನದಲ್ಲಿ 15 ಗ್ರಾಮಗಳಲ್ಲಿ ಪ್ರಚಾರ ಮಾಡಿದ್ದು ಅನುಕೂಲವಾಗಿದೆ.  ನಾನು 25 ಸಾವಿರ ಮತಗಳ ಅಂತರವನ್ನು ನಿರೀಕ್ಷಿಸಿದ್ದೆ.  ಆದರೆ, 30 ಸಾವಿರ ಮತಗಳು ಬಂದಿದ್ದು ನಿರೀಕ್ಷೆಗೂ ಮೀರಿದೆ ಎಂದು ಅವರು ತಿಳಿಸಿದರು.

ಈ ಬಾರಿ ಭೂಸನೂರ ಅವರನ್ನು ಗೆಲ್ಲಿಸಬೇಕು ಎಂಬುದು ಸಿಂದಗಿ ಮತಕ್ಷೇತ್ರದ ಜನರ ಉದ್ದೇಶವಾಗಿತ್ತು. ಭೂಸನೂರ ಅವರನ್ನು ಕಳೆದುಕೊಂಡಿದ್ದೇವೆ.  ಮತ್ತೆ ಪಡೆದುಕೊಳ್ಳಬೇಕು ಎಂಬುದು ಜನರ ನಿರೀಕ್ಷೆಯಾಗಿತ್ತು.  ನಾನೊಬ್ಬ ಜನರ ಮಧ್ಯೆ ಕೆಲಸ ಮಾಡುವವನು.  2018ರಲ್ಲಿ ಚುನಾವಣೆಯಲ್ಲಿ ಸೋತರೂ ಸುಮ್ಮನೇ ಕೂತಿರಲಿಲ್ಲ.  ಚುನಾವಣೆಯಲ್ಲಿ ಸೋತಿರಬಹುದು.  ಆದರೆ, ಜನರ ಪ್ರೀತಿಯಲ್ಲಿ ಸೋತಿಲ್ಲ ಎಂಬುದು ನನಗೆ ಗೊತ್ತಿತ್ತು.  ಅದಕ್ಕಾಗಿ ಜನರ ಮಧ್ಯೆ ಹೋಗಿ ಕೆಲಸ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೆ.  ಕೊರೊನಾ ಸಂದರ್ಭದಲ್ಲಿ ಅನೇಕ ಗ್ರಾಮಗಳಲ್ಲಿ ಸುತ್ತಾಡಿ ಕಿಟ್ ಹಂಚಿದ್ದೇನೆ.  ಉಚಿತವಾಗಿ ಅಂಬ್ಯೂಲನ್ಸ್ ಸೇವೆ ಒದಗಿಸಿದ್ದೇನೆ.  ಭೀಮಾ ನದಿ ಪ್ರವಾಹ ಬಂದಾಗ ಜನರನ್ನು ಸಂತೈಸಿ ಶಕ್ತಿ ತುಂಬುವ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.

ಪಕ್ಷದ ಮೇಲೆ ಇಟ್ಟಿರುವ ವಿಶ್ವಾಸ, ಪಕ್ಷದ ನಾಯಕರು, ಮುಖ್ಯಮಂತ್ರಿಗಳು ಮತ್ತು ಸಚಿವರ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ.  ಈ ಚುನಾವಣೆ 2023ರ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿಯಾಗಿದೆ.  ಚುನಾವಣೆ ಸಂದರ್ಭದಲ್ಲಿ ನಮ್ಮ ನಾಯಕರು ಮತಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಾಗ ತಾವು ಗೆದ್ದ ಮೇಲೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದರು.  ಆದರಂತೆ ನಮ್ಮ ಎಲ್ಲ ನಾಯಕರನ್ನು ಕರೆಯಿಸಿ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತೇವೆ.  ಒಂದು ವಾರದಲ್ಲಿ ವಿಜಯೋತ್ಸವ ಕಾರ್ಯಕ್ರಮ ಮಾಡುತ್ತೇವೆ.  ಮುಂಬರುವ ದಿನಗಳಲ್ಲಿ ಸಿಂದಗಿ ಪಟ್ಟಣ ಸುಂದರವಾಗಿ ಮಾಡುತ್ತೇನೆ.  ಒಳಚರಂಡಿ ಮಾಡುತ್ತೇನೆ.  ರಸ್ತೆಗಳು ಹದಗೆಟ್ಟಿವೆ.  ಇವುಗಳಿಗೆ ವಿಶೇಷ ಪ್ಯಾಕೇಜ್ ಮೂಲಕ ಸಿಸಿ ರಸ್ತೆ ಮಾಡಲಾಗುವುದು.  ಉದ್ಯಾನಗಳನ್ನು ನಿರ್ಮಿಸಲಾಗುವುದು.  ಆಲಮೇಲ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.  ಅಲ್ಲಿ ಎಲ್ಲ ತಾಲೂಕು ಕಚೇರಿಗಳು ಸ್ಥಾಪನೆಯಾಗಬೇಕು. ಗ್ರಾಮಾಂತರ ರಸ್ತೆಗಳು ಹದಗೆಟ್ಟಿದ್ದು, ಅವುಗಳನ್ನು ದುರಸ್ಥಿ ಪಡಿಸಲಾಗುವುದು.  ಯುವಕರಿಗೆ ಉದ್ಯೋಗ ಭರವಸೆಯನ್ನು ಈ ಹಿಂದೆ ನೀಡಿದ್ದೆ.  ಅದನ್ನೂ ಈಡೇರಿಸಲು ಪ್ರಯತ್ನಿಸುವುದಾಗಿ ರಮೇಶ ಭೂಸನೂರ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌