ಸೋಲನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಎಂದ ಸಿಂದಗಿ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಫಲಿತಾಂಶ ಹೊರ ಬಂದಿದೆ.  31 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದೇನೆ.  ಈ ಸೋಲನ್ನು ನಮ್ರವಾಗಿ ಸ್ವೀಕರಿಸುತ್ತೇನೆ ಎಂದು ಈ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ತಮ್ಮ ಸೋಲನ್ನು ಸ್ವೀಕರಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಂದಗಿ ಮತಕ್ಷೇತ್ರದ ಮತದಾರ ಪ್ರಭುಗಳಿಗೆ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ.  ನನ್ನ ಪರವಾಗಿ ಮತ ಹಾಕಿದ 63 ಸಾವಿರ ಮತದಾರರು, ನನ್ನ ವಿರುದ್ಧವಾಗಿ ಮತ ಹಾಕಿದ 90 ಸಾವಿರ ಮತದಾರರಿಗೆ ಸೇರಿ ಎಲ್ಲರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಅವರು ತಿಳಿಸಿದರು.

ಈಗ ನಾನು ಸೋತಿದ್ದೇನೆ.  ಮುಂಬರುವ ದಿನಗಳಲ್ಲಿ ಸಿಂದಗಿ ಮತಕ್ಷೇತ್ರದ ಜನಸೇವೆ ಮುಂದುವರೆಸುತ್ತೇನೆ.  ಚುನಾವಣೆ ಸಂದರ್ಭದಲ್ಲಿ ನನ್ನ ಪರವಾಗಿ ಕೆಲಸ ಮತ್ತು ಪ್ರಚಾರ ಮಾಡಿದ ಕಾಂಗ್ರೆಸ್ ಹಿರಿಯ ನಾಯಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.  ನಾನೂ ಕೂಡ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕೆಳ ಮಟ್ಟದಿಂದ ಕೆಲಸ ಮಾಡುತ್ತೇನೆ.  ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮತ್ತೋಮ್ಮೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಅಶೋಕ ಮನಗೂಳಿ ತಿಳಿಸಿದರು.

ಬಿಜೆಪಿ ಆಡಳಿತ ಯಂತ್ರದ ದುರುಪಯೋಗ ನನ್ನ ಸೋಲಿಗೆ ಕಾರಣವಾಗಿದೆ. ಸಾಕಷ್ಟು ದುಡ್ಡಿನ ಸುರಿಮಳೆ ಸುರಿಸುವ ಮೂಲಕ ಮತದಾರರಲ್ಲಿ ಗೋಂದಲ ಮೂಡಿಸಿದ್ದು ಕಾಂಗ್ರೆಸ್ ಸೋಲಿಗೆ ಕಾರಣವಾಗಿದೆ ಎಂದು ತಿಳಿಸಿದ ಅವರು, ಜೆಡಿಎಸ್ ನಲ್ಲಿ ನನ್ನ ಜೊತೆಗಿದ್ದ ಎಲ್ಲ ಮುಖಂಡರು, ಕಾರ್ಯಕರ್ತರು ನನ್ನ ಜೊತೆಗಿದ್ದು ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದಾರೆ.  ಮುಂದಿನ ದಿನಗಳಲ್ಲಿ ದೂರ ಇರುವ ಎಲ್ಲ ನಾಯಕರನ್ನು ಉತ್ತಮ ಸಂಬಂಧ ಇಟ್ಟುಕೊಂಡು ಸಿಂದಗಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ನಾಯಕರ ಹೆಚ್ಚಿನ ಬಹಿರಂಗ ಸಭೆಗಳಿಂದ ಮತದಾರರ ಬಳಿ ವೈಯಕ್ತಿಕವಾಗಿ ತೆರಳಲು ಸಾಧ್ಯವಾಗದೇ ಇದ್ದದ್ದೂ ಕೂಡ ಚುನಾವಣೆಯಲ್ಲಿ ಹಿನ್ನೆಡೆಗೆ ಕಾರಣ ಎಂಬ ಮಾತನ್ನು ಅಲ್ಲಗಳೆದ ಅಶೋಕ ಮನಗೂಳಿ, ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ, ಈಶ್ವರ ಖಂಡ್ರೆ, ಧ್ರುವ ನಾರಾಯಣ ಎಲ್ಲ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದಾರೆ.  ಇದರಿಂದ ತಮಗೆ ಲಾಭವಾಗಿದೆ ಹೊರತು ಹಿನ್ನೆಡೆಯಾಗಿಲ್ಲ ಎಂದು ಅಶೋಕ ಮನಗೂಳಿ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

 

Leave a Reply

ಹೊಸ ಪೋಸ್ಟ್‌