ಬಿಜೆಪಿ ನಾಯಕರು, ಕಾರ್ಯಕರ್ತರು, ಪದಾಧಿಕಾರಿಗಳ ಶಿಸ್ತುಬದ್ಧ ಕೆಲಸದಿಂದಾಗಿ ಸಿಂದಗಿಯಲ್ಲಿ ನಿರೀಕ್ಷೆಗೂ ಮೀರಿ ಗೆಲುವು ಸಿಕ್ಕಿದೆ- ಸಚಿವೆ ಶಶಿಕಲಾ ಜೊಲ್ಲೆ

ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ನಾಯಕರು, ಕಾರ್ಯಕರ್ತರು, ಪದಾಧಿಕಾರಿಗಳ ಶಿಸ್ತುಬದ್ಧ ಕೆಲಸದಿಂದಾಗಿ ನಿರೀಕ್ಷೆಗೂ ಮೀರಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಗೆಲುವು ಸಾಧಿಸಿದ್ದಾರೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ಸಿಂದಗಿ ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 20 ರಿಂದ 25 ಸಾವಿರ ಮತಗಳಿಂದ ಗೆಲ್ಲುತ್ತಾರೆ ಎಂಬ ಅಂದಾಜಿತ್ತು.  ಸಿಂದಗಿ ಮತಕ್ಷೇತ್ರದ ಎಲ್ಲ ಮತದಾರ ಬಂಧು-ಭಗೀನಿಯರು ಬಹಳಷ್ಟು ಅಂತರದಿಂದ ಗೆಲುವು ಕೊಟ್ಟಿದ್ದಾರೆ ಎಂದು ಹೇಳಿದರು.

ಸಿಂದಗಿ ಮತಕ್ಷೇತ್ರದಲ್ಲಿರುವ ಕಾರ್ಯಕರ್ತರ ತಂಡ, ಪಕ್ಷದ ಪದಾಧಿಕಾರಿಗಳ ತಂಡ, ವಿಶೇಷವಾಗಿ ಮಹಿಳಾ ಕಾರ್ಯಕರ್ತೆಯರು, ಚುನಾವಣೆ ಉಸ್ತುವಾರಿ ಹೊತ್ತಿದ್ದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಿ. ಸಿ. ಪಾಟೀಲ ಮತ್ತು ವಿ. ಸೋಮಣ್ಣ ಎಲ್ಲರೂ ಬಹಳಷ್ಟು ಒಳ್ಳೆಯ ರೀತಿಯಲ್ಲಿ ಪರಿಶ್ರಮ ಹಾಕಿದ್ದಾರೆ.  ನಾವೆಲ್ಲ ಒಗ್ಗಟ್ಟಿನಿಂದ ಕೆಲಸವನ್ನು ಹಂಚಿಕೊಂಡು ಮಾಡಿದ್ದರಿಂದ ಈ ಗೆಲುವು ಸಾಧ್ಯವಾಗಿದೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಎರಡು ಬಾರಿ ಸಿಂದಗಿಗೆ ಬಂದು ಮತ ಯಾಚಿಸಿದ್ದೂ ಯಶಸ್ವಿಗೆ ಕಾರಣವಾಗಿದೆ.  ರಮೇಶ ಭೂಸನೂರ ಎರಡು ಬಾರಿ ಶಾಸಕರಾಗಿದ್ದಾಗ 10 ವರ್ಷ ಸಾಧ್ಯವಾದಷ್ಟು ಕೆಲಸ ಮಾಡಿದ್ದಾರೆ.  ರಾಜ್ಯ ಮತ್ತು ಕೇಂದ್ರ ಸರಕಾರದ ಪ್ರತಿಯೊಂದು ಯೋಜನೆಗಳೂ ಪ್ರತಿಯೊಂದು ಕುಟುಂಬಕ್ಕೂ ತಲುಪಿರುವುದು ನಾವು ಪ್ರಚಾರ ಕೈಗೊಂಡಾಗ ಗೊತ್ತಾಗಿದೆ.  ಈ ಕ್ಷೇತ್ರದಲ್ಲಿ ಶೇ. 50 ರಷ್ಟು ಮಹಿಳಾ ಮತದಾರರು ಇರುವುದರಿಂದ ಮಹಿಳೆಯರ ತಂಡ ಮಾಡಿ ಪ್ರತಿಯೊಂದು ಹಳ್ಳಿಗಳಲ್ಲಿ ಮಹಿಳೆಯರ ಮನೆಗೆ ಹೋಗಿ ಅರಿಶಿಣ, ಕುಂಕುಮ ಹಚ್ಚಿ ಅವರ ಕೈಯಲ್ಲಿ ಕಮಲದ ಹೂವಿನ ಚಿತ್ರವನ್ನು ತೆಗೆದು ಮತ ಯಾಚಿಸಿದ್ದೇವೆ.  ಮಹಿಳೆಯರೂ ಬಹಳ ಉತ್ಸಾಹದಿಂದ ಭಾಗಿಯಾಗಿದ್ದಾರೆ.  ಹೀಗಾಗಿ ಎಲ್ಲ ನನ್ನ ಮತದಾರ ಬಂಧು-ಭಗೀನಿಯರು, ಕಾರ್ಯಕರ್ತರು, ಪದಾಧಿಕಾರಿಗಳು, ಸಚಿವ ಸಂಪುಟದ ಸಹೋದರರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ಎಂದು ಅವರು ತಿಳಿಸಿದರು.

20230ರ ಚುನಾವಣೆಗೆ ಸಿಂದಗಿ ಬೈ ಎಲೆಕ್ಷನ್ ಫಲಿತಾಂಶ ದಿಕ್ಸೂಚಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವೆ ಶಶಿಕಲಾ ಜೊಲ್ಲೆ, 2023ರ ಚುನಾವಣೆ ಸಮೀಪವಿದೆ.  ಮುಖ್ಯಮಂತ್ರಿಗಳಿಂದ ಹಿಡಿದು ನಮ್ಮ ಎಲ್ಲ ಸಚಿವರು ಕೂಡ ಸಿಂದಗಿ ಮತಕ್ಷೇತ್ರದಲ್ಲಿ ಓಡಾಡಿದ್ದೇವೆ.  ಸಿಂದಗಿ ಮತಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳು ಬಹಳಷ್ಟಿವೆ.  ನಾವೆಲ್ಲರೂ ಅದನ್ನು ನೋಟ್ ಮಾಡಿಕೊಂಡಿದ್ದೇವೆ.  ಯಾವ್ಯಾವ ಇಲಾಖೆಗೆ ಯಾವ್ಯಾವ ಕೆಲಸಗಳು ಅವಶ್ಯಕ ಇವೆ ಎಂಬುದನ್ನು ನೋಟ್ ಮಾಡಿಕೊಳ್ಳುತ್ತಿದ್ದೇವೆ.  14 ರಿಂದ 15 ತಿಂಗಳಲ್ಲಿ ಎಲ್ಲರೂ ಸೇರಿಕೊಂಡು ಇಲ್ಲಿ ಕಣ್ಣಾರೆ ನೋಡಿರುವ ಸಮಸ್ಯೆಗಳು ಪರಿಹರಿಸುತ್ತೇವೆ.  ಸಾಧ್ಯವಾದಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.  ಈ ಚುನಾವಣೆಯ ಗೆಲುವು ನಿಶ್ಚಿತವಾಗಿಯೂ ನಮಗೆ 2023ರ ಚುನಾವಣೆಗೆ ದಿಕ್ಸೂಚಿಯಾಗಲಿದೆ.  ಆವಾಗಲೂ ಕೂಡ ನಾವು 100ಕ್ಕೆ 100ರಷ್ಟು ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಗೆಲುವು ಆಗಲಿದೆ ಎಂಬ ವಿಶ್ವಾಸವಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

 

Leave a Reply

ಹೊಸ ಪೋಸ್ಟ್‌