ಸಿಂದಗಿ ಬೈ ಎಲೆಕ್ಷನ್ ನಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ ದುಡ್ಡು ಪ್ರಭಾವ ಬೀರಿದೆ- ಶಾಸಕ ಶಿವಾನಂದ ಪಾಟೀಲ

ವಿಜಯಪುರ: ಸಿಂದಗಿ ಬೈ ಎಲೆಕ್ಷನ್ ಚುನಾವಣೆಯಲ್ಲಿ ನಮ್ಮ ನಿರೀಕ್ಷೆ ಹುಶಿಯಾಗಿದೆ ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಾವು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಆಶಾಭಾವನೆಯಿಂದ ಸಾಮೂಹಿಕ ಹೋರಾಟ ಮಾಡಿದ್ದೇವು.  ಆದರೆ, ನಾವು ನಿರೀಕ್ಷಿತ ಮಟ್ಟದಲ್ಲಿ ಮತ ಪಡೆಯಲಿಲ್ಲ.  ಆದರೆ, ಆ ಕ್ಷೇತ್ರದ ಜನ ಅಭೂತಪೂರ್ವ ಬೆಂಬಲ ಸೂಚಿಸಿದ್ದಾರೆ.  ಕಳೆದ ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ 20 ರಿಂದ 25 ಸಾವಿರ ಮತಗಳನ್ನು ಮಾತ್ರ ಪಡೆಯುತ್ತಿದ್ದೇವು.  ಈ ಬಾರಿ ನಾವು 62 ಸಾವಿರ ಮತಗಳನ್ನು ಅಲ್ಲಿನ ಜನ ಹಾಕಿದ್ದಾರೆ.  2023ರ ಸಾರ್ವತ್ರಿಕ ಚುನಾವಣೆಯಲ್ಲಿ ಆ ಕ್ಷೇತ್ರದ ಜನ ಕಾಂಗ್ರೆಸ್ಸನ್ನು ಖಂಡಿತವಾಗಿ ಬೆಂಬಲಿಸಿ ಗೆಲ್ಲಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ತಿಳಿಸಿದರು.

31 ಸಾವಿರ ಮತಗಳು ಅಥವಾ 3 ಮತಗಳ ಅಂತರದಿಂದ ಸೋಲುವ ಪ್ರಶ್ನೆ ಇದಲ್ಲ.  ನಮ್ಮ ಪಕ್ಷದ ಶಾಸಕಾಂಗ ನಾಯಕರು, ಕೆಪಿಸಿಸಿ ಆಧ್ಯಕ್ಷರು ಸಂಪೂರ್ಣ ಬೆಂಬಲವನ್ನು ನಮ್ಮ ಪಕ್ಷಕ್ಕೆ ಮುಡುಪಾಗಿಟ್ಟಿದ್ದರು.  ಸಹಾಯ ಕೂಡ ಮಾಡಿದ್ದರು.  ಪ್ರತಿ ಬಾರಿ ಬಂದು ಪ್ರಚಾರ ಕೂಡ ಮಾಡಿ ಹೋಗಿದ್ದಾರೆ.  ಈಶ್ವರ ಖಂಡ್ರೆ ಮತ್ತು ಧ್ರುವ ನಾರಾಯಣ ಹಗಲಿರುಳು ದುಡಿದಿದ್ದಾರೆ.  ಅವರ ಜೊತೆ ಅನೇಕ ಕಾಂಗ್ರೆಸ್ ಶಾಸಕರು ತಮ್ಮ ಬಲವನ್ನು ಧಾರೆ ಎರೆದಿದ್ದಾರೆ.  ಹಾಲಿ ಮತ್ತು ಮಾಜಿ ಶಾಸಕರು ಪ್ರತಿಯೊಂದು ಹಳ್ಳಿಹಳ್ಳಿಗೆ ಬಂದು ಪ್ರತಿಯೊಬ್ಬ ಮತದಾರರನ್ನು ಭೇಟಿ ಮಾಡಿ ಮನವಿಯನ್ನೂ ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದು ಅವರು ತಿಳಿಸಿದರು.

ಈ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಪ್ರಮುಖ ಕಾರಣ ದುಡ್ಡು ಎಂಬುದನ್ನು ದೆಹಲಿಯಲ್ಲಿ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಕೂಡ ಹೇಳಿದ್ದಾರೆ.  ಬಿಜೆಪಿ ಒಂದೊಂದು ಮನೆಗೆ ತಲಾ ರೂ. 10 ಸಾವಿರ ಹಣ ನೀಡಿ ಗೆದ್ದಿದೆ.  ಸ್ವಂತ ಬಲದ ಮೇಲೆ ಗೆದ್ದಿಲ್ಲ ಎಂದು ಅವರು ಹೇಳಿದ್ದಾರೆ.  ಸಿಂದಗಿ ಮತಕ್ಷೇತ್ರ ಈ ಮುಂಚೆ ಯಾವುದೇ ಬೈ ಎಲೆಕ್ಷನ್ ಎದುರಿಸಿರಲಿಲ್ಲ.  ಜೊತೆ ಇಷ್ಟು ಹಣದ ಪ್ರಭಾವವೂ ಇರಲಿಲ್ಲ.  ಈಗೇನಾಗಿದೆ ಎಂದರೆ ಬಿಜೆಪಿಯವರು ಬಂದ ಮೇಲೆ ಬರೀ ಹಣದ ಪ್ರಭಾವದ ಮೇಲೆಯೆ ಚುನಾವಣೆ ಗೆಲ್ಲುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಹಾನಗಲ್ ನಲ್ಲಿ ಜನ ಪ್ರಜ್ಞಾವಂತರಿದ್ದಾರೆ.  ದುಡ್ಡು ತೆಗೆದುಕೊಡರೂ ಕೂಡ ಅವರಿಗೆ ಪಾಠ ಕಲಿಸಿದ್ದಾರೆ.  ಅದೇ ನಿರೀಕ್ಷೆಯನ್ನು ನಾವು ಸಿಂದಗಿಯಲ್ಲಿ ಇಟ್ಟುಕೊಂಡಿದ್ದೇವು.  ಇದು ಬಸವ ನಾಡು.  ದುರ್ದೈವವೆಂದರೆ ಎರಡೂ ಬಸವ ನಾಡಿನ ಜನ ಇದನ್ನು ತಿಳಿದುಕೊಳ್ಳಲಿಲ್ಲ.  ಬಸವ ಕಲ್ಯಾಣ ಮತ್ತು ಬಸವಣ್ಣನ ನಾಡಾಗಿರುವ ವಿಜಯಪುರ ಜಿಲ್ಲೆಯ ಜನ ಇವರು ಏನು ಹೇಳುತ್ತಾರೆ ಎಂದು ತಿಳಿದುಕೊಳ್ಳಬೇಕಾಗಿತ್ತು.  ಅವರು ಹೇಳಿರುವುದಕ್ಕೂ ಅವರು ಮಾತನಾಡುವುದಕ್ಕೂ ಸಂಪೂರ್ಣ ವ್ಯತ್ಯಾಸವಿದೆ ಎಂದು ಶಾಸಕರು ತಿಳಿಸಿದರು.

ಈ ಮುಂಚೆ ಈ ಮತಕ್ಷೇತ್ರದಲ್ಲಿ 23 ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ 62 ಸಾವಿರ ಮತಗಳನ್ನು ಪಡೆದಿದೆ ಎಂದರೆ 2023ರಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಖಂಡಿತವಾಗಿಯೂ ಕಾರಣವಾಗಲಿದೆ ಎಂದು ತಿಳಿಸಿದ ಅವರು, ಅಭ್ಯರ್ಥಿ ಅಶೋಕ ಮನಗೂಳಿ ಅವರ ತಂದೆ ಅಧಿಕಾರದಲ್ಲಿದ್ದಾಗ ಅಶೋಕ ಮನಗೂಳಿ ಜನರೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ ಎಂಬ ಆರೋಪ ಸುಳ್ಳು.  ಅದು ಕೆಲವು ಹೇಳಿಕೊಳ್ಳಲಿಕ್ಕೆ ಮತ್ತು ಅಪಪ್ರಚಾರ ಮಾಡಲಿಕ್ಕೆ ಮಾಡಿರುವ ದೃಷ್ಠಿಕೋನ ಅಷ್ಟೇ.  ಆದರೆ, ಅದು ವಾಸ್ತವಿಕ ಸತ್ಯ. ಅಲ್ಲ ಎಂದು ಸ್ಪಷ್ಟಪಡಿಸಿದರು.

ಈ ಚುನಾವಣೆಯಲ್ಲಿ ನಾವೆಲ್ಲ ನಾಯಕರು ಒಗ್ಗಟ್ಟಿನಿಂದ ದುಡಿದಿದ್ದೇವೆ.  ಯಾವುದೇ ಆಂತರಿಕ ಭಿನ್ನಾಭಿಪ್ರಾಯ ಇಲ್ಲ.  ಕೆಲವರಿಗೆ ತಾವು ಅಭ್ಯರ್ಥಿಯಾಗಲಿಲ್ಲ ಎಂಬ ಕಾರಣದಿಂದ ಆಂತರಿಕವಾಗಿ ಯಾರಾದರೂ ವಿರೋಧ ಮಾಡಿದ್ದರೆ ಅವರು ಆತ್ಮವಿಮರ್ಶಷೆ ಮಾಡಿಕೊಂಡು ಪಕ್ಷಕ್ಕಾಗಿ ದುಡಿಯಬೇಕು ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ ಹೇಳಿದರು.

 

Leave a Reply

ಹೊಸ ಪೋಸ್ಟ್‌