ಹುಬ್ಬಳ್ಳಿ: ಕೇಂದ್ರ ಸರಕಾರ ಈಗಾಗಲೇ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿತ ಮಾಡಿದ್ದು, ಇದಕ್ಕೆ ಪೂರಕವಾಗಿ ರಾಜ್ಯ ಸರಕಾರವೂ ಸಂಜೆಯಿಂದಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ತಲಾ ರೂ. 7 ಕಡಿತ ಮಾಡಿ ಅಧಿಸೂಚನೆ ಹೊರಡಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ನಿನ್ನೆ ಸಂಜೆ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡುವ ನಿರ್ಧಾರ ಪ್ರಕಟಿಸಿದ ತಕ್ಷಣ ನಾನು ಹಣಕಾಸು ಮತ್ತು ಗೃಹ ಸಚಿವರೊಂದಿಗೆ ಮಾತನಾಡಿದ್ದೇನೆ. ಅವರು ನಾವು ಕಡಿಮೆ ಮಾಡಿದ್ದೇವೆ. ಎಲ್ಲ ರಾಜ್ಯಗಳು ಕಡಿಮೆ ಮಾಡಲು ಬಯಸುತ್ತೇವೆ ಎಂದು ಹೇಳಿದರು. ಆಗ ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇನೆ. ಕೇಂದ್ರ ಸರಕಾರ ಪೆಟ್ರೋಲ್ ಗೆ ರೂ. 5 ಮತ್ತು ಡೀಸೆಲ್ ಗೆ ರೂ. 10 ಕಡಿಮೆ ಮಾಡಿದೆ. ಅತೀ ಹೆಚ್ಚು ಬಳಕೆಯಾಗುವುದು ಡೀಸೆಲ್. ಸಾರಿಗೆಗಷ್ಟೆ ಅಲ್ಲ, ಒಟ್ಟಾರೆ ಆರ್ಥಿಕತೆ ಮೇಲೆ ಅತೀ ಹೆಚ್ಚು ಪರಿಣಾಮ ಬೀರುವುದು ಡೀಸೆಲ್. ನಾನು ಚರ್ಚೆಯಾದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ ರೂ. 7 ಕಡಿತ ಮಾಡಲು ನಿರ್ಧರಿಸಿದ್ದೇವೆ. ಕೇಂದ್ರದ ನಿನ್ನೆಯಿಂದಲೇ ಅಧಿಸೂಚನೆ ಬಂದಿದೆ. ನಿನ್ನೆ ತಡರಾತ್ರಿಯಾಗಿದ್ದರಿಂದ ಇಂದು ಸಂಜೆ ಅಧಿಸೂಚನೆ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಒಂದು ಅಂದಾಜಿನಂತೆ ತೈಲ ಬೆಲೆ ಕಡಿತದಿಂದ ರಾಜ್ಯದ ಬೊಕ್ಕಸಕ್ಕೆ ರೂ. 2100 ಕೋ. ರಾಜಸ್ವಕ್ಕೆ ಕೊರತೆ ಎದುರಾಗಲಿದೆ. ಆದರೂ ಕೂಡ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ರೂ. 100 ದಾಟಿದ ನಂತರ ಕಡಿಮೆ ಮಾಡುವ ಚಿಂತನೆ ಇತ್ತು. ಈಗ ಕೇಂದ್ರ ಸರಕಾರ ನಮಗೆ ಬಹಳ ದೊಡ್ಡ ಸಹಾಯ ಮಾಡಿದೆ. ನರೇಂದ್ರ ಮೋದಿ ಅವರ ತೀರ್ಮಾನ ಜನತೆಗೆ ದೊಡ್ಡ ಗಿಪ್ಟ್ ಕೊಟ್ಟಿದೆ. ಅದನ್ನು ಸ್ವಾಗತ ಮಾಡುತ್ತ ನಮ್ಮ ಕಡೆಯಿಂದಲೂ ಜನರಿಗೆ ಸಹಾಯ ಮಾಡುವ ದೃಷ್ಠಿಯಿಂದ ಈ ತೀರ್ಮಾನ ಮಾಡಿದ್ದೇವೆ ಮುಖ್ಯಮಂತ್ರಿ ತಿಳಿಸಿದರು.
ಜನೇವರಿ 26 ರಿಂದ ರಾಜ್ಯಾದ್ಯಂತ ಜನಸೇವಕ ಯೋಜನೆ ವಿಸ್ತರಣೆ
ಜನೇವರಿ 26 ಕರ್ನಾಟಕದಾದ್ಯಂತ ಹಂತಹಂತವಾಗಿ ಯೋಜನೆ ಜಾರಿ ಮಾಡುತ್ತೇವೆ. ಜನಸೇವಕರನ್ನು ಬಹಳ ದೊಡ್ಡ ಪ್ರಮಾಣದಲ್ಲಿ ಬಳಕೆ ಮಾಡುತ್ತಿದ್ದೇವೆ. ಅವರಿಗೆ ತರಬೇತಿ ನೀಡಲಾಗುವುದು. ಬೆಂಗಳೂರಿನಲ್ಲಿ ಈಗ ನಡೆಯುತ್ತಿದೆ. ಅಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ವಿಸ್ತರಿಸಲಾಗುವುದು. ಈ ಹಿನ್ನೆಲೆಯಲ್ಲಿ ವಿಶೇಷ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಸರಕಾರ 100 ದಿನ ಪೂರೈಕೆ
100 ದಿನ ಸರಕಾರ ಅವಧಿ ಪೂರೈಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆಡಳಿತವನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಬೇಕಾಗುವ ನಿರ್ಣಯಗಳು ಮತ್ತು ಅಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ತೃಪ್ತಿ ತಂದಿದೆ. 100 ದಿನ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸಗಳು ಆಗದಿದ್ದರೂ ಮುಂದಿನ ದಿಕ್ಸೂಚಿಯನ್ನು ಹೊಂದಿದ್ದೇವೆ. ಈ 100 ದಿನಗಳಲ್ಲಿ ನಾವು ಭದ್ರ ಮತ್ತು ದಿಟ್ಟ ಬರವಸೆಯ ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದೇವೆ. ದಿಟ್ಟ ತೀರ್ಮಾನಗಳನ್ನು ತೆಗೆದುಕೊಂಡಿದ್ದೇವೆ. ಇವು ಮುಂಬರುವ ದಿನಗಳಲ್ಲಿ ನಮ್ಮ ಸರಕಾರ ಯಾವ ದಿಕ್ಕಿನಲ್ಲಿ ಹೋಗುತ್ತದೆ ಎಂಬುದಕ್ಕೆ ದಿಕ್ಸೂಚಿಯಾಗಿದೆ. ಈಗಾಗಲೇ ಅಮೃತ ಯೋಜನೆ, ರೈತರ ಮಕ್ಕಳಿಗೆ ಸ್ಕಾಲರಶಿಪ್, ಬಡವರಿಗೆ ಸಂಧ್ಯಾ ಸುರಕ್ಷಾ, ಅಂಗವಿಕಲರಿಗೆ, ವಿಧವೆಯರಿಗೆ ಮಾಶಾಸನ ಹೆಚ್ಚಿಸಿದ್ದೇವೆ. ಇನ್ನೂ ಹಲವಾರು ಯೋಜನೆಗಳನ್ನು ರೂಪಿಸಲು ಮಾಡಲು ಚಿಂತನೆ ನಮ್ಮದಿದೆ. ಆರ್ಥಿಕ ಬೆಳವಣಿಗೆ ಈಗ ಚೇತರಿಸಿಕೊಳ್ಳುತ್ತಿದ್ದು, ಅದನ್ನು ನೋಡಿಕೊಂಡು ಮುಂಬರುವ ದಿನಗಳಲ್ಲಿ ಇನ್ನೂ ಜನಪರ ಕೆಲಸಗಳನ್ನು ಮಾಡುತ್ತೇವೆ ಎಂದು ಸಿಎಂ ತಿಳಿಸಿದರು.
ಮುಂಬರುವ ದಿನಗಳಲ್ಲಿ ವ್ಯವಸ್ಥೆಯಲ್ಲಿ ಸುಧಾರಣೆಯಾಗಬೇಕು. ಜನರ ಹತ್ತಿರ ಸರಕಾರಿ ಮತ್ತು ಸರಕಾರಿ ಸೇವೆಗಳು ತಲುಪಬೇಕು ಎಂಬುದು ಒಂದು ಚಿಂತನೆಯಾದರೆ, ಆರ್ಥಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬೇಕು. ನಮ್ಮ ತಲಾವಾರು ಆದಾಯ ಬೇರೆ ರಾಜ್ಯಗಳಿಗೆ ಹೋಲಿಸಿದಾಗ ಮೊದಲ 5 ಸ್ಥಾನಗಳಲ್ಲಿದೆ. ಆದರೂ ಕೂಡ ಎಲ್ಲ ವರ್ಗದ ಜನರ ಪಾತ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕಿದೆ. ವಿಶೇಷವಾದ ಕಾರ್ಯಕ್ರಮಗಳನ್ನು ರೂಪಿಸಿ ಎಸ್ಸಿ, ಎಸ್ಟಿ, ಓಬಿಸಿ ಮತ್ತು ಬಡವರು ಇವರನ್ನೂ ಆರ್ಥಿಕತೆಯಲ್ಲಿ ಪಾಲ್ಗೋಳ್ಳುವಂತೆ ಮಾಡಲು ಆರ್ಥಿಕ ನೆರವನ್ನು ನೀಡಲು ಯೋಜನೆ ರೂಪಿಸವಲಾಗುತ್ತಿದೆ. ವಿಶೇಷವಾಗಿ ಮಹಿಳೆಯರನ್ನು ಈ ಯೋಜನೆಗಳಡಿ ತೊಡಗಿಸುವ ಚಿಂತನೆ ತಮ್ಮದಾಗಿದೆ ಎಂದು ಅವರು ತಿಳಿಸಿದರು.
ಆಡಳಿತ ಸುಧಾರಣೆಯಲ್ಲಿ ಸಿಎಂ ಡ್ಯಾಶ್ ಬೋರ್ಡ್ ಮಾಡಿದ್ದೇವೆ. ಎಲ್ಲ ಇಲಾಖೆಗಳ ಪ್ರಮುಖ ಯೋಜನೆಗಳನ್ನು ಪ್ರತಿದಿನ ವರದಿ ಮಾಡಲಾಗುತ್ತದೆ. ನಮ್ಮ ಅಧಿಕಾರಿಗಳು ಪ್ರತಿದಿನ ಅದನ್ನು ಪರಿಶೀಲನೆ ನಡೆಸುತ್ತಾರೆ. ನಾನು 15 ದಿನಗಳಿಗೊಮ್ಮೆ ಪರಿಶೀಲನೆ ನಡೆಸಿ ಕೋರ್ಸ್ ಕರೆಕ್ಷನ್ ಮಾಡುತ್ತೇವೆ. ಮೇಲ್ಮಟ್ಟದಲ್ಲಿರುವ ಸುಧಾರಣೆ ಕೆಳಮಟ್ಟಕ್ಕು ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ದೇಶದಲ್ಲಿ ಸಿಎಂ ಡ್ಯಾಶ್ ಬೋರ್ಡ್ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಗುತ್ತಿದೆ ಎಂದು ಅವರು ಹೇಳಿದರು.
ದೆಹಲಿಗೆ ಹೋಗುತ್ತಿಲ್ಲ, ಸಚಿವ ಸಂಪುಟ ವಿಸ್ತರಣೆ ಸಧ್ಯಕ್ಕಿಲ್ಲ
ಹೈಕಮಾಂಡ್ ದೆಹಲಿಗೆ ಬುಲಾವ್ ಮಾಡಿಲ್ಲ ನಾನು 7ನೇ ತಾರಿಖೆ ದೆಹಲಿಗೆ ಹೋಗುತ್ತಿಲ್ಲ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಇದೆ. ನಾನು ಬೆಂಗಳೂರಿಲ್ಲಿ ಬಿಜೆಪಿ ಕಚೇರಿಯಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುತ್ತೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿಯಲ್ಲಿ ಸ್ಪಷ್ಟಪಡಿಸಿದರು.