ಬೆಂಗಳೂರು: ಜಲಂಸಪನ್ಮೂಲ ಸಚಿವ ಗೋವಿಂದ ಕಾರಜೋಳ ದೀಪಾವಳಿ ಬಲಿಪಾಡ್ಯದ ಅಂಗವಾಗಿ ಗೋವಿಗೆ ಪೂಜೆ ಮಾಡಿ ಆಹಾರ ಹಾಕುವ ಮೂಲಕ ಸಂಪ್ರದಾಯ ನೆರವೇರಿಸಿದ್ದಾರೆ.
ಬೆಂಗಳೂರು ನಗರದ ಮಲ್ಲೇಶ್ವರ(ಮಲ್ಲೇಶ್ವರಂ) ಕಾಡು ಮಲ್ಲೇಶ್ವರ ದೇವಾಲಯದಲ್ಲಿ ಗೋ ಪೂಜೆ ಸಲ್ಲಿಸಿದ ಅವರು, ಗೋವಿಗೆ ಕರ್ಪೂರ ಬೆಳಗಿ ಬಾಳೆಹಣ್ಣು ಮತ್ತು ಇತರ ಆಹಾರ ಧಾನ್ಯಗಳನ್ನು ತಿನ್ನಿಸುವ ಮೂಲಕ ದೀಪಾವಳಿ ಬಲಿಪಾಡ್ಯವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಬಳಿಕ ಮಾತನಾಡಿದ ಅವರು, ದೀಪಾವಳಿ ಬಲಿಪಾಡ್ಯ ದಿನ ಸರಕಾರ ಆದೇಶ ಮಾಡಿದೆ ಎಂಬ ಕಾರಣಕ್ಕೆ ತಾವು ಗೋವು ಪೂಜೆ ಮಾಡಿಲ್ಲ. ಬದಲಾಗಿ ನಮ್ಮ ಕುಟುಂಬದಲ್ಲಿ ಇದು ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಮನೆಯಲ್ಲಿ 40 ಆಕಳುಗಳಿವೆ. ಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಜರು ಗೋಮಾತೆಯನ್ನು ದೇವತೆಗೆ ಸಮಾನವಾಗಿ ಪೂಜಿಸುತ್ತ ಬಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ಗೋವುಗಳ ಪೂಜೆ ಮಾಡುತ್ತಾರೆ. ಗೃಹ ಪ್ರವೇಶ ಸಂದರ್ಭದಲ್ಲಿಯೂ ಆಕಳನ್ನು ಮೊದಲಿಗೆ ಮನೆಯ ಒಳಗಡೆ ಕಳುಹಿಸಿ ಪೂಜೆ ಮಾಡುವ ಸಂಪ್ರದಾಯ ಮುಂಚೆಯಿಂದಲೂ ಇದೆ ಎಂದು ಹೇಳಿದರು.
ಗೋ ಸಂಪತ್ತು ರೈತನಿಗೆ ಮತ್ತು ಮಾನವ ಕುಲಕ್ಕೆ ಅಪಾರ ಕೊಡುಗೆ ನೀಡಿದೆ. ಈ ಗೋವು ಸಂಪತನ್ನು ರಕ್ಷಣೆ ಮಾಡಬೇಕು ಎನ್ನುವುದನ್ನು ಕೇವಲ ಸರಕಾರ ಆದೇಶ ಅಷ್ಟೇ ಅಲ್ಲ, ಸಂವಿಧಾನವೂ ಕೂಡ ಅದನ್ನೇ ಹೇಳಿದೆ. ಗೋವು ರೈತನ ಸಂಪತ್ತು. ದೀಪಾವಳಿಯ ಶುಭ ಸಂದರ್ಭದಲ್ಲಿ ಬಲಿಪಾಡ್ಯದ ದಿನ ಗೋವುಗಳ ಪೂಜೆ ಮಾಡಿದ್ದೇನೆ. ಇದು ನಮಗೆ ಸಂತಸದ ಸಂಗತಿ. ನಮಗೆ ಮೊದಲಿನಿಂದಲೂ ರೂಢಿಯಿದೆ. ನಾವು ರೈತ ಕುಟುಂಬದಿಂದ ಬಂದಿದ್ದೇವೆ. ನಮ್ಮ ಮನೆಯಲ್ಲಿ ಹಸುಗಳನ್ನು ಪೂಜೆ ಮಾಡುವುದು ಮುಂಚೆಯಿಂದಲೂ ನಡೆದುಕೊಂಡು ಬಂದಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.