ವಿಜಯಪುರ: ದೇಶದ ಭವಿಷ್ಯದ ಬಗ್ಗೆ ಮಹಾತ್ಮಾ ಗಾಂಧಿಗಿಂತ ಡಾ. ಅಂಬೇಡ್ಕರ ಒಂದು ಹೆಜ್ಜೆ ಮುಂದಾಲೋಚನೆ ಹೊಂದಿದ್ದರು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿರುವ ದಲಿತ ನಾಯಕರು ಅಂಬೇಡ್ಕರ ಅವರ ಜೀವನ ಚರಿತ್ರೆಯನ್ನು ತಿಳಿದುಕೊಂಡು ಆತ್ಮವಲೋಕನ ಮಾಡಿಕೊಳ್ಳಬೇಕು. ಕಾಂಗ್ರೆಸ್ ದಲಿತರು ಮತ್ತು ದೇಶಕ್ಕೆ ಎಂದೂ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಅಂಬೇಡ್ಕರ್ ಅವರು ಹೇಳಿದ್ದರು ಎಂದು ತಿಳಿಸಿದರು.
ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಸಂಪೂರ್ಣವಾಗಿ ಓದಿದವರು ಮಾತ್ರ ನಿಜವಾದ ದಲಿತ ನಾಯಕ. ಇವರು ತಮ್ಮ ಸ್ವಾರ್ಥಕ್ಕಾಗಿ ಓವೈಸಿ ಜೊತೆ ಸೇರುವುದು, ದಲಿತ-ಮುಸ್ಲಿಂ ಭಾಯಿ ಭಾಯಿ ಎನ್ನುತ್ತಾರೆ. ಪಾಕಿಸ್ತಾನ ವಿಭಜನೆಗೆ ಅಂಬೇಡ್ಕರ್ ವಿರೋಧವಿತ್ತು. ಥಾಟ್ಸ್ ಆನ್ ಪಾಕಿಸ್ತಾನ ಎಂಬ ಅವರ ಪುಸ್ತಕದಲ್ಲಿ ಈ ವಿಷಯ ಪ್ರಸ್ತಾಪವಿದೆ. ಒಂದು ವೇಳೆ ಭಾರತ, ಪಾಕಿಸ್ತಾನ ವಿಭಜನೆ ಮಾಡುವುದಾದರೆ ರಾಷ್ಟ್ರಾಂತರ ಅಂದರೆ ಭಾರತದಲ್ಲಿರುವ ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಮತ್ತು ಪಾಕಿಸ್ತಾನದಲ್ಲಿರುವ ಹಿಂದೂಗಳನ್ನು ಭಾರತಕ್ಕೆ ತೆಗೆದುಕೊಂಡು ಬಿನ್ನಿ ಎಂದು ಹೇಳಿದ್ದರು ಎಂದು ಶಾಸಕರು ತಿಳಿಸಿದರು.
ಎಲ್ಲಿಯವರೆಗೆ ಇಸ್ಲಾಂ ಇತರ ಧರ್ಮವನ್ನು ಸಹೋದರ ಧರ್ಮ ಎಂದೂ ಒಪ್ಪಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಆದರೆ, ದುರಂತವೆಂದರೆ ನಾವು ಅವರನ್ನು ಕೇವಲ ದಲಿತ ನಾಯಕರು, ಮೀಸಲಾತಿ ನೀಡಿದ್ದಾರೆ ಎಂದು ಮಾತ್ರ ತಿಳಿದಿದ್ದೇವೆ. ದೇಶದ ಬಗ್ಗೆ ಸ್ಪಷ್ಟ ನೀತಿ ಮತ್ತು ಚಿಂತನೆ ಮಾಡುವುದರಲ್ಲಿ ಮಹಾತ್ಮಾ ಗಾಂಧಿಗಿಂತಲೂ ಅಂಬೇಡ್ಕರ್ ಒಂದು ಹೆಜ್ಜೆ ಮುಂದಿದ್ದರು ಎಂದು ಅವರು ತಿಳಿಸಿದರು.
ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಜೀವನ ಚರಿತ್ರೆಯನ್ನು ಪೂರ್ಣವಾಗಿ ಓದಿದವರು ಮಾತ್ರ ಅವರ ಬಗ್ಗೆ ತಿಳಿದುಕೊಂಡಿದ್ದಾರೆ. ಅಂಬೇಡ್ಕರ ಅವರನ್ನು ಕೇವಲ ಒಂದು ದಲಿತ ಸಮುದಾಯಕ್ಕೆ ಸೀಮಿತ ಮಾಡಿ ಅವರನ್ನು ರಾಷ್ಟ್ರ ನಾಯಕರನ್ನಾಗಿ ಮಾಡದರವರೇ ಕಾಂಗ್ರೆಸ್ಸಿಗರು. ಅವರ ಅಂತ್ಯಕ್ರಿಯೆಯನ್ನು ಮುಂಬೈನಲ್ಲಿ ಮಾಡಲೂ ಅವಕಾಶ ನೀಡಲಿಲ್ಲ.
ಅಂಬೇಡ್ಕರ ಅವರಿಗೆ ಪ್ರಧಾನ ಮಂತ್ರಿ ಸ್ಥಾನ ತಪ್ಪಿಸಿದ್ದು ಕಾಂಗ್ರೆಸ್
ಇದೇ ವೇಳೆ, ವಿಮಾನದಲ್ಲಿ ಪಾರ್ಥಿವ ಶರೀರ ಸಾಗಿಸಲೂ ಕೂಡ ನೆರವಾಗಲಿಲ್ಲ. ಆಗ, ಅಂಬೇಡ್ಕರ್ ಅವರು ಉಪಯೋಗಿಸುತ್ತಿದ್ದ ಕಾರನ್ನು ಮಾರಾಟ ಮಾಡಿ ಅವರನ್ನು ಮುಂಬೈನಲ್ಲಿ ಅಂತ್ಯಕ್ರಿಯೆ ಮಾಡಲಾಯಿತು ಎಂದು ಅವರು ಹೇಳಿದರು.
ಕಾಂಗ್ರೆಸ್ ದೇಶಕ್ಕೆ ಮತ್ತು ದಲಿತ ಸಮುದಾಯಕ್ಕೆ ಎಂದೂ ಒಳ್ಳೆಯದನ್ನು ಮಾಡುವುದಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಕಾಂಗ್ರೆಸ್ಸಿನಲ್ಲಿರುವ ದಲಿತರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನು ಅಂಬೇಡ್ಕರ್ ಅವರ 700 ಪುಟಗಳ ಚರಿತ್ರೆಯನ್ನು ಓದಿದ್ದೇನೆ. ಅಂಬೇಡ್ಕರ ಯಾವತ್ತೂ ಸಮಾಜ ಮತ್ತು ದೇಶದ ವಿರುದ್ಧ ಎಂದೂ ಅವರು ಮಾತನಾಡಿಲ್ಲ. ಯಾವ ಸಮಾಜದಲ್ಲಿ ಜನಿಸಿರುತ್ತೀರೋ, ಯಾವ ದೇಶದ ಅನ್ನ ತಿನ್ನುತ್ತಿರೋ ಅದಕ್ಕೆ ಎಂದೂ ದ್ರೋಹ ಬಗೆಯಬಾರದು ಎಂದು ಅವರು ಹೇಳಿದ್ದರು. ಅಂಬೇಡ್ಕರ್ ಅವರ ನಿಜವಾದ ತತ್ವಗಳನ್ನು ಪಾಲಿಸುವ ರಾಜಕಾರಣಿಗಳು ಕಾಂಗ್ರೆಸ್ಸಿನಲ್ಲಿ ಇರಬಾರದು. ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ಸಿಗರು ನೀಡಿರುವ ಕಿರಕುಳದ ಬಗ್ಗೆ ಆ ಪುಸ್ತಕದಿಂದ ತಿಳಿಯುತ್ತದೆ. ಭಂಡಾರ ಎಂಬ ಸಾಮಾನ್ಯ ವ್ಯಕ್ತಿಯನ್ನು ಕರೆತಂದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗರು ಸೋಲಿಸಿದರು. ನೇತಾಜಿ ಸುಭಾಷಚಂದ್ರ ಭೋಸ್ ಇದ್ದಾಗ ಒಂದೇ ಬಾರಿ ಮಾತ್ರ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೋಂಡಿದ್ದರು. ನಂತರ ಅವರು ಒಂದು ಲೇಖನ ಬರೆದಿದ್ದು, ಕಾಂಗ್ರೆಸ್ಸಿಗೆ ಈ ದೇಶದಲ್ಲಿ ಭವಿಷ್ಯವಿಲ್ಲ ಎಂದು ಹೇಳಿದ್ದಾರೆ. ಅದನ್ನು ಸಿದ್ಧರಾಮಯ್ಯ ಮತ್ತು ಕಾಂಗ್ರೆಸ್ಸಿಗರು ಚೆನ್ನಾಗಿ ಓದಲಿ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಪೂರ್ಣವಾಗಿ ತುಳಿದವರೇ ಕಾಂಗ್ರೆಸ್ಸಿಗರು. ಅಂಬೇಡ್ಕರ್ ಈ ದೇಶದ ಪ್ರಧಾನಿಯಾಗಬೇಕಿತ್ತು. ಆಕ್ಸಫರ್ಡ್ ನಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದರು. ಕಾನೂನು ಪಂಡಿತರು. ಇಂಥ ಮಹಾನ್ ನಾಯಕನನ್ನು ಕಾಂಗ್ರೆಸ್ಸಿಗರು ಅವಮಾನ ಮಾಡಿದ್ದಾರೆ ಎಂದು ಈ ಹಿಂದೆಯೇ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ಪ್ರಧಾನ ಮಂತ್ರಿ ಹಿಂದೂಗಳ ದೊಡ್ಡ ಹಬ್ಬದ ಹಿನ್ನೆಲೆಯಲ್ಲಿ ತೈಲ ಬೆಲೆ ಇಳಿಕೆ ಮಾಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಉಚಿತ ಆಹಾರ ಧಾನ್ಯ, ಕೊರೊನಾ ಲಸಿಕೆ ನೀಡಿದ್ದಾರೆ. ಇದನ್ನೆಲ್ಲ ನೋಡಿ ಜನ ನಮಗೆ ಮೊನ್ನೆ ದೇಶಾದ್ಯಂತ ನಡೆದ ಬೈ ಎಲೆಕ್ಷನ್ ನಲ್ಲಿ ಗೆಲುವ ನೀಡಿದ್ದಾರೆ. ಒಬ್ಬ ದೇಶದ ನಾಗರಿಕನಾಗಿ ಕೇವಲ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸದೇ ಆ ಹಣದಿಂದ ದೇಶದ ಅಭಿವೃದ್ಧಿ ಮತ್ತು ಭದ್ರತೆಗೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಬೇಕು. ಇನ್ನೋಂದು ವರ್ಷದಲ್ಲಿ ಶೇ. 50 ರಷ್ಟು ವಾಹನಗಳು ವಿದ್ಯುತ್ ಆಧರಿತ ಬರಲಿವೆ. ಆಗ ತೈಲ ಅವಲಂಬನೆ ಕಡಿಮೆಯಾಗುತ್ತದೆ. ಆಗ ತೈಲ ಬೆಲೆ ಇಳಿಯಲಿದೆ. ನಾವೂ ದೇಶದ ಸಲುವಾಗಿ ಸ್ವಲ್ಪ ತ್ಯಾಗ ಮಾಡಬೇಕು ಎಂದು ಯತ್ನಾ;ಳ ತಿಳಿಸಿದರು.
ಸಿಎಂ ಬೊಮ್ಮಾಯಿ, ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆ ಎದುರಿಸುತ್ತೇವೆ
ಸಿಂದಗಿ ಬೈ ಎಲೆಕ್ಷನ್ ನಲ್ಲಿ ಮತದಾರರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದರ ಶ್ರೇಯಸ್ಸು ಪಂಚ ಪಾಂಡವರು, ಸಪ್ತ ಋುಷಿಗಳಿಗೆ ಸಲ್ಲಬಾರದು. ಮತದಾರರು, ಕಾರ್ಯಕರ್ತರ ಹಾಗೂ ಸಾಮೂಹಿಕ ನಾಯಕತ್ವ ಕಾರಣ. ನರೇಂದ್ರ ಮೋದಿ ನೇತೃತ್ವ ಒಪ್ಪಿಕೊಂಡು ಜನರು ಮತ ಹಾಕಿದ್ದಾರೆ. ದೀಪಾವಳಿ ಒಳಗೆ ತೈಲ ಬೆಲೆ ಇಳಿಯಲಿದೆ ಎಂದು ನಾನು ಮೊದಲೇ ಹೇಳಿದ್ದೆ. ಅದರಂತೆ ನಡೆದುಕೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲು ನಮಗೆ ನೈತಿಕತೆ ಬಂದಿದೆ. ಬೊಮ್ಮಾಯಿ ನೇತೃತ್ವದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಸಾರ್ವತ್ರಿಕ ಚುನಾವಣೆ ಎದುರಿಸಲಿದ್ದೇವೆ ಎಂದು ಅವರು ತಿಳಿಸಿದರು.
ಹಾನಗಲ ನಲ್ಲಿ ಮುಂದಿನ ಬಾರಿ ಗೆಲ್ಲುತ್ತೇವೆ
ಹಾನಗಲ ನಲ್ಲಿ ಹೀನಾಯವಾಗಿ ಸೋತಿಲ್ಲ. ಸಿ. ಎಂ. ಉದಾಸಿ ಹಿರಿಯ ಶಾಸಕರಾಗಿದ್ದರು. ಹಾನಗಲನಲ್ಲಿ ಆಯ್ಕೆಯಾದ ನಂತರ ಅವರ ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ ಜನಸಂಪರ್ಕ ಕಡಿಮೆಯಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಕೊರೊನಾ ಸಂದರ್ಭದಲ್ಲಿ ಒಳ್ಳೆಯ ಕೆಲಸ ಮಾಡಿ ಈಗ ಗೆದ್ದಿದ್ದಾರೆ. ಈ ಸೋಲು ಶಾಶ್ವತವಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಹಾನಗಲ ಕ್ಷೇತ್ರವನ್ನು ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದ ಅವರು, ಎಸ್ಟಿ ಮೀಸಲಾತಿ ಪ್ರಮಾಣವನ್ನು ಶೇ. 7.50ಕ್ಕೆ ಹೆಚ್ಚಿಸಬೇಕು. ಕೋಳಿ ಮತ್ತು ಹಾಲುಮತ ಸಮಾಜದವರನ್ನು ಶಿಫಾರಸು ಮಾಡಬೇಕು. ಅಲ್ಲಿರುವ ವಾಲ್ಮಿಕಿ, ಬೇಡ ಸಮುದಾಯಕ್ಕೂ ಅನ್ಯಾಯವಾಗಬಾರದು. ದಕ್ಷಿಣ ಭಾರತದಲ್ಲಿ ಗಂಗಾಮತಸ್ಥರು, ಕಾಡು ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕು. ಉಳಿದಂತೆ ಮರಾಠಾ, ಪಂಚಮಸಾಲಿ, ಆದಿ ಬಣಜಿಗ, ಕೂಡ ಒಕ್ಕಲಿಗರಿಗೆ 2ಎ ಮೀಸಲಾತಿ ನೀಡಬೇಕು. ಕೋಳಿ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡದಿದ್ದರೆ, ವಿಧಾನ ಸಭೆ ಅಧಿವೇಶನದಲ್ಲಿ ನಾನೇ ಮೊದಲಿಗನಾಗಿ ಧರಣಿ ಕುಳಿತುಕೊಳ್ಳುತ್ತೇನೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಲಕ್ಷ್ಮಣ ಜಾಧವ ಉಪಸ್ಥಿತರಿದ್ದರು.