ರೇಸ್ ಹೆಸರಿನಲ್ಲಿ ಪ್ರಾಣಿಗಳ ಮೇಲಾಗುವ ಹಿಂಸೆ ತಪ್ಪಿಸಿ- ಜಿಲ್ಲಾಡಳಿತಕ್ಕೆ ಎಂ ಎಲ್ ಸಿ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ನಾನಾ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಣಿಗಳ ರೇಸ್ ಗಳನ್ನು ಸಂಘಟಿಸಿ, ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸುತ್ತಿದೆ. ಇದನ್ನು ತಡೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿಜಯಪುರ-ಬಾಗಲಕೋಟ ಜಿಲ್ಲೆಗಳ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಜಿಲ್ಲಾಡಳಿತಕ್ಕೆ ಪತ್ರ ಆಗ್ರಹಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಪತ್ರ ಬರೆದಿರುವ ಅವರು ಯಾವುದೇ ಪ್ರಾಣಿಗಳನ್ನು ಹಿಂಸೆಗೆ ಗುರಿಪಡಿಸಬಾರದು. ಹಿಂಸೆಗೆ ಗುರಿಪಡಿಸಿದರೆ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಆದೇಶವಿದೆ. ಈ ಆದೇಶವನ್ನು ಉಲ್ಲಂಘಿಸಿ, ವಿಜಯಪುರ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಜಾತ್ರೆ, ಹಬ್ಬಗಳ ಸಂದರ್ಭಗಳಲ್ಲಿ ಟಗರು, ಎತ್ತು ಸೇರಿದಂತೆ ಹಲವಾರು ಪ್ರಾಣಿಗಳ ರೇಸ್ ಗಳನ್ನು ಏರ್ಪಡಿಸಲಾಗುತ್ತಿದೆ. ಆ ಪ್ರಾಣಿಗಳಿಗೆ ಮಾದಕ ವಸ್ತುಗಳನ್ನು ತಿನ್ನಿಸಿ, ರೇಸ್ ಗಳಲ್ಲಿ ಬಿಟ್ಟು ಅವುಗಳನ್ನು ಹಿಂಸೆಗೆ ಗುರಿಪಡಿಸಿ, ವಿಕೃತಿ ಮೆರೆಯುತ್ತಿದ್ದಾರೆ.‌‌ ಎತ್ತುಗಳು ನಮ್ಮ ರೈತರಿಗೆ ಅನ್ನ ನೀಡುವ ಅನ್ನದಾತರು. ಅವುಗಳನ್ನೇ ನಾವು ಹಿಂಸೆಗೆ ಗುರಿಪಡಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಈ ಹಿಂದೆ ಸರ್ವೋಚ್ಚ ನ್ಯಾಯಾಲಯದ ಆದೇಶಂತೆ ಸ್ತಬ್ದವಾಗಿದ್ದ ಈ ಕ್ರೀಡೆಗಳು ಇತ್ತೀಚಿನ ದಿನಗಳಲ್ಲಿ ಮರುಕಳಿಸುತ್ತಿವೆ. ಕೂಡಲೇ ಜಿಲ್ಲಾಡಳಿತ ಇಂಥ ಸ್ಪರ್ಧೆಗಳನ್ನು ತಡೆಗಟ್ಟಿ, ಸಂಘಟಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ ಕಾಂಗ್ರೆಸ್ ಸದಸ್ಯ ಸುನೀಲಗೌಡ ಪಾಟೀಲ ಪತ್ರದಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌