ವಿಜಯಪುರ 8. ಡಾ. ಆರ್. ಎಸ್. ಮುಧೋಳ ಮತ್ತು ಡಾ. ಆರ್. ವಿ. ಕುಲಕರ್ಣಿ ಅವರ ಸಾಧನೆ ಬಿಎಲ್‍ಡಿಇ ಸಂಸ್ಥೆಗೆ ಮುಕುಟಪ್ರಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮತ್ತು ಬಿಎಲ್‍ಡಿಇ ಸಂಸ್ಥೆಯ ನಿರ್ದೇಶಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಬಿಎಲ್‍ಡಿಇ ಸಂಸ್ಥೆಯಲ್ಲಿ ಯೋಜಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಾ. ಆರ್. ಎಸ್. ಮುಧೋಳ ಅವರು ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಗೌರವ ಫೆಲೊಶಿಪ್ ನೀಡಿ ಗೌರವಿಸಿದೆ. ಅಲ್ಲದೆ ಡಾ. ಆರ್. ವಿ. ಕುಲಕರ್ಣಿ ಅವರು ಔಷಧ ವಿಜ್ಞಾನ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸ್ಟ್ಯಾನಫೋಲ್ಡ್ ವಿಶ್ವವಿದ್ಯಾಲಯ ವಿಶ್ವದ ಶೇ. 2ರಷ್ಟು ವಿಜ್ಞಾನಿಗಳಲ್ಲಿ ಒಬ್ಬರನ್ನಾಗಿ ಗುರುತಿಸಿದೆ. ಭಾರತದಲ್ಲಿ 9ನೇ ಮತ್ತು ವಿಶ್ವದಲ್ಲಿ 96ನೆಯ ರ್ಯಾಂಕ ನೀಡುವ ಮೂಲಕ ಡಾ. ಆರ್. ವಿ. ಕುಲಕರ್ಣಿ ಅವರು ಫಾರ್ಮಾಸ್ಯೂಟಿಕಲ್ ಮತ್ತು ಫಾಲಿಮರ್ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡಿದೆ. ಈ ಇಬ್ಬರೂ ಸಾಧಕರು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ ಎಂದು ತಿಳಿಸಿದರು.
ಶತಮಾನದ ಇತಿಹಾಸ ಹೊಂದಿರುವ ಬಿಎಲ್‍ಡಿಇ ಸಂಸ್ಥೆಗೆ ನಮ್ಮ ತಂದೆ ದಿ. ಬಿ. ಎಂ. ಪಾಟೀಲ ನೀಡಿರುವ ಕೊಡುಗೆ ಮತ್ತು ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆಯಲು ನಮ್ಮ ಸಹೋದರ ಎಂ. ಬಿ. ಪಾಟೀಲ ಅವರು ನೀಡಿರುವ ಕೊಡುಗೆ ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಡಾ. ಆರ್. ಎಸ್. ಮುಧೋಳ ಮತ್ತು ಡಾ. ಆರ್. ವಿ. ಕುಲಕರ್ಣಿ ಅವರ ಸಾಧನೆ ಇಡೀ ಬಿಎಲ್‍ಡಿಇ ಸಂಸ್ಥೆಗೆ ಗೌರವ ಹೆಚ್ಚಾಗುವಂತೆ ಮಾಡಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯ ಸೇವೆಯಿಂದಾಗಿ ಇಂದು ಬಿಎಲ್‍ಡಿಇ ವೈದ್ಯಕೀಯ ಕಾಲೇಜು ದೇಶದ 50 ಅತ್ಯುನ್ನತ ಕಾಲೇಜುಗಳಲ್ಲಿ ಒಂದಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದರು.
ಸನ್ಮಾನ ಸ್ವೀಕರಿಸಿದ ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಬಿಎಲ್‍ಡಿಇ ವೈದ್ಯಕೀಯ ಕಾಲೇಜು ದೇಶದ ಅತ್ಯುನ್ನತ 50 ಕಾಲೇಜುಗಳಲ್ಲಿ ಒಂದಾಗಿದೆ. ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಮತ್ತು ನಿರ್ದೇಶಕ ಸುನೀಲಗೌಡ ಪಾಟೀಲ ಅವರ ಸಮರ್ಥ ನಾಯಕತ್ವದಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ದೇಶದ 800ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ನಮ್ಮ ವಿಶ್ವವಿದ್ಯಾಲಯ 100 ರಿಂದ 150ನೆಯ ಸ್ಥಾನದಲ್ಲಿದೆ. ಒಟ್ಟಾರೆ 150 ರಿಂದ 200 ಸ್ಥಾನದೊಳಗಿದೆ. ವಿಶ್ವವಿದ್ಯಾಲಯ ಈಗ ನ್ಯಾಕ್ ಅಕ್ರಿಡಿಟೆಷನ್ ಪಡೆಯುವ ಹಂತದಲ್ಲಿದೆ. ಈ ಮಾನ್ಯತೆ ಸಿಕ್ಕರೆ ಆಯುರ್ವೇದ, ಫಾರ್ಮಸಿ ಮತ್ತು ನರ್ಸಿಂಗ್ ಕಾಲೇಜುಗಳನ್ನು ಬಿಎಲ್‍ಡಿಇ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿಸಬಹುದು ಎಂದು ತಿಳಿಸಿದರು.
ಬಿಎಲ್‍ಡಿಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಮಾತನಾಡಿ, ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ, ನಿರ್ದೇಶಕರಾದ ಸುನೀಲಗೌಡ ಪಾಟೀಲ ಮತ್ತು ರಾಹುಲ್ ಪಾಟೀಲ ಅವರು ತಮಗೆ ಸಂಪೂರ್ಣ ಸಹಕಾರ ನೀಡಿ ತಮ್ಮ ಮೇಲೆ ಇಟ್ಟಿರುವ ವಿಶ್ವಾಸದಿಂದಾಗಿ ತಾವು ಈ ಸಾಧನೆ ಮಾಡಲು ಕಾರಣವಾಗಿದೆ ಎಂದು ತಿಳಿಸಿದರು.
ಸಂಶೋಧನೆಗೆ ದೊಡ್ಡ ಪ್ರಯೋಗಾಲಯ, ಹೂಡಿಕೆ ಬೇಕಾಗಿಲ್ಲ. ಸಣ್ಣ ಕೋಣೆ ಅಥವಾ ಮನೆಯಲ್ಲಿ ಕುಳಿತು ಸಂಶೋಧನೆ ಮಾಡಬಹುದಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಪ್ರೊ. ಎಸ್. ಎಚ್. ಲಗಳಿ ಪರಿಚಯಿಸಿದರು.
ಈ ಸಂದರ್ಭದಲ್ಲಿ ಬಿಎಲ್‍ಡಿಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ಆಯ್. ಎಸ್. ಕಾಳಪ್ಪನವರ, ಕೆ. ಜಿ. ಪೂಜಾರಿ, ಕೌಶಿಕ ಬ್ಯಾನರ್ಜಿ, ಮುಖ್ಯ ಹಣಕಾಸು ಅಧಿಕಾರಿ ದೇವೇಂದ್ರ ಅಗರವಾಲ, ಎಂಜಿನಿಯರಿಂಗ ಕಾಲೇಜಿನ ಪ್ರಾಚಾರ್ಯ ಅತುಲ ಆಯಿರೆ, ಆಯುರ್ವೇದ ಕಾಲೇಜಿನ ಪ್ರಾಚಾರ್ಯರು ಸಂಜಯ ಕಡ್ಲಿಮಟ್ಟಿ, ಕೆ ಸಿಪಿ.ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎ. ಎಸ್. ಪೂಜಾರ, ವಿಜಯಪುರ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಆರ್. ಬಿ. ಕೊಟ್ನಾಳ, ವಿಜಯಪುರ ನರ್ಸೀಂಗ್ ಕಾಲೇಜಿನ ಪ್ರಾಚಾರ್ಯ ಸೆಲೊಮನ್ ಚೊಪಡೆ, ತಿಕೋಟಾ ನರ್ಸೀಂಗ್ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಸಿದ್ಧಾಪುರ, ಬಸವನ ಬಾಗೇವಾಡಿ ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಸಿಂಪಿ, ಡಿಪ್ಲೋಮಾ ಕಾಲೇಜಿನ ಪ್ರಾಚಾರ್ಯ ಎಸ್. ಜೆ. ಗೌಡರ, ಎಸ್ ಎಸ್ ಪಿಯು.ಕಾಲೇಜಿನ ಪ್ರಾಚಾರ್ಯ ಅಕಮಂಚಿ, ಬಿ. ಎಂ. ಪಾಟೀಲ ಪಿಯು ಕಾಲೇಜಿನ ಪ್ರಾಚಾರ್ಯ ನವೀನ, ಜೆ ಎಸ್ ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಭಾರತಿ ಖಾಸನೀಸ, ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ, ವಿ. ಡಿ. ಐಹೊಳ್ಳಿ, ಎ. ಬಿ. ಬೂದಿಹಾಳ, ಬಿ ಎಲ್ ಡಿ ಇ ಸಂಸ್ಥೆಯ ಕಾನೂನು ಸಲಹೆಗಾರ ಸುರೇಶ ಹಕ್ಕಿ, ಸಂಜಯ ಪಾಟೀಲ, ತಿಗಡಿ ಮುಂತಾದವರು ಉಪಸ್ಥಿತರಿದ್ದರು.