ಗ್ರಾ. ಪಂ. ಸಿಬ್ಬಂದಿ ವೇತನ ವಿಚಾರ- 3 ತಿಂಗಳೊಳಗೆ ಸಮಿತಿ ವರದಿ ಜಾರಿಗೆ ಎಂ ಎಲ್ ಸಿ ಸುನೀಲಗೌಡ ಪಾಟೀಲ ಪತ್ರ

ವಿಜಯಪುರ: ಗ್ರಾಮ ಪಂಚಾಯಿತಿ ಸಿಬ್ಬಂದಿ ವೇತನ ಪಾವತಿಗೆ ಪಂಚಾಯಿತ ರಾಜ್ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿರುವ ಸರಕಾರದ ಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಸ್ವಾಗತಿಸಿದ್ದಾರೆ.  ಅಲ್ಲದೇ, ಮೂರು ತಿಂಗಳ ಒಳಗಾಗಿ ವರದಿಯನ್ನು ಪಡೆದು, ಸಿಬ್ಬಂದಿಯ ಕುಂದು-ಕೊರತೆಗಳು ನಿವಾರಣೆ ಆಗುವ ದೃಷ್ಠಿಯಿಂದ ಕೂಡಲೇ ವರದಿಯನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಪಂಚಾಯಿತಿ ರಾಜ್ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ತಿಂಗಳ ವೇತನ ದೊರೆಯದೆ ತೊಂದರೆಯಾಗುತ್ತಿದೆ.  ಪಂಚಾಯಿತಿಗಳಲ್ಲಿ ವಸೂಲು ಮಾಡುವ ತೆರಿಗೆಯಲ್ಲಿ ಶೇ.40 ರಷ್ಟು ಮೊತ್ತವನ್ನು ಸಿಬ್ಬಂದಿ ವೇತನಕ್ಕೆ ಮೀಸಲಿಡಬೇಕು.  15ನೇ ಹಣಕಾಸು ಯೋಜನೆಯಡಿ ಸ್ವಚ್ಚತೆ ಮತ್ತು ನೈರ್ಮಲ್ಯ ಸೇವೆ ನೀಡುವವರಿಗೆ ವೇತನ ಪಾವತಿಸಲು ಅನುದಾನ ಮೀಸಲಿಡಬೇಕು.  ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಡಾಟಾ ಎಂಟ್ರಿ ಆಪರೆಟರ್ ಸೇವೆಯನ್ನು 2006-07 ರಿಂದ ಪರಿಗಣಿಸುವುದು ಸೇರಿದಂತೆ ಇತರ ಬೇಡಿಕೆಗಳ ಕುರಿತು ಗ್ರಾಮ ಪಂಚಾಯಿತಿ ನೌಕರರು ತಮ್ಮ ಸಂಘಟನೆಗಳ ಮೂಲಕ ಹಲವಾರು ವರ್ಷಗಳಿಂದ ಸರಕಾರವನ್ನು ಒತ್ತಾಯಿಸುತ್ತ ಬಂದಿದ್ದಾರೆ.  ಈ ಕುರಿತು ವಿಧಾನ ಪರಿಷತನಲ್ಲಿ ಹಲವು ಬಾರಿ ಪ್ರಸ್ತಾಪ ಮಾಡಲಾಗಿದ್ದು, ತೀವ್ರ ಒತ್ತಾಯದ ನಂತರ ಕೊನೆಗೂ ಈಗ ಸರಕಾರ ಈ ಕುರಿತು ಸಮಿತಿ ರಚಿಸಿ ಆದೇಶ ಹೊರಡಿಸಿದೆ.

ಪಂಚಾಯಿತಿ ಸಿಬ್ಬಂದಿಯ ಕುಂದು-ಕೊರತೆಗಳನ್ನು ಖುದ್ದಾಗಿ ಆಲಿಸಿ, ಶಾಶ್ವತವಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಸಿಬ್ಬಂದಿಯ ಕುಂದು-ಕೊರತೆಗಳಿಗೆ ಪರಿಹಾರ ಒದಗಿಸಲು ಈ ಸಮಿತಿ ಮುಂದಾಗಬೇಕು ಎಂದು ಸುನೀಲಗೌಡ ಪಾಟೀಲ ಬರೆದಿರುವ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Leave a Reply

ಹೊಸ ಪೋಸ್ಟ್‌