ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರೂ. 10 ಕೋ. ಅನುದಾನ ಬಿಡುಗಡೆ- ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

ಬೆಂಗಳೂರು: ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ರೂ. 10 ಕೋ. ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. 

ಬೆಂಗಳೂರಿನಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಅಖಿಲ ಗೋವಾ ಕನ್ನಡ ಮಹಾಸಂಘದ ಪದಾಧಿಕಾರಿಗಳಿಗೆ ಮುಖ್ಯಮಂತ್ರಿಗಳು ಈ ಭರವಸೆ ನೀಡಿದರು.  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ನೇತೃತ್ವದಲ್ಲಿ ಗೋವಾ ಕನ್ನಡ ಮಹಾಸಂಘ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಗೋವಾ ರಾಜ್ಯದಲ್ಲಿ ಉತ್ತರ ಕರ್ನಾಟಕ ಭಾಗದ ಬಹುತೇಕ ಜನರು ನೆಲೆಸಿದ್ದಾರೆ.  ಅವರು ಹೊರನಾಡು ಗೋವಾದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುತ್ತಿದ್ದಾರೆ.  ಕನ್ನಡ ಸಂಸ್ಕೃತಿಯನ್ನು ಕಾಪಾಡುತ್ತಿದ್ದಾರೆ.  ಆದರೆ, ಕನ್ನಡಿಗರಿಗೆ ಅಲ್ಲಿ ನೆಲೆಯಿಲ್ಲ.  ಹೀಗಾಗಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಸರಕಾರ ಸಿದ್ಧವಿದೆ.  ಇದಕ್ಕೆ ಸೂಕ್ತ ಭೂಮಿಯನ್ನು ಗುರುತಿಸಿ ಡಿಪಿಆರ್ ಸಿದ್ಧಪಡಿಸುವಂತೆ ಸಿಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಲ್ಲದೇ, ಕನ್ನಡ ಭವನ ನಿರ್ಮಾಣಕ್ಕೆ ರೂ. 10 ಕೋ. ಮಂಜೂರು ಮಾಡುವಂತೆ ಸಿಎಂ ಅಧಿಕಾರಿಗಳಿಗೆ ಆದೇಶ ನೀಡಿದರು.  ಮುಖ್ಯಮಂತ್ರಿಗಳ ಈ ನಿರ್ಧಾರಕ್ಕೆ ಗೋವಾ ಕನ್ನಡ ಮಹಾಸಂಘದ ಗೌರವ ಅಧ್ಯಕ್ಷ ಸಿದ್ದಣ್ಣ ಮೇಟಿ ಮತ್ತು ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು.

ಗೋವಾ ಕನ್ನಡ ಮಹಾ ಸಂಘದ ಅಧ್ಯಕ್ಷ ಹನುಮಂತರೆಡ್ಡಿ ಶಿರೂರ, ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಾದಾಮಿ. ಮಹೇಶ ಬಾಬು ಸುರ್ವೇ, ಅರುಣಕುಮಾರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌