ಮಹಿಳಾ ವಿವಿಯಿಂದ ಶಿಷ್ಟಾಚಾರ ಉಲ್ಲಂಘನೆ- ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ

ವಿಜಯಪುರ: ವಿಜಯಪುರ ಜಿಲ್ಲೆಯ ತೊರವಿಯಲ್ಲಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಅಧಿಕಾರಿಗಳು ಶಿಷ್ಠಾಚಾರ ಉಲ್ಲಂಘಿಸಿದ್ದಾರೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದ್ದಾರೆ.

ಮಹಿಳಾ ವಿಶ್ವವಿದ್ಯಾಲಯದಲ್ಲಿ ನಡೆದ ಮತ್ರು ರಾಜ್ಯಪಾಲರು ಭಾಗವಹಿಸಿದ ಘಟಿಕೋತ್ಸವ ಕಾರ್ಯಕ್ರಮಕ್ಕೆ ತಮ್ಮನ್ನು ಅಮಂತ್ರಿಸದೆ ಶಿಷ್ಠಾಚಾರವನ್ನು ಉಲ್ಲಂಘಿಸಿದ್ದಾರೆ ಎಂದು ರಮೇಶ ಜಿಗಜಿಣಗಿ ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸೋಮವಾರ ರಾಜ್ಯಪಾಲ ಥಾವರ್ಚಂದ ಗೆಹ್ಲೋಟ್ ಅವರು ವಿಜಯಪುರ ತಲುಪುತ್ತಿದ್ದಂತೆ ನನಗೆ ದೂರವಾಣಿ ಕರೆ ಮಾಡಿದರು. ಆಗಲೇ ಅವರ ವಿಜಯಪುರ ಕಾರ್ಯಕ್ರಮ ಮತ್ತು ವಿಶ್ವವಿದ್ಯಾಲಯ ಆಯೋಜಿಸಿರುವ ಘಟಿಕೋತ್ಸವ ಕುರಿತು ತಮಗೆ ಗೊತ್ತಾಯಿತು ಎಂದು ಅವರು ಹೇಳಿದ್ದಾರೆ.

ವಿಶ್ವವಿದ್ಯಾಲಯ ರಾಜ್ಯಪಾಲರನ್ನು ಆಮಂತ್ರಿಸಿದ್ದರಿಂದ ನನ್ನನ್ನು ಆಮಂತ್ರಿಸುವದು ಸರಕಾರದ ಶಿಷ್ಠಾಚಾರವಾಗಿದೆ. ಅದನ್ನು ವಿಶ್ವವಿದ್ಯಾಲಯದ ಕುಲಪತಿಗಳು ಉಲ್ಲಂಘಿಸಿದ್ದಾರೆ. ತಡವಾಗಿದ್ದರೆ ದೂರವಾಣಿ ಮುಖಾಂತರವಾದರೂ ತಮಗೆ ಮಾಹಿತಿ ನೀಡಬಹುದಿತ್ತು. ಆದರೆ ನನಗೆ ಯಾವ ಮಾಹಿತಿ ಇಲ್ಲದ್ದರಿಂದ ನಾನು ದೆಹಲಿಗೆ ಬಂದಿದ್ದೇನೆ. ಇಲ್ಲಿರುವಾಗ ರಾಜ್ಯಪಾಲರು ಖುದ್ದು ನನ್ನನ್ನು ಸಂಪರ್ಕಿಸಿ ನಿಮ್ಮ ನಗರಕ್ಕೆ ಬಂದಿದ್ದೇನೆ ನೀವು ಎಲ್ಲಿ ಎಂದು ಪ್ರಶ್ನಿಸಿದಾಗಲೆ ನನಗೆ ಎಲ್ಲ ವಿಷಯ ಗೊತ್ತಾಯಿತು ಎಂದು ಸಂಸದರು ತಿಳಿಸಿದ್ದಾರೆ.

ಇದರಿಂದ ನನಗೆ ಮುಜುಗುರವಾಗಿದೆ. ಮಹಿಳಾ ವಿಶ್ವವಿದ್ಯಾಲಯ ಲೋಪ ಕುರಿತು ಸರಕಾರ, ರಾಜ್ಯಪಾಲ ಮತ್ತು ಲೋಕಸಭೆ ಸ್ಪೀಕರ್ ಅವರಿಗೆ ಪತ್ರ ಬರೆಯುವದಾಗಿ ಹೇಳಿರುವ ಅವರು ಇದೊಂದು ಗಂಭೀರ ಲೋಪ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನೊಬ್ಬ ಸಂಸದ. ನನಗೆ ಅನೇಕ ಜವಾಬ್ದಾರಿಗಳಿವೆ. ಶಿಷ್ಠಾಚಾರ ಪ್ರಕಾರ ನನಗೆ ಆಮಂತ್ರಿಸುವದು ವಿಶ್ವವಿದ್ಯಾಲಯ ಕರ್ತವ್ಯ. ಅದನ್ನು ಅವರು ಮರೆತಿರುವುದು ಖಂಡನೀಯ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಕಿಡಿ ಕಾರಿದ್ದಾರೆ.

Leave a Reply

ಹೊಸ ಪೋಸ್ಟ್‌