ಎಂ ಎಲ್ ಸಿ ದ್ವಿ ಸದಸ್ಯ ಸ್ಥಾನಕ್ಕೆ ಚುನಾವಣೆ- ಅಖಂಡ ವಿಜಯಪುರ ಜಿಲ್ಲೆಯ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಪಿ ಸುನೀಲ ಕುಮಾರ

ವಿಜಯಪುರ: ಅಖಂಡ ವಿಜಯಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ದ್ವಿಸದಸ್ಯ ಸ್ಥಾನಕ್ಕೆ ನಡೆಯಲಿರುವ ವಿಧಾನ ಪರಿಷತ ಚುನಾವಣೆಯ ಸಿದ್ಧತೆಗಳ ಕುರಿತು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಮಾಹಿತಿ ನೀಡಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನೊಳಗೊಂಡಿರುವ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ವಿಧಾನ ಪರಿಷತ್ ಕ್ಷೇತ್ರದ ಎರಡು ಸ್ಥಾನಗಳಿಗೆ ಚುನಾವಣೆ ದಿನಾಂಕ ನಿಗದಿಯಾಗಿದ್ದು ಎಂದು ತಿಳಿಸಿದರು.

ಕೇಂದ್ರ ಚುನಾವಣೆ ಆಯೋಗ ಚುನಾವಣೆಗೆ ದಿನಾಂಕ ನಿಗದಿ ಮಾಡಿದೆ.  ಈಗ ಹಾಲಿ ಸದಸ್ಯರಾಗಿರುವ ಕಾಂಗ್ರೆಸ್ಸಿನ ಎಸ್. ಆರ್. ಪಾಟೀಲ ಮತ್ತು ಸುನೀಲಗೌಡ ಪಾಟೀಲ ಅವರ ಅಧಿಕಾರಾವಧಿ 5ನೇ ಜನೇವರಿ 2022ಕ್ಕೆ ಮುಕ್ತಾಯವಾಗಲಿದೆ.  ಈ ಹಿನ್ನೆಲೆಯಲ್ಲಿ ನವೆಂಬರ್ 16 ರಂದು ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ ಎಂದು ತಿಳಿಸಿದರು.

ನವೆಂಬರ್ 23 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.  ನವೆಂಬರ್ 26 ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದೆ. ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.  ಡಿಸೆಂಬರ್ 10 ರಂದು ಮತದಾನ ನಡೆಯಲಿದ್ದು, ಅಂದು ಬೆ. 8 ರಿಂದ ಸಂ. 4 ಗಂಟೆಯವರೆಗೆಮತದಾನ ನಡೆಯಲಿದೆ ಎಂದು ತಿಳಿಸಿದರು.

ಮತದಾರರ ಅನುಕೂಲಕ್ಕಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 37 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.  ಡಿ. 14 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಒಟ್ಟು 461 ಸ್ಥಳಿಯ ಸಂಸ್ಥೆಗಳ 7689 ಜನಪ್ರತಿನಿಧಿಗಳು ಮತ ಚಲಾವಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಇದಕ್ಕೂ ಮುಂಚೆ ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಮ್ಮ ಕಚೇರಿಯ ಸಭಾಂಗಮದಲ್ಲಿ ನಾನಾ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಈ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆಯನ್ನು ಪಾರದರ್ಶಕ ಹಾಗೂ ನ್ಯಾಯ ಸಮ್ಮತವಾಗಿ ನಡೆಸಲು ನಿಟ್ಟಿನಲ್ಲಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.  ಈ ಚುನಾವಣೆಯನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎರಡು ಜಿಲ್ಲೆಗಳ ನಾನಾ ಚುನಾವಣೆ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ ಮತದಾರರ ಪಟ್ಟಿಯನ್ನು ಸಮರ್ಪಕವಾಗಿ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಮೂರು ದಿನಗಳ ಒಳಗಾಗಿ ಪಟ್ಟಿ ಲಭ್ಯವಾಗಲಿದೆ.  ಚುನಾವಣೆಗೆ ಜಿಲ್ಲಾಧಿಕಾರಿಗಳು ಆರ್ ಓ ಹಾಗೂ ವಿಜಯಪುರ ಅಪರ ಜಿಲ್ಲಾಧಿಕಾರಿ ಮತ್ತು ಬಾಗಲಕೋಟೆ ಅಪರ ಜಿಲ್ಲಾಧಿಕಾರಿಗಳು ಎ ಆರ್ ಓ ಗಳಾಗಿರುತ್ತಾರೆ.  ಬಾಗಲಕೋಟೆ ಜಿಲ್ಲೆಯ ಕರಡಿ ಮತಗಟ್ಟೆ ಕೇಂದ್ರವನ್ನು ಹೊರತು ಪಡಿಸಿದರೆ ಒಟ್ಟು 37 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗುತ್ತಿದೆ.  ಇದರಲ್ಲಿ ಎಂಎಲ್ಎ,  ಎಂಪಿ, ಎಂ ಎಲ್ ಸಿ ಸೇರಿದಂತೆ ನಗರ, ಗ್ರಾಮೀಣ ಸಂಸ್ಥೆಗಳಿಂದ ಆಯ್ಕೆಯಾದವರು ಮತದಾರರಿರುತ್ತಾರೆ ಎಂದು ಅವರು ತಿಳಿಸಿದರು.

ಈ ಸಭೆಯಲ್ಲಿ ನಾನಾ ಪಕ್ಷಗಳ ಪ್ರತಿನಿಧಿಗಳು ಪಾಲ್ಗೋಂಡಿದ್ದರು.

 

Leave a Reply

ಹೊಸ ಪೋಸ್ಟ್‌