ವಿಜಯಪುರ: ವಿಧಾನ ಪರಿಷತ್ತಿನ ವಿಜಯಪುರ ಕ್ಸೇತ್ರದ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸುವ ಕುರಿತು ಚರ್ಚೆ ನಡೆದಿದ್ದು, ಇನ್ನೂ ಅಂತಿಮ ತೀರ್ಮಾನವಾಗಿಲ್ಲ ಎಂದು ವಿಧಾನ ಪರಿಷತ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಸಕ್ತ ವಿಧಾನ ಪರಿಷತ ಚುನಾವಣೆಯಲ್ಲಿ ರಾಜ್ಯಾದ್ಯಂತ ಕನಿಷ್ಠ 15 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಚುನಾವಣೆ ನೋಟಿಫಿಕೆಶನ್ ಆಗಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಪೂರ್ವ ತಯಾರಿ ಬೈಠಕ್ ನ್ನು ವಿಜಯಪುರದಲ್ಲಿ ನಡೆಸಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನ. 20 ರಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ವಿಜಯಪುರ ಜಿಲ್ಲೆಯ ಶಾಸಕರು, ಸಂಸದರು ಕೂಡ ಪಾಲ್ಗೋಳ್ಳಲಿದ್ದಾರೆ. ಗ್ರಾ. ಪಂ. ಸದಸ್ಯರಿಂದ ಹಿಡಿದು ಸಂಸದರ ವರೆಗೆ ಯಾರಾರು ಚುನಾಯಿತ ಸದಸ್ಯರಿದ್ದಾರೆ ಅವರೆಲ್ಲರ ಸಮಾವೇಶ ಅಂದು ನಡೆಯಲಿದೆ ಎಂದು ಅವರು ತಿಳಿಸಿದರು.
ನಮ್ಮ ಅಭ್ಯರ್ಥಿ ಯಾರು ಎಂಬುದರ ಕುರಿತು ಒಂದೆರಡು ದಿನಗಳಲ್ಲಿ ಘೋಷಣೆಯಾಗಲಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿ ಬಂದಿದೆ. ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎಂಬುದರ ಕುರಿತು ಚರ್ಚೆ ನಡೆಯುತ್ತಿದೆ. ಕಳೆದ ಬಾರಿ ನಾವು ಆರು ಸ್ಥಾನಗಳನ್ನು ಗೆದ್ದಿದ್ದೇವೆ. ಈ ಬಾರಿ ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಒಟ್ಟು ಸುಮಾರು 15 ಸ್ಥಾನಗಳನ್ನಾದರೂ ಗೆಲ್ಲುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಡೀ ರಾಜ್ಯಾದ್ಯಂತ ನಾಲ್ಕು ತಂಡಗಳನ್ನು ರಚನೆ ಮಾಡಿದೆ. ಯಡಿಯೂರಪ್ಪ, ಜಗದೀಶ ಶೆಟ್ಟರ್, ನಳೀನಕುಮಾರ ಕಟೀಲ, ಸದಾನಂದಗೌಡ ಮತ್ತು ಕೆ. ಎಸ್. ಈಶ್ವರಪ್ಪ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ. ಇದೇ ತಿಂಗಳು ನ. 18 ರಿಂದ 21ರ ವರೆಗೆ ರಾಜ್ಯದ ಎಲ್ಲ 25 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವುದಕ್ಕಾಗಿ ಈ ನಾಲ್ಕು ತಂಡಗಳು ಪ್ರವಾಸ ಕೈಗೊಳ್ಳಲಿವೆ ಎಂದು ಅವರು ತಿಳಿಸಿದರು.
ವಿಜಯಪುರ ದ್ವಿಸದಸ್ಯ ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಸ್ಪರ್ಧಿಸಬೇಕು ಎಂಬ ಚರ್ಚೆ ನಡೆದಿದೆ. ಇನ್ನೂ ಅಂತಿಮ ನಿರ್ಣಯ ಆಗಬೇಕು. ಇನ್ನೋಂದೆರಡು ದಿನಗಳಲ್ಲಿ ನಿರ್ಧಾರವಾಗಬಹುದು. ಈಗಾಗಲೇ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಟಬಾಳ, ಕಳೆದ ಬಾರಿ ಸ್ಪರ್ಧಿಸಿದ್ದ ಗೂಳಪ್ಪ ಶೆಟಗಾರ ಮತ್ತು ಬಾಗಲಕೋಟೆ ಜಿಲ್ಲೆಯಿಂದಲೂ ಆಕಾಂಕ್ಷಿಗಳು ಟಿಕೆಟ್ ಕೇಳಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಬಹಳ ದೊಡ್ಡದಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ದಿನಗಳಲ್ಲಿ ಅಂತಿನ ತೀರ್ಮಾನವಾಗಲಿದೆ. ರಾಜ್ಯದಲ್ಲಿ ಕನಿಷ್ಠ 15ಕ್ಕಿಂತಲೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಧಾನ ಪರಿಷತ ಸದಸ್ಯ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ ತಿಳಿಸಿದರು.
ವಿಜಯಪುರ: ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಮತ್ತು ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರಿಗೆ ಬೇರೆ ಕೆಲಸ ಇಲ್ಲ. ಹೀಗಾಗಿ ಯಾವುದಾದರೊಂದು ಹೊಸ ವಿಷಯ ಹುಡುಕುತ್ತಿರುತ್ತಾರೆ. ಈಗ ಬಿಟ್ ಕಾಯಿನ್ ಆ ಪಟ್ಟಿಯಲ್ಲಿ ಸೇರಿಕೊಂಡಿದೆ ಎಂದು ವಿಧಾನ ಪರಿಷತ ಬಿಜೆಪಿ ಸದಸ್ಯ ಎನ್. ರವಿಕುಮಾರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ಬಿಟ್ ಕಾಯಿನ್ ವಿಷಯ ಪ್ರಸ್ತಾಪಿಸಿದ್ದಾರೆ. ಅವರಿಗೆ ಆಕಸ್ಮಿಕವಾಗಿ ಬಿಜೆಪಿಯವರು ಯಾರಿದ್ದಾರೆ ಎಂಬುದನ್ನು ಸಾಕ್ಷಾಧಾರ ಸಮೇತ ತೆಗೆದುಕೊಂಡು ಬರಲಿ. ಅದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಈಗಾಗಲೇ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಆ ಪ್ರಕಾರವಾಗಿ ತನಿಖೆ ನಡೆಯಲಿದೆ. ಸಿದ್ಧರಾಮಯ್ಯ ಅವರ ಕಾಲದಲ್ಲಿಯೂ ಬಿಟ್ ಕಾಯಿನ್ ವಿಷಯ ಬಂದಿತ್ತು. ಇದೇನು ಹೊಸದೇನಲ್ಲ. ಅವರ ಕಾಲದಲ್ಲಿ ಯಾಕೆ ತನಿಖೆ ನಡೆಸಲಿಲ್ಲ ಎಂದು ಅವರು ಪ್ರಶ್ನಿಸಿದರು.
ಸಿದ್ಧರಾಮಯ್ಯ ಅವರದು ಯಾವಾಗಲೂ ಹಿಟ್ ಆ್ಯಂಡ್ ರನ್. ಮುಟ್ಟೋದು ಓಡಿ ಹೋಗೋದು. ತಟ್ಟೋದು ಓಡಿ ಹೋಗೋದು. ಇದು ಸಿದ್ಧರಾಮಯ್ಯ ಪಾಲಿಸಿ. ಇದನ್ನು ಬಿಜೆಪಿ ಖಾರವಾಗಿ ಖಂಡಿಸುತ್ತದೆ ಎಂದು ಹೇಳಿದ ಅವರು, ರಾಜ್ಯದಲ್ಲಿ ಇಷ್ಟೋಂದು ಜನ ರಾಜಕಾರಣಿಗಳಿದ್ದಾರೆ. ಆಡಳಿತ ಪಕ್ಷ ಇರಲಿ. ವಿರೋಧ ಪಕ್ಷವೇ ಇರಲಿ. ಎಲ್ಲ ಪಕ್ಷಗಳಿರಲಿ. ಯಾವುದೋ ಒಂದು ವಿಷಯದ ಬಗ್ಗೆ ಆರೋಪ ಮಾಡುತ್ತಾರೆ. ಆರೋಪದಲ್ಲಿ ಸತ್ಯ ಇದೆಯೋ? ಸತ್ಯ ಇಲ್ಲವೋ? ಸರಕಾರದ ಕೆಲಸ ಬರೀ ತನಿಖೆ ನಡೆಸುವುದು ಆಗಬಾರದು. ಹೀಗಾಗಿ ಸಾಕ್ಷಾಧಾರ ಸಮೇತವಾಗಿ ಆ ವಿಷಯದ ಬಗ್ಗೆ ಚರ್ಚೆ ನಡೆಸಲು ಬರಲಿ ಎಂದು ಎನ್. ರವಿಕುಮಾರ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ಬಿಜೆಪಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಬೆಳಗಾವಿ ವಿಭಾಗ ಪ್ರಮುಖ ಚಂದ್ರಶೇಖರ ಕವಟಗಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.