ರೈತರಿಗೆ ಮೋಸ ತಪ್ಪಿಸಲು ತಾನೇ ಸ್ವತಃ ಡ್ರ್ಯಾಗನ್ ಫ್ರೂಟ್ ಸಸಿ ತಯಾರಿಸಿ ಮಾರಾಟ- ಆದಾಯ ಕಂಡುಕೊಂಡ ಯುವರೈತನ ಯಶೋಗಾಥೆ

ವಿಜಯಪುರ: ಡ್ರ್ಯಾಗನ್ ಫ್ರೂಟ್ ಇತ್ತೀಚಿನ ವರ್ಷಗಳಲ್ಲಿ ಅತೀ ಹೆಚ್ಚು ಗಮನ ಸೆಳೆಯುತ್ತಿರುವ ಹಣ್ಣು.  ಇದರಲ್ಲಿರುವ ಔಷಝಿಯ ಗುಣಗಳು ನಾನಾ ರೀತಿಯ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ರಾಮಬಾಣವಾಗಿವೆ.  ಈ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಇದನ್ನು ಕೃಷಿ ಮಾಡುತ್ತಿರುವ ರೈತರ ಸಂಖ್ಯೆಯೂ ದಿನೇ ದಿನೇ ಹೆಚ್ಚಾಗುತ್ತಿದೆ.

ಆದರೆ, ಈ ಬೇಡಿಕೆಯ ಲಾಭವನ್ನು ದುರ್ಲಾಭ ಮಾಡಿಕೊಂಡ ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳು ಕಳಪೆ ಗುಣಮಟ್ಟದ ಸಸಿಗಳನ್ನು ಮಾರಾಟ ಮಾಡಿದ ಪರಿಣಾಮ ಹಲವಾರು ರೈತರು ಮೋಸ ಹೋಗಿರುವ ಘಟನೆಗಳೂ ನಡೆದಿವೆ.  ಈ ಹಿನ್ನೆಲೆಯಲ್ಲಿ ಬಸವ ನಾಡಿನ ಯುವ ರೈತನೊಬ್ಬ ಸ್ವಕಾರ್ಯದ ಜೊತೆಗೆ ಸ್ವಾಮಿ ಕಾರ್ಯವನ್ನೂ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಹೀಗೆ ಹಚ್ಚಹಸಿರು ಬನದಲ್ಲಿ ಕೆಂಪಗೆ ಕಾಣುತ್ತಿರುವ ಹಣ್ಣಿನ ಹೆಸರೆ ಡ್ರ್ಯಾಗನ್ ಫ್ರ್ಯೂಟ್.  ಬರದನಾಡು ಬಸವ ನಾಡಿನ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಇಂಗಳಗಿ ಗ್ರಾಮದ ಪ್ರಗತಿ ಪರ ರೈತ ಸದಾನಂದ ಹುಗ್ಗಿ ಎಂಬುವರ ತೋಟದಲ್ಲಿರುವ ಇದು ವಿಶೇಷವಾಗಿ ಗಮನ ಸೆಳೆಯುತ್ತಿದೆ.  ಈ ಯುವ ರೈತ ತಮಗಿರುವ 24 ಎಕರೆ ಜಮೀನಿನ ಪೈಕಿ 4 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ ಗಾಗಿ ಮೀಸಲಿಟ್ಟಿದ್ದಾರೆ.  ಇಲ್ಲಿ ಕೆಂಪು ಮತ್ತು ಬಿಳಿ ಬಣ್ಣದ ಡ್ರ್ಯಾಗನ್ ಬೆಳೆಯುತ್ತಿದ್ದಾರೆ.  ಈ ಬಾರಿ ಉತ್ತಮ ಇಳುವರಿಯನ್ನೂ ಪಡೆದಿದ್ದಾರೆ.  ಥೈಲ್ಯಾಂಡ್‌, ವಿಯಟ್ನಾಂ ಮುಂತಾದ ಕಡೆಗಳಲ್ಲಿ ಹೆಚ್ಚು ಬೇಡಿಕೆಯುಳ್ಳ ಕೆಂಪು ಡ್ರ್ಯಾಗನ್‌ ಹಣ್ಣನ್ನು ಬಿಸಿಲ ನಾಡಲ್ಲಿ ಬೆಳೆದು ಯಶಸ್ವಿಯಾಗಿದ್ದಾರೆ.  ಇವರ ಕುಟುಂಬದ ಅನೇಕರು ಉದ್ಯಮದಲ್ಲಿ ಉನ್ನತ ಸಾಧನೆ ಮಾಡಿದ್ದರೂ ಸದಾನಂದ ಹುಗ್ಗಿ ಮಾತ್ರ ಬೇಸಾಯದ ಮೂಲಕವೇ ಬಂಪರ್ ಬೆಳೆ ತೆಗೆಯುತ್ತಿದ್ದಾರೆ.  ತಮ್ಮ ನಾಲ್ಕು ಎಕರೆಯಲ್ಲಿ ನಾನಾ ತಳಿಯ ಡ್ರ್ಯಾಗನ್ ಹಣ್ಣನ್ನು ಬಗೆ ಬಗೆಯ ರೀತಿಯಲ್ಲಿ ಬೆಳೆಯುವ ವಿಧಾನಗಳನ್ನು ತಾವೇ ಪರಿಚಯಿಸಿದ್ದಾರೆ.

ಡ್ರ್ಯಾಗನ್ ಹಣ್ಣಿನ ಕುರಿತು ಬಹಳಷ್ಟು ಮಾಹಿತಿ ಇರುವ ಹಿನ್ನೆಲೆಯಲ್ಲಿ ಈ ಯುವ ರೈತ ನೆರೆ ರಾಜ್ಯ ತಮಿಳುನಾಡು, ಆಂಧ್ರ ಪ್ರದೇಶದ ರೈತರಿಗೂ ತರಬೇತಿ ನೀಡಿ ಅವರಿಗೂ ಸಹಾಯ ಮಾಡಿದ್ದಾರೆ.

ಡ್ರ್ಯಾಗನ್ ಹಣ್ಣಿಗೆ ಬಂಗಾರದ ಬೆಲೆ ಎಂಬುದು ಯಾವಾಗ ಗೊತ್ತಾಯಿತೊ ಆಗ ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳು ರೈತರಿಗೆ ಮೋಸ ಮಾಡಲು ನಕಲಿ ಹಾಗೂ ಇಳುವರಿ ಕೊಡದ ಸಸಿಗಳನ್ನು ಮಾರಾಟ ಮಾಡಲಾರಂಭಿಸಿದವು.  ಇದನ್ನು ಗಮನಿಸಿದ ಯುವ ರೈತ ಸದಾನಂದ ಹುಗ್ಗಿ ತಾವೇ ರೈತರಿಗೆ ಉಚಿತ ತರಬೇತಿ ಹಾಗೂ ತಮ್ಮ ಹೊಲದಲ್ಲಿ ಮಾಡಲಾಗಿದ್ದ ನರ್ಸರಿ ಸಸಿಗಳನ್ನು ವಿತರಿಸಲು ಪ್ರಾರಂಭಿಸಿದರು.  ಸದ್ಯ ತಮ್ಮ ಹತ್ತಿರ ಬರುವ ಯಾವುದೇ ರೈತರಿಗೆ ತರಬೇತಿ ಜೊತೆಗೆ ಉಚಿತ ಸಸಿ ನೀಡಿ ರೈತರಿಗೆ ಮಾರ್ಗದರ್ಶಕರಾಗಿ ಹೊಸ ಕಾಯಕ ಆರಂಭಿಸಿದ್ದಾರೆ.

ಡ್ರ್ಯಾಗನ್ ಬೆಳೆಗೂ ಅದರದೇ ಆದ ನಿರ್ವಹಣೆ ಬೇಕು.  ವಾರದಲ್ಲಿ ಎರಡರಿಂದ ಮೂರು ಬಾರಿ ನೀರು ಹಾಕಬೇಕು,  ತಿಪ್ಪೆಗೊಬ್ಬರ ಹಾಕಲೇಬೇಕು.  ಆದರೆ, ಮೋಸ ಮಾಡುವ ಕಂಪನಿಗಳು ರೈತರಿಗೆ ಈ ವಿಷಯಗಳ ಕುರಿತು ಮಾಹಿತಿಯನ್ನನೇ ನೀಡದೇ ವಂಚಿಸುತ್ತಿದ್ದಾರೆ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ.

 

ಡ್ರ್ಯಾಗನ್‌ ಫ್ರೂಟ್‌ ಥೈಲ್ಯಾಂಡ್‌, ವಿಯಟ್ನಾಂ ಸೇರಿದಂತೆ ಇತರೆ ದೇಶಗಳಲ್ಲಿ ಜನಪ್ರಿಯ ಹಾಗೂ ಬಹು ಬೇಡಿಕೆಯ ಬೆಳೆಯಾಗಿದೆ.  ಅಲ್ಲಿನ ಸ್ಟಾರ್‌ ಹೋಟೆಲ್‌ಗಳಲ್ಲಿ ಕಾಕ್‌ಟೆಲ್‌ ಜ್ಯೂಸ್, ಫ್ರೂಟ್ ಪ್ಲೇಟ್‌ಗಳಲ್ಲಿ ಈ ಹಣ್ಣಿಗೆ ಸ್ಥಾನವಿದೆ.  ಕಡಿಮೆ ಸಕ್ಕರೆ ಅಂಶ, ಅಧಿಕ ಐರನ್, ಕ್ಯಾಲ್ಶಿಯಂ, ವಿಟಮಿನ್‌ ಹೊಂದಿರುವ ಈ ಹಣ್ಣು ಆರೋಗ್ಯಕ್ಕೆ ಪೂರಕವಾಗಿದೆ.  ಯಾವುದೇ ರೋಗಬಾಧೆ, ಕೀಟಗಳ ಕಾಟವಿಲ್ಲ.  ಒಂದು ಕೆಜಿ ಕೆಂಪು ಡ್ರ್ಯಾಗನ್‌ ಫ್ರೂಟ್‌ ರೂ. 200 ರಿಂದ ರೂ. 250ಕ್ಕೆ ಮಾರಾಟವಾಗುತ್ತದೆ.  ಬಿಳಿ ಡ್ರ್ಯಾಗನ್‌ ಫ್ರೂಟ್‌ ಕೆಜಿಗೆ ರೂ. 150 ರಿಂದ ರೂ. 170ರ ವರಗೆ ಬೆಲೆ ಬಾಳುತ್ತದೆ.

ಎ, ಬಿ, ಸಿಗಳ ಪೈಕಿ ಎ ಗ್ರೇಡ್‌ ಹಣ್ಣನ್ನೇ ಇಲ್ಲಿ ಬೆಳೆಯಲಾಗಿದೆ.  ಅಷ್ಟೇ ಅಲ್ಲ, ಇವರ ತೋಟದಲ್ಲಿ ರೋಜ್ ಆ್ಯಪಲ್, ವಾಟರ್ ಆ್ಯಪಲ್ ಸೇರಿದಂತೆ ಹೆಸರೆ ಕೇಳಿರದ ಹಣ್ಣಿನ ಸಸಿಗಳನ್ನು ತಮ್ಮ ಹೊಲದಲ್ಲಿ ಬೆಳೆಸಿದ್ದಾರೆ.  ಈ ಹೊಲದಲ್ಲಿ ಒಣ ಬೇಸಾಯ ಹಾಗೂ ತರಕಾರಿ ಬೆಳೆಯುತ್ತಿದ್ದಾರ.  ಡ್ರ್ಯಾಗನ್ ಹಣ್ಣಿಗೆ ಬೇಡಿಕೆ ಹೆಚ್ಚು ಇರುವುದರಿಂದ ರೈತರಿಗೆ ಬೆಳೆಯುವಂತೆ ಸಲಹೆ ನೀಡುತ್ತಿದ್ದಾರೆ.  ಅಲ್ಲದೇ ಡ್ರ್ಯಾಗನ್ ಫ್ರೂಟ್ ಬೆಳೆಯುವ ರೈತರಿಗೆ ತಾವೇ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ.  ಮಾರುಕಟ್ಟೆಯಲ್ಲಿ ಒಳ್ಳೆಯ ಹಣ್ಣಿಗೆ ಒಳ್ಳೆಯ ಬೆಲೆ ಇದೆ ಎನ್ನುವುದು ಇವರ ಅಭಿಪ್ರಾಯವಾಗಿದೆ.  ಈ ಹೊಲಕ್ಕೆ ಹೋದ್ರೆ ಡ್ರ್ಯಾಗನ್ ಹಣ್ಣಿನ ಜ್ಯೂಸ್ ಮಾಡಿ ಕೊಡುತ್ತಾರೆ.  ಅಷ್ಟೇ ಅಲ್ಲದೇ ಡ್ರ್ಯಾಗನ್ ಬೆಳೆಯಲು ಮುಂದೆ ಬರುವ ರೈತರಿಗೆ ತರಬೇತಿ ನೀಡಲು ಸದಾ ಹಾತೊರೆಯುತ್ತಾರೆ.  ಈ ಮೂಲಕ ರೈತರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಸದಾ ಕಾರ್ಯೋನ್ಮುಖರಾಗಿದ್ದಾರೆ.

ರೈತರನ್ನು ಮೋಸ ಮಾಡುವ ಕಂಪನಿಗಳು ಹಾಗೂ ವ್ಯಕ್ತಿಗಳ ಬಗ್ಗೆ ಎಚ್ಚರಿಸಿ ತಮ್ಮದೇ ಆದ ನಿರ್ವಹಣೆ ಮೂಲಕ ಡ್ರ್ಯಾಗನ್ ಬೆಳೆದು ಮತ್ತೊಬ್ಬರಿಗೆ ಮಾದರಿಯಾಗುವ ಮೂಲಕ ಸದಾನಂದ ಹುಗ್ಗಿ ಅನ್ನದಾತರ ಪಾಲಿಗೆ ವರದಾನವಾಗಿದ್ದಾರೆ.

Leave a Reply

ಹೊಸ ಪೋಸ್ಟ್‌