ವಿ. ಪ. ಚುನಾವಣೆ- ಪ್ರತಿ ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆವಾರು ತಲಾ ಒಂದು ಮತಗಟ್ಟೆ ಸ್ಥಾಪನೆ- ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಅಖಂಡ ವಿಜಯಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಮತದಾರರ ಅನುಕೂಲಕ್ಕಾಗಿ ಪ್ರತಿ ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳವಾರು ತಲಾ ಒಂದು ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಮತ್ತು ಚುನಾವಣಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದ್ದಾರೆ. 

 

ವಿಜಯಪುರದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾನಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುವವ ವಿಜಯಪುರ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರತಿ ಹೋಬಳಿಗೆ ಒಂದು ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಚುನಾವಣೆ ಆಯೋಗ ಈ ಮುಂಚೆ ತಿಳಿಸಿತ್ತು.  ಆದರೆ, ಆಯೋಗಕ್ಕೆ ಕೆಲವು ದೂರು ಹಾಗೂ ಆಕ್ಷೇಪಣೆಗಳು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಮುಖ್ಯ ಚುನಾವಣಾಧಿಕಾರಿಗಳು ಪ್ರತಿಯೊಂದು ನಗರ ಸ್ಥಳೀಯ ಸಂಸ್ಥೆ, ಗ್ರಾಮೀಣ ಸ್ಥಳೀಯ ಸಂಸ್ಥೆವಾರು ಒಂದು ಮತಗಟ್ಟೆಯನ್ನು ಸ್ಥಾಪಿಸಲು ನಿರ್ದೇಶನ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯಪುರ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆ ಚುನಾವಣೆ-2021 ರ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಜಿ. ಪಂ. ಮುಖ್ಯ ಕಾರ್ಯನಿರ್ವಾಕರ ಕಚೇರಿ, ತಹಸೀಲ್ದಾರ ಕಚೇರಿ, ಕಾರ್ಯ ನಿರ್ವಾಹಣಾಧಿಕಾರಿಗಳ ಕಚೇರಿ, ತಾಲೂಕು ಪಂಚಾಯಿತಿ, ಆಯಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಪ್ರಚುರಪಡಿಸಲಾಗಿರುತ್ತದೆ ಎಂದು ಅವರು ಹೇಳಿದರು.

ಈ ಕರಡು ಮತದಾರರ ಪಟ್ಟಿಗೆ ಸಂಬಂಧಪಟ್ಟಂತೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ, ಜಿ. ಪಂ.  ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ, ತಹಸೀಲ್ದಾರ ಕಚೇರಿ, ಕಾರ್ಯ ನಿರ್ವಹಣಾಧಿಕಾರಿಗಳ ಕಚೇರಿ, ತಾಲೂಕು ಪಂಚಾಯಿತಿ ಹಾಗೂ ಆಯಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ಕಚೇರಿಯಲ್ಲಿ ನ. 18 ರೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.

ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಒಂದು ಮಹಾನಗರಪಾಲಿಕೆ, ಐದು ನಗರ ಸಭೆಗಳು, 10 ಪುರಸಭೆಗಳು, 16 ಪಟ್ಟಣ ಪಂಚಾಯಿತಿಗಳು, ಎರಡು ಜಿಲ್ಲಾ ಪಂಚಾಯಿತಿ, 22 ತಾಲೂಕು ಪಂಚಾಯಿತಿಗಳು, 406 ಗ್ರಾಮ ಪಂಚಾಯಿತಿಗಳು ಸೇರಿದಂತೆ ಒಟ್ಟು 462 ಸ್ಥಳೀಯ ಸಂಸ್ಥೆಗಳಿವೆ.  ಇವುಗಳಲ್ಲಿ ವಿಜಯಪುರ ಜಿಲ್ಲೆಯ 240 ಮತ್ತು ಬಾಗಲಕೋಟೆ ಜಿಲ್ಲೆಯ 222 ಮತಗಟ್ಟೆಗಳು ಸೇರಿವೆ.  ಇದರ ಜೊತೆಗೆ ಬಾಗಲಕೋಟೆಯ ಕರಡಿ ಮತಗಟ್ಟೆ ಕೇಂದ್ರವನ್ನು ಸೇರ್ಪಡೆ ಮಾಡಿ, ಮುಂದುವರೆಸುವಂತೆ ಸೂಚಿಸಲಾಗಿದೆ.  ವಿಜಯಪುರ ಜಿಲ್ಲೆಯಲ್ಲಿ ಒಟ್ಟು 3930 ಮತದಾರರಿದ್ದು, ಬಾಗಲಕೋಟ ಜಿಲ್ಲೆಯಲ್ಲಿ 3440 ಮತದಾರರಿದ್ದಾರೆ. ವಿಜಯಪುರ ಮಹಾಪಾಲಿಕೆ, ವಿಜಯಪುರ ಜಿಲ್ಲೆಯ ನಾಲತವಾಡ, ನಿಡಗುಂದಿ, ಕೊಲ್ಹಾರ, ಮನಗೂಳಿ, ತಿಕೋಟಾ, ಬಬಲೇಶ್ವರ, ದೇವರ ಹಿಪ್ಪರಗಿ ಮತ್ತು ಆಲಮೇಲ ಪಟ್ಟಣ ಪಂಚಾಯಿತಿಗಳು, ಬಾಗಲಕೋಟ ಜಿಲ್ಲೆಯ ಅಮೀನಗಡ, ಕಮತಗಿ, ಬಳಗಲಿ, ಶಿರೂರ ಹಾಗೂ ಲೋಕಾಪುರ ಹೀಗೆ ಒಟ್ಟು ಐದು ಮತದಾನ ಕೇಂದ್ರಗಳು, ವಿಜಯಪುರ ಮತ್ತು ಬಾಗಲಕೋಟೆ ಜಿ. ಪಂ. ವಿಜಯಪುರ ಮತ್ತು ಬಾಗಲಕೋಟ ಜಿಲ್ಲೆಗಳ ಎಲ್ಲ 22 ತಾಲೂಕು ಪಂಚಾಯಿತಿಗಳು, ವಿಜಯಪುರ ಜಿಲ್ಲೆಯ ಅರಸಣಗಿ, ಸಿದ್ಧನಾಥ ಆರ್. ಸಿ. ಗಣಿ, ಕನ್ನೋಳ್ಳಿ, ಬಂದಾಳ, ಯರಗಲ್ ಬಿ. ಕೆ., ಚಾಂದಕವಟೆ, ಗುತ್ತರಗಿ, ಬಳಗಾನೂರ ಗ್ರಾ. ಪಂ. ಗಳ ಒಟ್ಟು 9 ಮತದಾನ ಕೇಂದ್ರಗಳು, ಬಾಗಲಕೋಟ ಜಿಲ್ಲೆಯ ಹಾವರಗಿ, ಬಿಂಜವಾಡಗಿ, ಸಾವಳಗಿ, ಲಕ್ಕನಟ್ಟಿ ಗ್ರಾ. ಪಂ.ಗಳಲ್ಲಿ ಮತಗಟ್ಟೆಗಳಲ್ಲಿ ಮತದಾನ ನಡೆಯುತ್ತಿಲ್ಲ.  ಒಟ್ಟಾರೆ ವಿಜಯಪುರ ಜಿಲ್ಲೆಯಲ್ಲಿ 32 ಮತ್ತು ಬಾಗಲಕೋಟ ಜಿಲ್ಲೆಯಲ್ಲಿ 19 ಸೇರಿದಂತೆ ಒಟ್ಟು 51 ಮತಗಟ್ಟೆಗಳನ್ನು ಮತದಾರರು ಇಲ್ಲದ ಮತಗಟ್ಟೆಗಳು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ತಿಳಿಸಿದರು.

ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣೆ ಶಾಖೆಯ ಹಾದಿಮನಿ ಸೇರಿದಂತೆ ನಾನಾ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌