ಬೆಂಗಳೂರು: ಬಿಟ್ ಕಾಯಿನ್ ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ಮುಲಾಜಿಲ್ಲದೇ ಬಲಿ ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜಯಂತಿ ಅಂಗವಾಗಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸರಕಾರ ಈ ವಿಚಾರದಲ್ಲಿ ಬಹಳ ಮುಕ್ತವಾಗಿದೆ. ಈ ಪ್ರಕರಣವನ್ನು ಬಯಲಿಗೆಳೆದವರೇ ನಾವು. ಈಗಾಗಲೇ ತನಿಖೆ ಮಾಡಿದ್ದು, ಇಡಿ ಮತ್ತು ಸಿಬಿಐ ಗೆ ಶಿಫಾರಸ್ಸು ಮಾಡಿದ್ದು ನಮ್ಮ ಸರಕಾರ. ಇಡಿಯಿಂದ ಈ ಬಗ್ಗೆ ತನಿಖೆ ನಡೆಯುತ್ತಿದೆ. ಸಿಬಿಐ ಇಂಟರಪೋಲ್ ಗೂ ಸಹ ಈ ಬಗ್ಗೆ ಗಮನ ಸೆಳೆಯಲಾಗಿದೆ. ಅವರು ಕೋರಿದ ಅಗತ್ಯ ಮಾಹಿತಿಯನ್ನು ಒದಗಿಸಲಾಗಿದೆ ಎಂದು ತಿಳಿಸಿದತು.
ಮುಖ ಮುಲಾಜಿಲ್ಲದೆ ಕ್ರಮ
ಈ ಪ್ರಕರಣದಲ್ಲಿ ರಾಷ್ಟ್ರಕ್ಕೆ, ರಾಜ್ಯಕ್ಕೆ ಹಾಗೂ ವ್ಯಕ್ತಿಗಳಿಗೆ ಮೋಸವಾಗಿದ್ದರೆ, ಮೋಸ ಮಾಡಿದವರ ವಿರುದ್ಧ ಮುಖ-ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಆರೋಪಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲಾ ಅವರು ಕೇಳಿರುವ ಆರು ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. 2016 ರಿಂದ ಈ ಪ್ರಕರಣಕ್ಕೆ ಕರ್ನಾಟಕದೊಂದಿಗೆ ಸಂಬಂಧ ಇರುವುದಾದರೆ ಅಂದಿನ ಅವರ ಸರಕಾರ ತನಿಖೆ ಏಕೆ ಕೈಗೊಳ್ಳಲಿಲ್ಲ? ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು ಹಾಗೂ ಸಚಿವರು ಯಾಕೆ ಗಮನ ಹರಿಸಲಿಲ್ಲ? ಎಂದು ಪ್ರಶ್ನಿಸಿದ ಅವರು, ಆರೋಪಿ ಶ್ರೀಕೃಷ್ಣನನ್ನು ಬಂಧಿಸಿ, ಬಿಟ್ಟು ಕಳುಹಿಸಲಾಯಿತು. ನಿರೀಕ್ಷಣಾ ಜಾಮೀನು ಪಡೆದಾಗಲೂ ವಿಚಾರಣೆಗೆ ಅವಕಾಶವಿತ್ತು. ಮುಕ್ತವಾಗಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಬಿಟ್ಟು ನಮ್ಮನ್ನು ಎಕೆ ಪ್ರಶ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಆರೋಪಿಯನ್ನು ಬಿಟ್ಟುಕೊಟ್ಟವರಿಂದ ನಾವು ಪಾಠ ಕಲಿಯಬೇಕಿಲ್ಲ. ಆಧಾರ ರಹಿತ ಆರೋಪಗಳನ್ನು ಮಾಡುವ ಬದಲು, ತನಿಖೆ ಮಾಡುತ್ತಿರುವ ಇಡಿಗೆ ಸಾಕ್ಷಾಧಾರಗಳನ್ನು ಒದಗಿಸಲಿ ಎಂದು ಹೇಳಿದರು.
ಚಿಂತನೆಯ ದಿವಾಳಿತನ
ಯಾವುದೋ ಟ್ವಿಟ್ಟರ್ ಹ್ಯಾಂಡಲ್ ಆಧಾರದ ಮೇಲೆ ವಿಚಾರಗಳನ್ನು ಪ್ರಸ್ತಾಪಿಸುತ್ತಾರೆ ಎಂದರೆ ಅದು ಸುರ್ಜೆವಾಲಾ ಅವರ ಚಿಂತನೆಯ ದಿವಾಳಿತನ ಎಂದು ಕಿಡಿ ಕಾರಿದ ಮುಖ್ಯಮಂತ್ರಿಗಳು, ರಾಷ್ಟ್ರೀಯ ಪಕ್ಷದ ವಕ್ತಾರರೊಬ್ಬರಿಗೆ ಈ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡುವುದು ಶೋಭೆ ತರುವುದಿಲ್ಲ. ಸಾಂದರ್ಭಿಕ ಪುರಾವೆಗಳನ್ನು ಇಟ್ಟುಕೊಂಡು ಮಾತನಾಡಬೇಕು ಎಂದು ಕಿವಿಮಾತು ಹೇಳಿದರು.
ವಶಪಡಿಸಿಕೊಂಡಿರುವ ಬಿಟ್ ಕಾಯಿನ್ ಬಗ್ಗೆ ಬಹಳ ಗೊಂದಲವಿರುವ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿ ಶ್ರೀಕೃಷ್ಣ ತನ್ನ ಖಾತೆ ಎಂದು ಯಾವುದೋ ಎಕ್ಸ್ ಚೇಂಜ್ ಖಾತೆಯನ್ನು ನೀಡಿದ್ದಾನೆ ಎಂದು ತಿಳಿಸಿದರು.