ವಿಜಯಪುರ: ವಿಜಯಪುರ ಮತಕ್ಶೇತ್ರದಿಂದ ವಿಧಾನ ಪರಿಷತ್ತಿನ ದ್ವಿಸದಸ್ಯ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ಸಿನಿಂದ ಓರ್ವ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸುವಂತೆ ಎಲ್ಲ ಶಾಸಕರು ಈ ಹಿಂದೆ ಒತ್ತಾಯ ಮಾಡಿದ್ದೇವೆ. ಆದರೆ ಇನ್ನೂ ನಿರ್ಣಯ ಆಗಿಲ್ಲ ಎಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಶಾಸಕ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ ಚುನಾವಣೆಗೆ ಒಬ್ಬರನ್ನು ಅಥವಾ ಇಬ್ಬರನ್ನು ಕಣಕ್ಕಿಳಿಸುವ ಕುರಿತು ಕಾಂಗ್ರೆಸ್ ವರಿಷ್ಠರು ಇನ್ನೂ ನಿರ್ಧಾರ ಕೈಗೊಂಡಿಲ್ಲ. ಈ ಕುರಿತು ಇನ್ನೂ ಯಾವುದೇ ನಿರ್ಣಯವಾಗಿಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಸಭೆ ಕರೆದಾಗ, ಒಬ್ಬರಿಗೆ ಮಾತ್ರ ಟಿಕೆಟ್ ನೀಡಬೇಕು ಎಂದು ಎಲ್ಲ ಶಾಸಕರು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದ ಅವರು, ಈಗ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಬೆಂಗಳೂರಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆ ನಡೆಯಲಿದೆ ಎಂದು ತಿಳಿಸಿದರು.
ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಒಳಒಪ್ಪಂದವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ವಿಜಯಪುರ ಮತಕ್ಷೇತ್ರದಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದು ಒಳಒಪ್ಪಂದವಲ್ಲ. ಪ್ರತಿಸಲ ಮಾಡುವ ಪ್ರ್ಯಾಕ್ಟೀಸ್ ಇದಾಗಿದೆ ಎಂದು ಅವರು ತಿಳಿಸಿದರು.
ಬಿಟ್ ಕಾಯಿನ್ ಸದ್ದು ಮಾಡುತ್ತಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಆ ಬಗ್ಗೆ ನನಗೇನೂ ಗೊತ್ತಿಲ್ಲ. ಈ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಭೂಕಂಪನ ವಿಚಾರ- ಸರಕಾರದ ಗಮನ ಸೆಳೆಯುವೆ
ವಿಜಯಪುರ ಜಿಲ್ಲೆಯ ಅದರಲ್ಲೂ ತಾವು ಪ್ರತಿನಿಧಿಸುವ ಬಸವನ ಬಾಗೇವಾಡಿ ಮತ್ತು ವಿಜಯಪುರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪದೇ ಪದೇ ಉಂಟಾಗುತ್ತಿರುವ ಭೂಕಂಪನದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಚಿವರು, ನನ್ನ ಅನುಭವದ ಪ್ರಕಾರ, ರಿಕ್ಚರ್ ಮಾಪಕದಲ್ಲಿ ತೀವ್ರತೆ ಕಡಿಮೆಯಿದೆ. ಮಹಾರಾಷ್ಟ್ರದ ಕೋಯ್ನಾ ಜಲಾಷಯದ ಭಾಗದಲ್ಲಿ ಆಗಾಗ ಭೂಮಿ ಕಂಪಿಸುತ್ತಿರುತ್ತದೆ. ಅದೇ ರೀತಿ ಆಮಲಟ್ಟಿ ಜಲಾಷಯದ ಸುತ್ತಮುತ್ತ ಆಗುತ್ತಿರಬಹುದು ನನ್ನ ಊಹೆಯಾಗಿದೆ. ಇದಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕಿದೆ. ಕೋಯ್ನಾ ಭಾಗದಲ್ಲಿ ಆಗುತ್ತಿರುವ ಬಗ್ಗೆ ಮೇಲಿಂದ ಮೇಲೆ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈಗ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಮತ್ತು ವಿಜಯಪುರ ತಾಲೂಕುಗಳಲ್ಲಿ ಆಗಾಗ ಭೂಕಂಪನ ಆಗುತ್ತಿದೆ ಎಂದು ಅವರು ತಿಳಿಸಿದರು.
ಈಗಾಗಲೇ ತಜ್ಞರ ತಂಡ ವಿಜಯಪುರ ಮತ್ತು ಬಸವನ ಬಾಗೇವಾಡಿ ತಾಲೂಕಿನ ಭೂಕಂಪನವಾದ ಗ್ರಾಮಗಳಿಗೆ ಭೇಟಿ ನೀಡಿದೆ. ಅದು ಸಲ್ಲಿಸಿರುವ ವರದಿಯ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ ಶಿವಾನಂದ ಪಾಟೀಲ, ವೈಜ್ಞಾನಿಕವಾಗಿ ಇದರ ವಿಶ್ಲೇಷಣೆಯಾಗಬೇಕಿದೆ. ಸೂಕ್ತ ಕಾರಣಗಳನ್ನು ಸಂಶೋಧನೆ ಮಾಡಬೇಕಿದೆ. ತಜ್ಞರ ವರದಿ ಬಂದ ಬಳಿಕ ನಿಖರ ಕಾರಣ ತಿಳಿಯಲಿದೆ. ಸಮಗ್ರ ವರದಿ ಬಂದ ಹೆಚ್ಚಿನ ಮಾಹಿತಿ ನೀಡುವುದಾಗಿ ಅವರು ತಿಳಿಸಿದರು.
ಈಗ ಉಂಟಾಗುತ್ತಿರುವ ಭೂಕಂಪನಕ್ಕೂ ಕೂಡಗಿ ಉಷ್ಣ ವಿದ್ಯುತ್ ಸ್ಥಾವರಕ್ಕೂ ಸಂಬಂಧವಿಲ್ಲ ಎಂದು ಅವರು ತಿಳಿಸಿದರು.
ಪದೇ ಪದೇ ಉಂಟಾಗುತ್ತಿರುವ ಭೂಕಂಪನದ ಕುರಿತು ಬೆಳಗಾವಿ ವಿಧಾನ ಸಭೆ ಅಧಿವೇಶನದಲ್ಲಿ ತಾವು ಸರಕಾರದ ಗಮನ ಸೆಳೆಯುವುದಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕಾಂಗ್ರೆಸ್ ಶಾಸಕ ಮತ್ತು ಮಾಜಿ ಸಚಿವ ಶಿವಾನಂದ ಪಾಟೀಲ ಇದೇ ಸಂದರ್ಭದಲ್ಲಿ ತಿಳಿಸಿದರು.