ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ವಿಶೇಷ ಲೇಖನ

ಡಾ. ರವಿ ಎಸ್.ಕೋಟೆಣ್ಣವರ, 

ಹೋಮಿಯೋಪಥಿ ಖ್ಯಾತ ತಜ್ಞರು.

ವಿಜಯಪುರ: ಮಧುಮೇಹ ಅಥವಾ ಸಕ್ಕರೆ  ರೋಗ ಎನ್ನುವುದು ಬಹಳ. ಪುರಾತನವಾದ ಖಾಯಿಲೆ.  ಅತಿಯಾದ ಮೂತ್ರ ವಿಸರ್ಜಿಸುವ ರೋಗ ಎಂದು ಕೂಡ ಕರೆಯಲಾಗುವುದು. ಪ್ರಾಚೀನ ಭಾರತೀಯ ಚರಕ ಸಂಹಿತೆ, ಸುಶ್ರುತ ಸಂಹಿತೆಗಳಲ್ಲಿಯೂ ಈ ರೋಗದ ಸ್ಥಿತಿಯನ್ನು ಮಧುಮೇಹರೋಗ ಮತ್ತು ಸಿಹಿಮೂತ್ರ ರೋಗ ಎಂದು ಉತ್ತೇಜಿಸಲಾಗಿದೆ. ಇರುವೆಗಳನ್ನು ಆಕರ್ಷಿಸುವ ಮೂತ್ರ ಡಯಾಬಿಟಿಸ್ ಎಂಬ ಶಬ್ದವನ್ನು ಕ್ರಿ.ಶ. 2ನೇ ಶತಮಾನದಲ್ಲಿ ಗ್ರೀಸ್‍ನ ಅರಿಯೇಟಸ್ ಎಂಬ ವೈದ್ಯ ನೀಡಿದನು. ಕ್ರಿ.ಶ. 1600ರಲ್ಲಿ ಥೋಮಸ್ ವಿಲ್ಸನ್ ಎಂಬಾತ ಡಯಬಿಟಿಸ್ ಇನ್‍ಸಿಪಿಡಸ್ (ಅತಿಯಾದ ಮೂತ್ರ) ಮತ್ತು ಡಯಬಿಟಿಸ್ ಮೆಲಿಟಸ್ (ಸಿಹಿಮೂತ್ರ) ಎಂದು ಎರಡು ಪ್ರತ್ಯೇಕ ರೋಗಗಳೆಂದು ಹೇಳಿದನು. ಒಟ್ಟಿನಲ್ಲಿ ಮಧುಮೇಹ, ಸಿಹಿಮೂತ್ರ, ಸಕ್ಕರೆ ಖಾಯಿಲೆ ಹೀಗೆ ಹಲವಾರು ಹೆಸರುಗಳಿಂದ ಕರೆಯಲ್ಪಡುವ ಈ ರೋಗ ಆಧುನಿಕ ಜಗತ್ತಿಗೆ ಈ ಶತಮಾನದ ಕೊಡುಗೆ ಎಂದರೂ ತಪ್ಪಲ್ಲ.

ಭಾರತಕ್ಕೆ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಸಾಧ್ಯತೆ ಭಾರತ ದೇಶಕ್ಕೂ ಮಧುಮೇಹ ರೋಗಕ್ಕೂ ಬಹಳ ನೆಂಟಸ್ತಿಕೆ ಇದೆ ಅನ್ನುವುದು ಬಹಳ ಕಳವಳಕಾರಿ ಅಂಶ. ಇನ್ನೊಂದೆರಡು ವರ್ಷಗಳಲ್ಲಿ ಮಧುಮೇಹ ಜಗತ್ತಿನ ರಾಜಧಾನಿ ಎಂಬ ಹಣೆಪಟ್ಟಿ ಭಾರತಕ್ಕೆ ಬರುವ ಎಲ್ಲಾ ಸಾಧ್ಯತೆಗಳೂ ಇದೆ. ಸಧ್ಯಕ್ಕೆ ಜಗತ್ತಿನ ಮಧುಮೇಹ ರೋಗಿಗಳಲ್ಲಿ ಬಾರತೀಯರ ಪಾಲು ಶೇಕಡಾ 20-25ಕ್ಕೂ ಹೆಚ್ಚು. ಸರಿಸುಮಾರು ನಾಲ್ಕು ಕೋಟಿ ಭಾರತೀಯರು ಮಧುಮೇಹಿಗಳು ಎಂಬುದು ಗಮನಾರ್ಹ ಅಂಶ. ಈ ನಾಲ್ಕು ಕೋಟಿಯಲ್ಲಿ ಹೆಚ್ಚಿನವರು ಯುವಕರು ಎನ್ನುವುದು ಕೂಡಾ ಇನ್ನೊಂದು ಕಳವಳಕಾರಿ ಅಂಶ.

ಮಧುಮೇಹದ ಜೊತೆಗೆ ಹೃದ್ರೋಗ, ಅಧಿಕ ರಕ್ತದೊತ್ತಡ, ಲಕವಾ, ಅಂಧತ್ವ, ಲೈಂಗಿಕ ಸಾಮಾಥ್ಯ೯ ಕ್ಷೀಣೀಸುವುದು,ಎಲ್ಲಾ ಉಚಿತವಾಗಿಯೇ ಸಿಗುವಂತಹವು. ಸಾಮಾನ್ಯವಾಗಿ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಅಣ್ಣ ತಮ್ಮಂದಿರಂತಯೇ. ವಯಸ್ಸಾದಂತೆ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆ ಅಧಿಕವಾಗುತ್ತದೆ. 65 ವರ್ಷ ದಾಟಿದ ಬಳಿಕ ಈ ಸಾಧ್ಯತೆ ಮೂರು ಪಟ್ಟು ಜಾಸ್ತಿ ಹೆಚ್ಚಾಗುತ್ತದೆ ಎಂದು ಅಂಕಿ ಅಂಶಗಳು ಹೇಳುತ್ತದೆ. ಈ ಮಧುಮೇಹಿಗಳಲ್ಲಿ ಶೇಕಡಾ 75ರಷ್ಟು ನಗರ ವಾಸಿಗಳು ಮತ್ತು 25ರಷ್ಟು ಗ್ರಾಮೀಣ ವಾಸಿಗಳು ಮತ್ತು ನಗರವಾಸಿಗಳಲ್ಲಿ ಶೇಕಡಾ 50ರಷ್ಟು ಮಂದಿ 40 ವರ್ಷಗಳಿಗಿಂತ ಕೆಳಗಿನವರು ಇದ್ದು, ನಮ್ಮ ನಗರವಾಸಿಗಳ  ಬದಲಾಗುತ್ತಿರುವ ಜೀವನಶೈಲಿ, ಆಹಾರಪದ್ಧತಿ ಮತ್ತು ಕೆಲಸದ ಒತ್ತಡ ಇತ್ಯಾದಿಗಳಿಗೆ ಹಿಡಿದ ಕನ್ನಡಿ ಎಂದರೂ ತಪ್ಪಲ್ಲ.

ಇದಲ್ಲದೆ ನಮ್ಮ ದೇಶದ ಮಧುಮೇಹ ಪೀಡಿತರಲ್ಲಿ ಶೇಕಡಾ 75 ಮಂದಿಗೆ ತಾವು ಮಧುಮೇಹ ರೋಗಿಗಳು ಎಂಬುದರ ಅರಿವೂ ಇರುವುದಿಲ್ಲ. ಇದೇ ಕಾರಣಕ್ಕಾಗಿಯೇ ಮಧುಮೇಹ ರೋಗ ಉಲ್ಭಣಿಸಿ ಇತರ ಖಾಯಿಲೆಗಳಿಗೆ ಕಾರಣವಾಗುತ್ತಿದೆ. ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ರೋಗವನ್ನು ಹತೋಟಿಯಲ್ಲಿರಿಸಿ, ಇನ್ನಿತರ ಅಂಗಾಂಶಗಳಿಗಾಗುವ ತೊಂದರೆಯನ್ನು ತಪ್ಪಿಸಿ, ಮಧುಮೇಹಿಗಳು ಇತರರಂತೆ ಸುಖವಾಗಿ ಬಾಳಬಹುದು. ಈ ಕಾರಣಕ್ಕಾಗಿಯೇ ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಎಂದು ಆಚರಿಸಿ ಮಧುಮೇಹ ರೋಗಗಳ ಬಗ್ಗೆ ಮತ್ತು ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವು ಮತ್ತು ಜಾಗೃತಿ ಮೂಡಿಸಿ, ಅದರಿಂದಾಗುವ ತೊಂದರೆಗಳನ್ನು ಕಡಿಮೆ ಮಾಡುವ ಸದುದ್ದೇಶವನ್ನು ಹೊಂದಿದೆ.

ಮಧುಮೇಹ ಎಂದರೆ ಏನು?

ದೇಹದ ಜೀವಕೋಶಗಳಿಗೆ ಬೇಕಾದ ಶಕ್ತಿಯನ್ನು ಗ್ಲೂಕೋಸ್‍ನಿಂದ ದೊರಕುತ್ತದೆ. ನಾವು ಸೇವಿಸಿದ ಆಹಾರ ಜೀರ್ಣವಾದ ಬಳಿಕ ಗ್ಲೂಕೋಸ್ ಆಗಿ ಪರಿವರ್ತನೆಯಾಗುತ್ತದೆ. ಕರುಳು ಗ್ಲೂಕೋಸ್‍ನ್ನು ಹೀರಿಕೊಂಡು ರಕ್ತಕ್ಕೆ ಬೆರೆಸುತ್ತದೆ. ರಕ್ತಕ್ಕೆ ಸೇರಿದ ಗ್ಲೂಕೋಸ್ ನಿರಂತರವಾಗಿ ದೇಹದ ಎಲ್ಲಾ ಜೀವಕೋಶಗಳಿಗೆ ವಿತರಣೆಯಾಗುತ್ತದೆ. ಈ ಪ್ರಕ್ರಿಯೆ ದೇಹದಲ್ಲಿ ನಿರಂತರವಾಗಿ ನಡೆಯುತ್ತಿರುತ್ತದೆ. ಹೀಗಾಗಿ ರಕ್ತದಲ್ಲಿ ಸದಾಕಾಲ ನಿರ್ದಿಷ್ಟ ಪ್ರಮಾಣದ ಗ್ಲೂಕೋಸ್ ಇರುತ್ತದೆ. ಸಾಮಾನ್ಯವಾಗಿ – ಸಹಜವಾಗಿ 60-160 ಮಿ.ಗ್ರಾಂ. ಇರುತ್ತದೆ. ರಕ್ತದ ಗ್ಲೂಕೋಸ ಪ್ರಮಾಣವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಪಾಸಣೆ ಮಾಡಿದಾಗ 60-110 ಮಿ.ಗ್ರಾಂ ಹಾಗೂ ಆಹಾರ ಸೇವಿಸಿದ ಎರಡು ತಾಸಿನ ನಂತರ 90-160 ಮಿ.ಗ್ರಾಮ ನಷ್ಟು ಇರುತ್ತದೆ.

ನಮ್ಮ ಹೊಟ್ಟೆಯ ಯಕೃತ್ತಿನ ಹಿಂಭಾಗದಲ್ಲಿ ಮೆದೋಜಿರಕ ಗ್ರಂಥಿ ಇರುತ್ತದೆ. ಈ ಗ್ರಂಥಿಯಲ್ಲಿ  ಲ್ಯಾಂಗರ್ ಹ್ಯಾನ್ಸ್  ಎಂಬ ಪುಟ್ಟ ನಿರ್ನಾಳ ಗ್ರಂಥಿಗಳು ಹುದುಗಿಕೊಂಡಿರುತ್ತದೆ. ಇದು ಸಾವಿರಾರು ಜೀವಕೋಶಗಳ ಒಂದು ಗುಚ್ಚವಾಗಿರುತ್ತದೆ. ಈ ಜೀವಕೋಶಗಳಲ್ಲಿ ಆಲ್ಫಾ, ಬೀಟಾ ಮತ್ತು ಡೆಲ್ಟಾ ಎಂದು ಮೂರು ಬಗೆಯ ಜೀವಕೋಶಗಳು ಇದ್ದು, ಇವುಗಳಲ್ಲಿ ಬೀಟಾ ಜೀವಕೋಶಗಳಿಂದ ಇನ್ಸುಲಿನ್ ಎಂಬ ರಸದೂತ ಉತ್ಪತ್ತಿಯಾಗುತ್ತದೆ. ಈ ಇನ್ಸುಲಿನ್ ರಸದೂತ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ. ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾದಾಗ ನಮಗೆ ಹಸಿವಾಗುತ್ತದೆ, ಬಳಲಿಕೆಯಾಗುತ್ತದೆ, ತಲೆ ಸುತ್ತುತ್ತದೆ ಮತ್ತು ಇದನ್ನು  ಹೈಪೊಗ್ಲಿಸಿಮಿಯಾ ಎನ್ನುತ್ತಾರೆ. ಆ ಕ್ಷಣದಲ್ಲಿ ಇನ್ಸುಲಿನ್ ಪ್ರಮಾಣ ಕಡಿಮೆಯಾಗಿ ರಕ್ತದಲ್ಲಿ ಹೆಚ್ಚಿನ ಸಕ್ಕರೆ (ಗ್ಲೂಕೋಸ್) ಪ್ರಮಾಣ ಇರುವಂತೆ ದೇಹವು ವ್ಯವಸ್ಥೆ ಮಾಡಿಕೊಳ್ಳುತ್ತದೆ.

ಒಟ್ಟಿನಲ್ಲಿ ರಕ್ತದಲ್ಲಿನ ಸಕ್ಕರೆಯು ಸಂಪೂರ್ಣ ನಿಯಂತ್ರಣ ‘ಇನ್ಸುಲಿನ್’ ರಸದೂತಕ್ಕೆ ಇರುತ್ತದೆ. ಕೆಲವೊಮ್ಮೆ ಜೀವಕೋಶಗಳಿಗೆ ಸಾಗಿಸಿದ ಬಳಿಕವೂ ಉಳಿದ ಗ್ಲೂಕೋಸ್ ಯಕೃತ್ತಿನಲ್ಲಿ ಶೇಕರಣೆಯಾಗುತ್ತದೆ. ನಾವು ಉಪವಾಸದಿಂದಿರುವಾಗ ಅಗತ್ಯಕ್ಕನುಗುಣವಾಗಿ ಯಕೃತ್ ಉಗ್ರಾಣದಿಂದ ಗ್ಲೂಕೋಸ್ ಹೊರಹೊಮ್ಮತ್ತದೆ. ಹೀಗಾಗಿ ತಾತ್ಕಾಲಿಕವಾಗಿ ಆಹಾರ ಸೇವಿಸದಿದ್ದರೂ ಜೀವಕೋಶಗಳ ಕಾರ್ಯನಿರ್ವಹಣೆಗೆ ಕುಂದಾಗುವುದಿಲ್ಲ. ಒಟ್ಟಿನಲ್ಲಿ ಇನ್ಸುಲಿನ್ ಉತ್ಪಾದನೆ ಕೊರತೆ ಅಥವಾ ನ್ಯೂನತೆ ಇಲ್ಲವೇ, ಪ್ರಭಾವ ಹೀನತೆಯಿಂದ ಹಾಗೂ ನಮ್ಮ ಜೀವಕೋಶಗಳಲ್ಲಿನ ಇನ್ಸುಲಿನ್ ಸಂವೇದನ ಶಕ್ತಿಯ ಕೊರತೆಯಿಂದ ಮಧುಮೇಹ ರೋಗ ಬರುತ್ತದೆ.

ಯಾರಿಗೆ ಮಧುಮೇಹ ಬರಬಹುದು?

ಹೆಚ್ಚಾಗಿ ಅನುವಂಶೀಯವಾಗಿ ಬರುವ ಮಧುಮೇಹ ಸಾಮಾನ್ಯವಾಗಿ 40 ವರ್ಷ ದಾಟಿದ ಮೇಲೆ ಬರುತ್ತಿತ್ತು. ಆದರೆ ಈಗೀಗ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ಸಣ್ಣ ಮಕ್ಕಳು ಮತ್ತು ಯುವಜನತೆಯು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ.

ನಾಗರೀಕತೆಯ ನೆಪದಲ್ಲಿ ಮತ್ತು ಸಂಸ್ಕತಿಯ ಸೋಗಿನಲ್ಲಿ , ಪಾಶ್ಚಿಮಾತ್ಯ ರ ಅಂಧ ಅನುಕರಣೆಯಿಂದಾಗಿ ಇಂದು ನಾವೆಲ್ಲಾ ನೈಸರ್ಗಿಕ ಆಹಾರದಿಂದ ಕೃತಕ ಸಂಸ್ಕರಿತ ಆಹಾರಕ್ಕೆ ಮಾರು ಹೋಗಿದ್ದೇವೆ. ಚಟುವಟಿಕೆಯ ಜೀವನದಿಂದ ಆಲಸ್ಯದ ಬದುಕಿಗೆ ಹೊಂದಿಹೋಗಿದ್ದೇವೆ. ಈ ವ್ಯತಿರಿಕ್ತ ಬದಲಾವಣೆಗಳ ಬಲುವಳಿಯಾಗಿ ನಮಗೆ ದೊರಕಿರುವ ಆನೇಕ ಕಾಯಿಲೆಗಳಲ್ಲಿ ಅಗ್ರಸ್ಥಾನ ಮಧುಮೇಹರೋಗಕ್ಕೆ ಸಲ್ಲುತ್ತದೆ.

ಅನುವಂಶೀಯ ಕಾರಣಗಳು, ವಿಪರೀತ ಬೊಜ್ಜು, ಆಲಸ್ಯ ಮತ್ತು ಸೋಮಾರಿ ಜೀವನ, ಅತಿಯಾಗಿ ಸಂಸ್ಕರಿತ ಕೃತಕ ಆಹಾರ ಸೇವನೆ, ಮಧ್ಯಪಾನ, ಮಾನಸಿಕ ಒತ್ತಡ, ವೇದನೆ, ಮೇಧೂಜಿರಕ ಗ್ರಂಥಿಯ ಸೋಂಕು ಮುಂತಾದವುಗಳಿಂದ ಮಧುಮೇಹ ಬರುವ ಸಾಧ್ಯತೆ ಇದೆ. ನಗರೀಕರಣ, ಕೈಗಾರೀಕರಣ, ಪರಿಸರ ಮಾಲಿನ್ಯ, ಬದಲಾದ ಜೀವನ ಶೈಲಿ, ಆಹಾರ ಶೈಲಿ ಮತ್ತು ಪದ್ಧತಿ, ಒತ್ತಡದ ಬದುಕು ಇವೆಲ್ಲವೂ ಮೆಳೈಸಿ ನಮ್ಮ ಸುಸಂಸ್ಕೃತ ಸಮಾಜ ಆಧುನಿಕತೆಯ ನೆಪದಲ್ಲಿ ರತ್ನಕಂಬಳಿ ಹಾಸಿ ಮಧು ಮೇಹ ರೋಗವನ್ನು ಅಹ್ವಾನಿಸುತ್ತದೆ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ರೋಗ ಈಗೀಗ ಹಳ್ಳಿಗಳಿಗೂ ತನ್ನ ಕದಂಬ ಬಾಹುಗಳನ್ನು ವಿಸ್ತರಿಸುತ್ತದೆ.

ಸಿರಿವಂತರ ಕಾಯಿಲೆ ಎಂಬ ಹೆಗ್ಗಳಿಕೆ ಹೊಂದಿದ ಮಧುಮೇಹ, ಈಗೀಗ ಬಡವರಲ್ಲೂ ಕಾಣಿಸಿಕೊಂಡು ತಮ್ಮ ಶ್ರೀಮಂತಿಕೆ ಮತ್ತು ಪ್ರತಿಷ್ಠೆಯನ್ನು ಕಳಕೊಂಡು ಬಿಟ್ಟಿದೆ.

ತಂದೆತಾಯಂದಿರಿಗೆ ಮಧುಮೇಹವಿದ್ದಲ್ಲಿ ಶೇಕಡಾ 90ರಷ್ಟು ಮಕ್ಕಳಿಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಬ್ಬ ಪೋಷಕ ಮಧುಮೇಹಿ ಮತ್ತೊಬ್ಬ ಪೋಷಕ ಮಧುಮೇಹಿ ಕುಟುಂಬದಿಂದ ಬಂದಿದ್ದಲ್ಲಿ ಮಕ್ಕಳಿಗೆ ಮಧು ಮೇಹ ಬರುವ ಸಾಧ್ಯತೆ ಶೇಕಡಾ 60ರಿಂದ 70. ಯಾರಾದರೊಬ್ಬರು ಪೋಷಕರು ಮಧುಮೇಹಿಗಳಾಗಿದ್ದಲ್ಲಿ ಜನಿಸುವ ಮಕ್ಕಳಿಗೆ ಮಧುಮೇಹ ಬರುವ ಸಾಧ್ಯತೆ ಶೇಕಡಾ 50%. ತಂದೆ ತಾಯಂದಿರಿಗೆ ಮಧುಮೇಹವಿಲ್ಲದಿದ್ದರೂ ರಕ್ತ ಸಂಬಂಧಿಗಳಿಗೆ ಮಧುಮೇಹದ್ದಲ್ಲಿ, ಮಧುಮೇಹ ರಹಿತ ದಂಪತಿಗಳಿಗೆ ಜನಿಸುವ ಮಕ್ಕಳಿಗೆ ಮಧುಮೇಹ ಉಂಟಾಗುವ ಸಾಧ್ಯತೆ ಶೇಕಡಾ 25%. ಈ ಕಾರಣಗಳಿಂದ ಮಧು ಮೇಹ ಪರೀಕ್ಷೆ ಮಾಡುವಾಗ ತಂದೆ ತಾಯಂದಿರ ಜೊತೆಗೆ ರಕ್ತ ಸಂಬಂಧಿಗಳನ್ನೂ ಪರಿಗಣಿಸಬೇಕಾಗುತ್ತದೆ. ಯಾವುದೇ ವಯಸ್ಸಿನಲ್ಲಿ ಮಧುಮೇಹ ರೋಗ ಕಾಡಬಹುದು.

ಮಧುಮೇಹದ ಪ್ರಕಾರಗಳು : ಸಾಮಾನ್ಯವಾಗಿ 3 ರೀತಿಯ ಮಧುಮೇಹ ರೋಗಗಳಿವೆ.

▪️ಒಂದನೇ ವಿಧದ ಮಧುಮೇಹ ಇನ್ಸುಲಿನ್ ರಸದೂತದ ವ್ಯತ್ಯಾಸದ ಕಾರಣದಿಂದಾಗಿ ಸಣ್ಣ ಪ್ರಾಯದಲ್ಲಿಯೇ ಬರಬಹುದು ಇದನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎನ್ನುವರು (lDDM)  ಇದಕ್ಕೆ ಜೀವಮಾನ ಪರ್ಯಂತ ಇನ್ಸುಲಿನ್ ರಸದೂತದ ಅವಶ್ಯಕತೆ ಇದೆ.

▪️ ಎರಡನೆಯ ಪಂಗಡದವರಿಗೆ ಕೇವಲ ನಿಯಮಿತ ಆಹಾರ, ದೈನಂದಿನ ವ್ಯಾಯಾಮ ಚಟುವಟಿಕೆ ಮತ್ತು ಮಾತ್ರೆಗಳ ಮುಖಾಂತರ ದೇಹದ ಸಕ್ಕರೆಯನ್ನು ಹತೋಟಿಯಲ್ಲಿಡಬಹುದು ಇದನ್ನು ಇನ್ಸುಲಿನ್ ಅವಲಂಬಿತವಲ್ಲದ ಮಧುಮೇಹ (NIDDM) ಎಂದೆನ್ನುತ್ತಾರೆ. ಇದು ಸಾಮಾನ್ಯವಾಗಿ 40 ವಯಸ್ಸು ದಾಟಿದ ಬಳಿಕ ಬರಬಹುದು.

▪️ 3ನೇ ವಿಧ ಜುವೆನೈಲ ಮಧುಮೇಹ , ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಂಡಾಗ ಅದನ್ನು ಜುವೆನೈಲ ಎಂದೆನ್ನುವರು.

ಮಧುಮೇಹ ರೋಗದ ಚಿಹ್ನೆಗಳು:

ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಮಧುಮೇಹ ರೋಗದ ಚಿಹ್ನೆಗಳು ಭಿನ್ನವಾಗಿರಲೂಬಹುದು. ವಯಸ್ಕರಲ್ಲಿ ಸಾಮಾನ್ಯವಾಗಿ ಅತಿಯಾದ ಮೂತ್ರ ವಿಸರ್ಜನೆ , ಅತಿ ದಾಹ, ಅತಿ ಬಳಲಿಕೆ ಅತಿಯಾದ ಹಸಿವು ಹೆಚ್ಚಾಗಿ ಕಾಣಸಿಗುತ್ತದೆ. ಇದರ ಜೊತೆಗೆ ಅತಿಯಾದ ಬಳಲಿಕೆ ಆಲಸ್ಯ, ಮೈ ಕೈ ನೋವು, ಅಂಗೈ ಮತ್ತು ಅಂಗಾಲುಗಳು ಉರಿಯುವುದು, ಗುಣವಾಗದ ಗಾಯಗಳು, ದೃಷ್ಟಿಮಾಂದ್ಯತೆ, ಜನನಾಂಗಗಳ ಸೋಂಕು, ಲೈಗಿಂಕ ನಿರಾಸಕ್ತಿ – ನಪುಂಸಕತ್ವ ಇತ್ಯಾದಿ ಕಾಣಬಹುದು. ಮಕ್ಕಳಲ್ಲಿ ಉದರ ನೋವು, ವಾಂತಿ, ಅಶಕ್ತಿ, ಬಳಲಿಕೆ, ಪದೇ ಪದೇ ಮತಿ ತಪ್ಪುವುದು ಮೊಟ್ಟ ಮೊದಲ ರೋಗದ ಚಿಹ್ನೆಗಳಾಗಿರಬಹುದು.

ಅನೇಕ ಮಧುಮೇಹಿಗಳಲ್ಲಿ ಏನೂ ತೊಂದರೆ ಇಲ್ಲದೇ, ಆಕಸ್ಮಿಕ ಮೂತ್ರ ಪರೀಕ್ಷೆಯಿಂದ ಪತ್ತೆಯಾಗಬಹುದು. ಗುಣವಾಗದ ಗಾಯದ ಹುಣ್ಣು, ಬಾಯಿಯ ವಾಸನೆ ಅಥವಾ ಇನ್ನಾವುದೇ ಕಾರಣದಿಂದ ರಕ್ತ ಪರೀಕ್ಷೆ ಮಾಡಿದಾಗ ಮಧುಮೇಹ ರೋಗ ಗೋಚರವಾಗ ಬಹುದು. ಒಟ್ಟಿನಲ್ಲಿ ನಿಮ್ಮ ದೇಹದ ತೂಕ ಜಾಸ್ತಿಯಾದಲ್ಲಿ, ನಿಮ್ಮ ಕುಟುಂಬದಲ್ಲಿ ಅಥವಾ ಹೆತ್ತವರು ಮಧುಮೇಹಿಗಳಾಗಿದ್ದಲ್ಲಿ, ನಿಮ್ಮ ಜೀವನ ಶೈಲಿ ಮುತ್ತು ಆಹಾರ ಪದ್ಧತಿ ಅಸಮರ್ಪಕವಾಗಿದ್ದಲ್ಲಿ, ನಿಮಗೆ ಮಧುಮೇಹ ಬರುವ ಸಾಧ್ಯತೆ ಜಾಸ್ತಿಯಾಗಿರುತ್ತದೆ. ಸಾಕಷ್ಟು ಮುಂಜಾಗರೂಕತೆ ವಹಿಸಿ ಶಿಸ್ತುಬದ್ಧ ಜೀವನ, ದೈಹಿಕ ವ್ಯಾಯಾಮ, ಕ್ರಮಬದ್ಧ ಆಹಾರ, ಒತ್ತಡವಿಲ್ಲದ ಬದುಕು ಮುಂತಾದವುಗಳನ್ನು ರೂಢಿಸಿಕೊಂಡಲ್ಲಿ ಮಧುಮೇಹ ಬಂದರೂ ಎಲ್ಲರಂತೆ ನೀವು ಕೂಡಾ ಸುಖ ಮತ್ತು ನೆಮ್ಮದಿಯ ಜೀವನ ನಡೆಸಬಹುದು.

ಮಧುಮೇಹ ರೋಗದಿಂದಾಗಬಹುದಾದ ತೊಂದರೆಗಳು (complications):

ಇತರ ಸಾಮಾನ್ಯ ಜನರಿಗೆ ಹೋಲಿಸಿದಲ್ಲಿ ಮಧುಮೇಹಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ತೊಂದರೆಗಳು ಈ ರೀತಿ ಇದೆ.

  1. ಕುರುಡುತನ ಅಥವಾ ಅಂಧತ್ವ ಕಾಣಿಸಿಕೊಳ್ಳುವ ಅಪಾಯ 25ರಷ್ಟು ಜಾಸ್ತಿ.
  2. ಹೃದಯಾಘಾತದ ಅಪಾಯ ಎರಡರಿಂದ ಮೂರು ಪಟ್ಟು ಹೆಚ್ಚು.
  3. ಲಕ್ವ (ಪಕ್ಷಪಾತ) ಹೊಡೆಯುವ ಸಾಧ್ಯತೆ ಸುಮಾರು ಎರಡು ಪಟ್ಟು ಜಾಸ್ತಿ.
  4. ಮೂತ್ರಪಿಂಡಗಳ ವೈಕಲ್ಯಕ್ಕೆ ತುತ್ತಾಗುವ ಸಾಧ್ಯತೆ ಸುಮಾರು 15 ಪಟ್ಟು ಜಾಸ್ತಿ.
  5. ಗ್ಯಾಂಗ್ರಿನ್‍ನಿಂದಾಗಿ (ಕಾಲು, ಕೈ ಬೆರಳುಗಳು ಮತ್ತು ಕಾಲ್ಬೆರಳು ಕೊಳೆಯುವಿಕೆ) ಅಂಗಚ್ಚೇದವಾಗುವ ಅಪಾಯ 30ರಿಂದ 35 ಪಟ್ಟು ಜಾಸ್ತಿ.

ನೆನಪಿರಲಿ, ಮಧುಮೇಹದಿಂದಾಗಿ ಜನರು ದಿನ ಬೆಳಗಾಗುವುದರಲ್ಲಿ ಸಾಯುವುದಿಲ್ಲ. ಸರಿಯಾದ ನಿಯಂತ್ರಣವಿಲ್ಲದ ಮಧುಮೇಹದಿಂದಾಗಿ ಕ್ಷಣ ಕ್ಷಣಕ್ಕೂ ಜೀವಕೋಶಗಳಿಗೆ ಹಾನಿಯಾಗಿ ಹೃದಯ, ಕಣ್ಣು, ಮೆದುಳು ಮೂತ್ರಪಿಂಡ, ನರಮಂಡಲ ಹೀಗೆ  ನಿಧಾನವಾಗಿ ವ್ಯಕ್ತಿಯ ಎಲ್ಲಾ ಅಂಗಾಂಗಗಳನ್ನು ವೈಕಲ್ಯಗೊಳಿಸುತ್ತದೆ ಮತ್ತು ನಿಧಾನವಾಗಿ ಕೊಲ್ಲುತ್ತದೆ. ಈ ಕಾರಣಕ್ಕಾಗಿಯೇ ಮಧುಮೇಹಿಗಳು ‘ಮಧುಮೇಹ’ ರೋಗವನ್ನು ಯಾವಾಗಲೂ ನಿಯಂತ್ರಣದಲ್ಲಿ ಇಡಬೇಕಾದ ಅನಿವಾರ್ಯತೆ ಇದೆ.

ಹೋಮಿಯೋಪಥಿ ಚಿಕಿತ್ಸಾ ವಿಧಾನ : ಹೋಮಿಯೋಪಥಿ ವೈದ್ಯ ಪದ್ದತಿಯು ವಿಶ್ವದಲ್ಲಿ ಅತೀ ಹೆಚ್ಚು ಜನ ಸ್ವೀಕರಿಸುವ ಎರಡನೇ ಅತೀ ದೊಡ್ಡ ವೈದ್ಯ ಪದ್ದತಿಯಾಗಿದೆ. ಜಗತ್ತಿನ ಏಳು ಶ್ರೇಷ್ಠ ವೈದ್ಯ ವಿಜ್ಞಾನಿಗಳಲ್ಲಿ ಒಬ್ಬರಾದ ಡಾ.ಎಸ್.ಹಾನಿಮನರಿಂದ ಅನ್ವೇಶಣೆಯಾದ  ಹೋಮಿಯೋಪಥಿ ವೈದ್ಯ ಶಾಸ್ತ್ರವು ಪರಿಸರದೊಂದಿಗೆ ಅನುಸರಿಸಿಕೊಂಡು ಹೋಗುವ ತತ್ವಾಧಾರಗಳ ಮೇಲೆ ರೂಪಿತವಾದ ವೈದ್ಯ ಶಾಸ್ತ್ರವಾಗಿದೆ, ಇಲ್ಲಿ ರೋಗಗಳನ್ನು ತ್ವರಿತವಾಗಿ, ಸೌಮ್ಯವಾಗಿ, ಸಂಪೂಣ೯ವಾಗಿ, ದುಷ್ಪರಿಣಾಮಗಳಿಲ್ಲದೆ, ಅತ್ಯಂತ ಕಡಿಮೆ ಖಚಿ೯ನಲ್ಲಿ ಉಪಶಮನ ಮಾಡಬಹುದು. ಹೋಮಿಯೋಪಥಿ ವೈದ್ಯ ಪದ್ದತಿಯಲ್ಲಿ ರೋಗದ ಹೆಸರಿನಿಂದ ಚಿಕಿತ್ಸೆ ನೀಡದೆ , ಪ್ರತಿಯೊಬ್ಬ ವ್ಯಕ್ತಿಯನ್ನು ವ್ಯಕ್ತಿಗತವಾಗಿ ಮಾನಸಿಕ, ದೈಹಿಕ ಲಕ್ಷಣಗಳನ್ನು ಅಭ್ಯಸಿಸಿ ಔಷಧಿ  ಹಾಗೂ ಸತ್ವ ನಿಧ೯ರಿಸಲಾಗುವುದು. ಮಧುಮೇಹ ಸಮಸ್ಯೆ ಉಳ್ಳವರು ಪ್ರಾಥಮಿಕ ಹಂತದಲ್ಲಿ ಹೋಮಿಯೋಪಥಿ ಚಿಕಿತ್ಸೆಗೆ ಮೊರೆ ಹೋದರೆ ಯಶಸ್ವಿಯಾಗಿ ಗುಣಪಡಿಸಬಹುದು. ಇಲ್ಲಿ ಅನುವಂಶಿಕವಾಗಿ ಬರುವ ಮಧುಮೇಹವನ್ನು ತಾಯಿ

ಗಭ೯ವತಿಯಿದ್ದಾಗಲೆ ಹೋಮಿಯೋಪಥಿ ಔಷಧಿ ನೀಡಿದರೆ ಹುಟ್ಟುವ ಮಗುವನ್ನು ಮಧುಮೇಹಕ್ಕೆ ಒಳಗಾಗದಂತೆ ತಡೆಯಬಹುದು. ಹೋಮಿಯೋಪಥಿ ಚಿಕಿತ್ಸೆಯೊಂದಿಗೆ – ಆಹಾರ ಪದ್ದತಿ – ಯೋಗವನ್ನು  ಅಳವಡಿಸಿಕೊಂಡರೆ ಯಶಸ್ವಿಯಾಗಿ ಹತೋಟಿಗೆ ತರಬಹುದು.

Leave a Reply

ಹೊಸ ಪೋಸ್ಟ್‌