ವಿಜಯಪುರ: ವಿಧಾನ ಪರಿಷತ ಚುನಾವಣೆ ದಿನಾಂಕ ನಿಗದಿಯಾಗಿದ್ದು, ವಿಜಯಪುರ ಕ್ಷೇತ್ರದ ಸ್ಥಳೀಯ ಸಂಸ್ಥೆಗಳಿಂದ ದ್ವಿಸದಸ್ಯ ಸ್ಥಾನಕ್ಕೆ ಮತದಾನ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ವಿಜಯಪುರದಿಂದ ಹಾಲಿ ಸದಸ್ಯ ಸುನಿಲಗೌಡ ಪಾಟೀಲ ಅವರಿಗೆ ಮತ್ತೆ ಟಿಕೆಟ್ ನೀಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ಬೆಂಗಳೂರಿಗೆ ತೆರಳಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದ್ದಾರೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಮುಖಂಡರು ತಮ್ಮನ್ನು ಭೇಟಿ ಮಾಟಿದ ಸಂಗತಿಯನ್ನು ಕಾಂಗ್ರೆಸ್ ನಾಯಕರಾದ ಎಸ್. ಸಿದ್ಧರಾಮಯ್ಯ ಮತ್ತು ಡಿ. ಕೆ. ಶಿವಕುಮಾರ ತಮ್ಮ ಫೇಸ್ ಬುಕ್ ಅಕೌಂಟಿನಲ್ಲಿ ಹಂಚಿಕೊಂಡಿದ್ದಾರೆ.
ವಿಜಯಪುರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ ನೇತೃತದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ವಿಧಾನ ಸಭೆ ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಸುನೀಲಗೌಡ ಪಾಟೀಲ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಅವರನ್ನೂ ಭೇಟಿ ಮಾಡಿರುವ ವಿಜಯಪುರ ಜಿಲ್ಲಾ ಕಾಂಗ್ರೆಸ್ ನಾಯಕರು, ಹಾಲಿ ಸದಸ್ಯ ಸುನೀಲಗೌಡ ಪಾಟೀಲ ಅವರಿಗೆ ಟಿಕೇಟ್ ನೀಡುವಂತೆ ಒತ್ತಡ ಹೇರಿದ್ದಾರೆ.
ಆಗ ಉಭಯ ನಾಯಕರು, ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಪಟ್ಟಿಯನ್ನು ದೆಹಲಿಗೆ ಕಳುಹಿಸಿ ಕೊಡಲಾಗುವುದು. ಹೈಕಮಾಂಡ ಎರಡು ಸ್ಥಾನಗಳಲ್ಲಿ ಎಷ್ಟು ಸ್ಥಾನಗಳಿಗೆ ಮತ್ತು ಯಾರನ್ನು ಕಣಕ್ಕಿಳಿಸಬೇಕು ಎಂಬುದನ್ನು ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ ಎಂದು ಮೂಲಗಳು ಬಸವ ನಾಡು ಗೆ ತಿಳಿಸಿವೆ.
ವಿಜಯಪುರದಿಂದ ತೆರಳಿದ ನಾಯಕರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮತ್ತು ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಸುರೇಶ ಘೋಣಸಗಿ, ಡಾ. ಮಹಾಂತೇಶ ಬಿರಾದಾರ, ಕಾಂತಾ ನಾಯಕ, ಮೈಬೂಬ ತಾಂಬೋಲೆ, ಆರ್. ಡಿ. ಹಕ್ಕೆ, ವಸಂತ ಹೊನಮೋಡೆ, ಶ್ರೀದೆವಿ ಉತ್ಲಾಸರ ಮುಂತಾದವರು ಉಪಸ್ಥಿತರಿದ್ದರು.