ವಿದ್ಯಾರ್ಥಿಗಳು ಭವ್ಯ ಭಾರತ ಕಟ್ಟುವಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ನಡೆಯಬೇಕು- ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಎನ್, ನಾಯಕ

ವಿಜಯಪುರ: ಇಂದಿನ ಮಕ್ಕಳೇ ಮುಂದಿನ ಭವ್ಯ ಭಾರತದ ಪ್ರಜೆಗಳಾಗಿದ್ದು. ಭವ್ಯ ಭಾರತ ಕಟ್ಟುವ ನಿಟ್ಟಿನಲ್ಲಿ ದಿಟ್ಟ ಗುರಿಯೊಂದಿಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಬೇಕು.  ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆಯಿಂದ ಹಾಗೂ ಸಮಚಿತ್ತದಿಂದ ಅಧ್ಯಯನ ನಡೆಸಿ ಯಶಸ್ಸಿನೆಡೆಗೆ ಸಾಗಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಸದಾನಂದ ಎನ್. ನಾಯಕ ಹೇಳಿದ್ದಾರೆ.

ವಿಜಯಪುರ ನಗರದ ಪಿ, ಡಿ, ಜೆ ಶಾಲೆಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಿನಾಚರಣೆ ಹಾಗೂ 75ನೇ ವರ್ಷದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಯೋಜಿಸಲಾದ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ತಾಳ್ಮೆ ಅತ್ಯಂತ ಮುಖ್ಯವಾಗಿದ್ದು, ಸಂಯಮದಿಂದ ವರ್ತಿಸಬೇಕು,  ಪ್ರತಿಯೊಬ್ಬರು ಕಾನೂನನ್ನು ಗೌರವಿಸಬೇಕು.  ಆಗ ಮಾತ್ರ ಕಾನೂನಿನಿಂದ ರಕ್ಷಣೆ ಪಡೆಯಲು ಸಾಧ್ಯ.  ಯಾವುದೇ ಕಾರಣಕ್ಕೂ ಕಾನೂನಿನ ಉಲ್ಲಂಘನೆ ಮಾಡಬಾರದು ಎಂದು ಅವರು ಕಿವಿಮಾತು ಹೇಳಿದರು.

ಎಸ್ಪಿ ಎಚ್. ಡಿ. ಆನಂದ ಕುಮಾರ ಮಾತನಾಡಿ, ಮಕ್ಕಳು ತಮ್ಮ ಓದಿನ ಕಡೆಗೆ ಹೆಚ್ಚಿನ ಗಮನ ಕೊಡಬೇಕು.  ಮೊಬೈಲ್ ಹಾಗೂ ಸಿನೆಮಾಗಳಲ್ಲಿ ಬರುವ ಕೆಟ್ಟ ಸಂದೇಶಗಳ ಪ್ರಭಾವಕ್ಕೊಳಗಾಗದೆ ಶ್ರಮ ವಹಿಸಿ ವಿದ್ಯಾಭ್ಯಾಸ ಮಾಡಿ ತಂದೆ-ತಾಯಿಗಳಿಗೆ, ನಮ್ಮ ಊರು, ರಾಜ್ಯ ರಾಷ್ಟ್ರಕ್ಕೆ ಕೀರ್ತಿ ತರಬೇಕು ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 75 ನೇ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ನಾನಾ ಕಾನೂನುಗಳ ಬಗ್ಗೆ, ಮಕ್ಕಳ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದಕ್ಕಾಗಿ ಮಕ್ಕಳ ಜಾಥಾವನ್ನು ಸಹಿತ ನೆರವೇರಿಸಿ ಜಾಗೃತಿ ಮೂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ವೆಂಕಣ್ಣ ಬ, ಹೊಸಮನಿ. ಸರಕಾರಿ ಅಭಿಯೋಜಕ ಕೆ. ಕೆ, ಕುಲಕರ್ಣಿ, ಡಿಡಿಪಿಐ ಎನ್, ವಿ, ಹೊಸೂರ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ಪಿಡಿಜೆ ಹೈಸ್ಕೂಲ್ ಪ್ರಾಚಾರ್ಯ ಮುಕುಂದ ಎ. ಆಲೂರ, ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

 

 

 

Leave a Reply

ಹೊಸ ಪೋಸ್ಟ್‌