ವಿಜಯಪುರ: ಬಿಜಾಪೂರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಆದರೆ, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ನ. 23ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಸಾರ್ವಜನಿಕ ದಿನವನ್ನು ಹೊರತು ಪಡಿಸಿ ಪ್ರತಿದಿನ ಬೆ. 11 ರಿಂದ ಮ. 3ರ ವರೆಗೆ ವಿಜಯಪುರ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಅಥವಾ ಸಹಾಯಕ ಚುನಾವಣಾಧಿಕಾರಿಗಳು ಹಾಗೂ ಅಪರ ಜಿಲ್ಲಾಧಿಕಾರಿಗಳ ವಿಜಯಪುರ ಕಛೇರಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರು ತಿಳಿಸಿದ್ದಾರೆ.
ಅದರಂತೆ ನಾಮಪತ್ರಗಳನ್ನು ಅಭ್ಯರ್ಥಿ ಅಥವಾ ಅವನ ಸೂಚಕನು 23-11-2021 (ಮಂಗಳವಾರ) ದಿನಾಂಕವನ್ನು ಮೀರದಂತೆ ಯಾವುದೇ ದಿನಾಂಕದಂದು (ಸಾರ್ವಜನಿಕ ರಜಾ ದಿನವನ್ನು ಹೊರತು ಪಡಿಸಿ) ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3:00 ಗಂಟೆ ನಡುವೆ ರಿಟರ್ನಿಂಗ ಅಧಿಕಾರಿಗೆ ಅಥವಾ ಸಹಾಯಕ ರಿಟರ್ನಿಂಗ ಅಧಿಕಾರಿಗೆ ಒಪ್ಪಿಸಬಹುದು.
ನಾಮಪತ್ರಗಳನ್ನು ಚುನಾವಣಾಧಿಕಾರಿಗಳ ಕಾರ್ಯಾಲಯ (ಜಿಲ್ಲಾಧಿಕಾರಿಗಳ ಕಛೇರಿ) ನಲ್ಲಿ ದಿನಾಂಕ 24-11-2021 (ಬುಧವಾರ) ಬೆಳ್ಳಿಗೆ 11-00 ಗಂಟೆಯಿಂದ ಪರಿಶೀಲನೆಗಾಗಿ ತೆಗೆದುಕೊಳ್ಳಲಾಗುವುದು.
ಅಭ್ಯರ್ಥಿ ಅಥವಾ ಅವನ ಸೂಚಕ ಅಥವಾ ಅಥವಾ ಅವನ ಚುನಾವಣಾ ಏಜೆಂಟನು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ದಿನಾಂಕ 26-11-2021 ನೋಟಿಸನ್ನು (ಶುಕ್ರವಾರ) ದಂದು ಮಧ್ಯಾಹ್ನ 3-00 ಗಂಟೆಗೆ ಮುಂಚೆ 03-ಬಿಜಾಪೂರ ರಿಟರ್ನಿಂಗ್ ಅಧಿಕಾರಿಗೆ ಒಪ್ಪಿಸಬಹುದು.
ಚುನಾವಣೆಗೆ ಸ್ಪರ್ಧೆ ಇರುವ ಸಂಧರ್ಭದಲ್ಲಿ ಮತದಾನವನ್ನು ದಿನಾಂಕ 10-12-2021 (ಶುಕ್ರವಾರ) ದಂದು ಬೆಳಿಗ್ಗೆ 8-00 ಗಂಟೆಯಿಂದ ಸಾಯಂಕಾಲ 4-00 ಗಂಟೆವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.