ವಿಜಯಪುರ: ವಿಜಯಪುರ ನಗದರಲ್ಲಿ ನಾನಾ ಯೋಜನೆಗಳ ಅಡಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವೀಕ್ಷಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಮಂಜೂರಾಗಿರುವ ರೂ, 2.25 ಕೋ. ವೆಚ್ಚದ ಡಾ.ಬಾಬು ಜಗಜೀವನರಾಮ ವೃತ್ತದಿಂದ ಇಬ್ರಾಹಿಂ ರೋಜಾ ವರೆಗಿನ ಚರಂಡಿ ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಅವರು, ರೂ. 14.80 ಕೋ. ವೆಚ್ಚದಲ್ಲಿ ಡಾ. ಬಾಬು ಜಗಜೀವನರಾಮ ವೃತ್ತದಿಂದ ಸೈನಿಕ ಶಾಲೆ, ಜಿಲ್ಲಾಸ್ಪತ್ರೆ, ನೇತಾಜಿ ಸುಭಾಸಚಂದ್ರ ಭೋಸ್ ವೃತ್ತದವರೆಗಿನ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು.
ಈ ಎರಡೂ ರಸ್ತೆಗಳು ರಸ್ತೆ ಇಬ್ಬದಿಗಳಲ್ಲಿ ಡಕ್ಟ ಕೇಬಲಿಂಗ್, ಡ್ರೈನೇಜ್, ಪುಟಪಾತ್, ರೀಲಿಂಗ್ ಬೀದಿದೀಪ, ಸೈಕಲ್ ಟ್ರ್ಯಾಕ್ ಗಳನ್ನು ಒಳಗೊಂಡಿದ್ದು, ಇದೊಂದು ಮಾದರಿ ರಸ್ತೆಯಾಗಲಿದೆ. ಈ ಕಾಮಗಾರಿಯು ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಯತ್ನಾಳ ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕಾರ್ಯವನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಕಾಮಗಾರಿಯಿಂದಾಗಿ ಈ ಪ್ರದೇಶದ ಸುತ್ತಮುತ್ತಲಿನ ಸುತ್ತಲಿನ 60 ಕ್ಕೂ ಹೆಚ್ಚು ನಾನಾ ಬಡಾವಣೆಗಳ ಜನರಿಗೆ, ವಿದ್ಯಾರ್ಥಿಗಳಿಗೆ ನಾನಾ ಭಾಗಗಲ ನಾಗರಿಕರಿಗೆ ಸಂಚಾರಕ್ಕೆ ಬಹಳ ಅನುಕೂಲವಲಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.