ಎಂ ಎಲ್ ಸಿ ಷರತ್ತು-ಕಾಂಗ್ರೆಸ್ಸಿಗೆ ಇಕ್ಕಟ್ಟು-ಮುಗಿಯುತ್ತಿಲ್ಲ ಟಿಕೆಟ್ ಬಿಕ್ಕಟ್ಟು

ವಿಜಯಪುರ: ವಿಜಯಪುರ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ದ್ವಿಸದಸ್ಯ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಎಂ ಎಲ್ ಸಿ ಯೊಬ್ಬರ ಹಠಮಾರಿ ದೋರಣೆಯಿಂದಾಗಿ ಕಾಂಗ್ರೆಸ್ಸಿಗೆ ಇಕ್ಕಟ್ಟು ತಂದಿದ್ದು, ಹಾಲಿ ಇಬ್ಬರು ಸದಸ್ಯರನ್ನು ಹೊಂದಿದ್ದರೂ ಟಿಕೆಟ್ ಹಂಚಿಕೆ ಬಿಕ್ಕಟ್ಟು ಮುಂದುವರೆದಿದೆ.

ಸದ್ಯಕ್ಕೆ ಮಾಜಿ ಸಚಿವ ಮತ್ತು ಹಾಲಿ ಸದಸ್ಯ ಎಸ್. ಆರ್. ಪಾಟೀಲ್ ಮತ್ತು ಸುನೀಲಗೌಡ ಪಾಟೀಲ್ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಇಬ್ಬರಿಗೂ ಟಿಕೆಟ್ ನೀಡಬೇಕು ಎಂಬ ಕೂಗು ಕಾಂಗ್ರೆಸ್ ನಾಯಕರಲ್ಲಿದೆ. ಆದರೆ ಕೇವಲ ಒಬ್ಬರಿಗೆ ಟಿಕೆಟ್ ನೀಡಬೇಕು. ಅದು ಕೂಡ ನನಗೆ ಟಿಕೆಟ್ ನೀಡಬೇಕು ಎಂದು ಹಾಲಿ ಸದಸ್ಯರೊಬ್ಬರು ಪಟ್ಟು ಹಿಡಿದಿರುವುದು ಕಾಂಗ್ರೆಸ್ ಹೈಕಮಾಂಡಿಗೆ ತಲೆನೋವು ತಂದಿದೆ.

ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಲು ವಿಪುಲ ಅವಕಾಶಗಳಿವೆ ಎಂದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಬಹುತೇಕ ಕಾಂಗ್ರೆಸ್ ನಾಯಕರು ಮತ್ತು ಹಾಲಿ ಶಾಸಕರ ಅಭಿಪ್ರಾಯವಾಗಿದೆ. ಆದರೆ ಮತ್ತೆ ಕೆಲವು ನಾಯಕರು ಹಾಗೂ ಶಾಸಕರು ಒಬ್ಬ ಅಭ್ಯರ್ಥಿಗೆ ಮಾತ್ರ ಟಿಕೆಟ್ ನೀಡುವಂತೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ.

ಒಂದು ಟಿಕೆಟ್ ನೀಡಿದರೆ ಮಾತ್ರ ಸ್ಪರ್ಧೆ ಎಂದು ಬೆದರಿಕೆ ಹಾಕಿದ ಎಂ ಎಲ್ ಸಿ

ಈ ಮಧ್ಯೆ, ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್.ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ವಿಜಯಪುರ(ಬಿಜಾಪುರ) ಕ್ಷೇತ್ರದಿಂದ ಹಾಲಿ ಇಬ್ಬರೂ ಸದಸ್ಯರಿಗೆ ಟಿಕೆಟ್ ನೀಡಲು ಉಸ್ತುಕರಾಗಿದ್ದಾರೆ. ಆದರೆ, ಹಾಲಿ ಸದಸ್ಯರೊಬ್ಬರು ಒಂದೇ ಟಿಕೆಟ್ ನೀಡಬೇಕು. ಆ ಟಿಕೆಟ್ ನನಗೆ ಕೊಡಬೇಕು. ಇಬ್ಬರಿಗೆ ಟಿಕೆಟ್ ನೀಡಿದರೆ ನಾನು ಕಣಕ್ಕೆ ಇಳಿಯುವುದಿಲ್ಲ ಎಂದು ರಾಜ್ಯ ನಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇಬ್ಬರಿಗೆ ಟಿಕೆಟ್ ನೀಡುವುದರಿಂದ ಸೋಲಿನ ಆತಂಕಕ್ಕೆ ಒಳಗಾದ ಎಂ ಎಲ್ ಸಿ?
ಈ ನಡುವೆ, ಇಬ್ಬರಿಗೆ ಟಿಕೆಟ್ ನೀಡಿದರೆ ತಮ್ಮ ಆಯ್ಕೆ ಕಷ್ಟ ಎಂಬ ಭೀತಿಯಲ್ಲಿರುವ ಹಾಲಿ ಸದಸ್ಯರೊಬ್ಬರು ತಮಗೆ ಮಾತ್ರ ಟಿಕೆಟ್ ನೀಡಿ, ಇಬ್ಬರಿಗೆ ಟಿಕೆಟ್ ನೀಡಿದರೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಮ್ಮ ವರ್ಚಸ್ಸು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಹೆದರಿರುವ ಆ ಎಂ ಎಲ್ ಸಿ ಇಬ್ಬರಿಗೆ ಟಿಕೆಟ್ ಬೇಡ ಎಂದು ರಾಜ್ಯ ನಾಯಕರ ಎದುರು ಪಟ್ಟು ಹಿಡಿದ್ದಿದ್ದಾರೆ. ಇವರ ಈ ಒತ್ತಡಕ್ಕೆ ಕೆಲವು ಜನ ಶಾಸಕರು ಕೂಡ ಬೆಂಬಲವಾಗಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ವಿದ್ಯಮಾನಗಳಿಂದ ಇದರ ತಲೆ ನೋವೇ ಬೇಡ ಎಂದು ಯೋಚಿಸಿರುವ ಕೆಪಿಸಿಸಿ ವಿಜಯಪುರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವನ್ನು ದೆಹಲಿ ಹೈಕಮಾಂಡ್ ಅಂಗಳಕ್ಕೆ ಹಾಕುವ ಮೂಲಕ ಇದರ ಉಸಾಬರಿಯೇ ಬೇಡ ಎಂದು ನಿರ್ಲಿಪ್ತ ಮನೋಭಾವ ಹೊಂದಿದೆ ಎನ್ನಲಾಗುತ್ತಿದೆ.

ಪ್ಲಸ್ ಪಾಯಿಂಟ್ ನಿರೀಕ್ಷೆಯಲ್ಲಿ ಬಿಜೆಪಿ

ಒಂದು ವೇಳೆ ಕಾಂಗ್ರೆಸ್ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಬಿಜೆಪಿ ಎರಡು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಹಾಕಿ, ಎರಡೂ ಸ್ಥಾನಗಳಲ್ಲಿ ಗೆಲ್ಲುವ ಕಾರ್ಯತಂತ್ರವನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ವಿಚಾರದಲ್ಲಿ ಕಾಂಗ್ರೆಸ್ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಅನುಭವ ಮತ್ತು ಯುವ ನಾಯಕತ್ವ ಎರಡನ್ನು ಬಲಪಡಿಸಿಕೊಳ್ಳವ ಮೂಲಕ ಪಕ್ಷವನ್ನು ಬಲಪಡಿಸಿಕೊಳ್ಳುತ್ತೋ? ಅಥವಾ ಒಬ್ಬರನ್ನು ಮಾತ್ರ ಕಣಕ್ಕಿಳಿಸಿ ಭವಿಷ್ಯದಲ್ಲಿ ಪಕ್ಷದ ವರ್ಚಸ್ಸಿಗೆ ಹಾನಿ ಮಾಡಿಕೊಳ್ಳುತ್ತೋ? ಎಂಬುದು ಈಗ ಚರ್ಚೆಯಲ್ಲಿದೆ.

ಕಾಂಗ್ರೆಸ್ ಒಬ್ಬರನ್ನು ಕಣಕ್ಕಿಳಿಸುತ್ತೋ? ಅಥವಾ ಒಬ್ಬರಿಗೆ ಟಿಕೆಟ್ ನೀಡುತ್ತೋ? ಎಂಬುದು ಇನ್ನೆರಡು ದಿನಗಳಲ್ಲಿ ಸ್ಪಷ್ಟವಾಗಲಿದೆ.

Leave a Reply

ಹೊಸ ಪೋಸ್ಟ್‌