ವಿಜಯಪುರ: ಇದು ನಿಸ್ವಾರ್ಥ ಸೇವೆಗೆ ಸಂದ ಗೌರವವನ್ನು ತನಗೆ ವಿದ್ಯೆ ನೀಡಿ ಜೀವನ ರೂಪಿಸಲು ನೆರವಾದ ಸಂಸ್ಥೆಗೆ ಅರ್ಪಿಸಿದ ಖ್ಯಾತ ವೈದ್ಯರ ಸ್ಟೋರಿ.
ಭಾರತದ ಸ್ವಾತಂತ್ರ್ಯೋತಸ್ವದ ಅಮೃತ ಮಹೋತ್ಸವದ ಸಂತಸದ ಘಳಿಗೆಯಲ್ಲಿ ರಾಜ್ಯ ಸರಕಾರ ಬಸವ ನಾಡು ವಿಜಯಪುರದ ಖ್ಯಾತ ನೇತ್ರ ತಜ್ಞ ಡಾ. ಪ್ರಭುಗೌಡ ಪಾಟೀಲ ಲಿಂಗದಳ್ಳಿ ಅವರು ಮುಖ್ಯಸ್ಥರಾಗಿರುವ ಅನುಗ್ರಹ ಕಣ್ಣಿನ ಆಸ್ಪತ್ರೆಗೆ 2020-21ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ಪ್ರಭುಗೌಡ ಪಾಟೀಲ ವಿಜಯಪುರ ಜಿಲ್ಲೆಯ ಅಷ್ಟೇ ಅಲ್ಲ, ರಾಜ್ಯಾದ್ಯಂತ ತಮ್ಮ ಸೇವೆಯ ಮೂಲಕ ಹೆಸರು ಮಾಡಿದ್ದಾರೆ. ಇವರ ಸಾರಥ್ಯದ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಆಸ್ಪತ್ರೆಯನ್ನು ಹೊಂದಿದೆ. ಅಲ್ಲದೇ, ವಿಜಯಪುರ ಜಿಲ್ಲೆಯ ಪ್ರತಿಯೊಂದು ತಾಲೂಕು ಕೇಂದ್ರಗಳಲ್ಲಿ ತಲಾ ಒಂದೊಂದು ನೇತ್ರ ತಪಾಸಣೆ ಕೇಂದ್ರಗಳನ್ನು ತೆರೆದಿದ್ದಾರೆ. ಇವರ ಸೇವಾಬಾಹುಳ್ಯ ಹೆಚ್ಚಿಸಲು ಪಕ್ಕದ ಕಲಬುರಗಿಯಲ್ಲಿಯೂ ಅನುಗ್ರಹ ಪ್ರಾಥಮಿಕ ನೇತ್ರ ತಪಾಸಣೆ ಕೇಂದ್ರ ಅಂದರೆ ವಿಜನ್ ಕೇಂದ್ರ ತೆರೆದಿದ್ದಾರೆ.
ಈವರೆಗೆ ಡಾ. ಪ್ರಭುಗೌಡ ಮತ್ತು ಅವರ ಪತ್ನಿ ಡಾ. ಮಾಲಿನಿ ಮತ್ತು ಸಹೋದರ ಸೇರಿಕೊಂಡು ಕಳೆದ 20 ವರ್ಷಗಳಲ್ಲಿ 7 ಲಕ್ಷ ಹೊರ ರೋಗಿಗಳಿಗೆ ನೇತ್ರ ತಪಾಸಣೆ ನಡೆಸಿದ್ದಾರೆ. ಒಂದು ಲಕ್ಷ ಜನರಿಗೆ ದೃಷ್ಠಿ ಸಂಬಂಧ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ಅದರಲ್ಲಿ ಈವರೆಗೆ ಸುಮಾರು 510 ಉಚಿತ ಚಿಕಿತ್ಸಾ ಶಿಬಿರ ನಡೆಸಿದ್ದಾರೆ. ಅಲ್ಲದೇ, 25 ಸಾವಿರ ಬಡವರಿಗೆ ಉಚಿತ ನೇತ್ರ ಚಿಕಿತ್ಸೆ ನೀಡಿದ್ದಾರೆ. ಪ್ರತಿ ತಿಂಗಳೂ ವಿಜಯಪುರ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸುಮಾರು ಮೂರು ಉಚಿತ ನೇತ್ರ ತಪಾಸಣೆ ಶಿಬಿರ ನಡೆಸುವ ಮೂಲಕ ಬೆಳಕು ನೀಡುತ್ತಿದ್ದಾರೆ. ಇವರ ಸಂಸ್ಥೆಯಲ್ಲಿ 12 ಜನ ಕಣ್ಣಿನ ವೈದ್ಯರು, ಸುಮಾರು 40 ಜನ ಟೆಕ್ನಿಶಿಯನ್ ಸೇರಿದಂತೆ 120 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ ಸರಾಸರಿ 30 ಜನರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದೆ.
ಮೆಡಿಕಲ್ ಪೋಸ್ಟ್ ಗ್ರ್ಯಾಜ್ಯೂಯೇಟ್ ಆಗಿರುವ ಡಾ. ಪ್ರಭುಗೌಡ ಪಾಟೀಲ ತಮ್ಮ ಪತ್ನಿ ಡಾ. ಮಾಲಿನಿ ಪಾಟೀಲ ಮತ್ತು ಸಹೋದರ ಜೊತೆ ಸೇರಿಕೊಂಡು 2001ರಲ್ಲಿ ವಿಜಯಪುರ ನಗರದಲ್ಲಿ ಅನುಗ್ರಹ ಕಣ್ಣಿನ ಆಸ್ಪತ್ರೆ ಆರಂಭಿಸಿದ್ದಾರೆ. ಕಳೆದ 20 ವರ್ಷಗಳಿಂದ ಇವರು ಮಾಡುತ್ತಿರುವ ನೇತ್ರ ಸೇವೆಯಿಂದಾಗಿ ಮನೆಮಾತಾಗಿದ್ದು, ಇವರ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಸರಕಾರ 2020-21ನೇ ವರ್ಷದಲ್ಲಿ ಸಂಘ- ಸಂಸ್ಥೆಗಳಿಗೆ ನೀಡುವ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಈಗ ಯಾರಿಗೆ ಆಗಲಿ, ಯಾವುದೇ ಒಂದು ಪ್ರಶಸ್ತಿ ಮತ್ತು ಗೌರವ ಬಂದರೆ ಅದನ್ನು ಜನ್ಮ ನೀಡಿದ ಅವ್ವ, ಅಪ್ಪ, ಸಂಬಂಧಿಕರು, ತಮ್ಮ ಮಕ್ಕಳಿಗೆ ಅರ್ಪಿಸುವುದು ಮಾಮೂಲು. ಆದರೆ, ಇಲ್ಲಿ ತಮ್ಮ ಅನುಪಮ ಸೇವೆಗೆ ಸಂದ ಗೌರವವನ್ನು ತಮಗೆ ಉಚಿತ ಶಿಕ್ಷಣ ನೀಡಿದ್ದಷ್ಟೇ ಅಲ್ಲ, ಬದುಕು ರೂಪಿಸಿಕೊಳ್ಳಲು ಮಾರ್ಗದರ್ಶನ ತೋರಿದ ಶಿಕ್ಷಣ ಸಂಸ್ಥೆಗೆ ಅರ್ಪಿಸುವ ಮೂಲಕ ಖ್ಯಾತ ನೇತ್ರ ತಜ್ಞರೊಬ್ಬರು ತಮ್ಮ ಪ್ರೀತಿ ಮೆರೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಇವರ ಜೊತೆಯಲ್ಲಿಯೇ ಸಾಹಿತಿ ಮತ್ತು ಸಂಶೋಧಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ದೊರಕಿರುವ ಹಿನ್ನೆಲೆಯಲ್ಲಿ ವಿಜಯಪುರದ ಬಿ ಎಲ್ ಡಿ ಇ ಸಂಸ್ಥೆಯಲ್ಲಿ ಸನ್ಮಾನ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ತಮಗೆ ಹೈಸ್ಕೂಲ್ ನಿಂದ ಹಿಡಿದು ಮೆಡಿಕಲ್ ವರೆಗೆ ಬಿ ಎಲ್ ಡಿ ಇ ಸಂಸ್ಥೆಯ ಅಂದಿನ ಅಧ್ಯಕ್ಷ ಮತ್ತು ಮಾಜಿ ಸಚಿವ ದಿ. ಬಿ. ಎಂ. ಪಾಟೀಲ ಅವರೇ ಕಾರಣ. ತಮಗೆ ವೈದ್ಯಕೀಯ ವಿಭಾಗದಲ್ಲಿಯೂ ಉಚಿತ ಸೀಟು ನೀಡುವ ಮೂಲಕ ಉದಾರತೆ ಮೆರೆದಿದ್ದರು. ಅಲ್ಲದೇ, ಬಿ ಎಲ್ ಡಿ ಇ ಡೀಮ್ಟ್ ಟುಬಿ ಯುನಿವರ್ಸಿಟಿ ಹಿಂದಿನ ಉಪಕುಲಪತಿ ದಿ. ಎಂ. ಎಸ್. ಬಿರಾದಾರ ಅವರು ನೇತ್ರ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಲು ಮತ್ತು ತಮ್ಮ ಪತ್ನಿ ಹಾಗೂ ಸಹೋದರರಿಗೂ ಇದೇ ವಿಭಾಗದಲ್ಲಿ ಓದಲು ಪ್ರೋತ್ಸಾಹ ನೀಡಿದ್ದರು. ಅಲ್ಲದೇ, ಇಲ್ಲಿನ ಎಲ್ಲ ಸಿಬ್ಬಂದಿಯ ನಿಸ್ವಾರ್ಥ ಸೇವೆಯಿಂದಾಗಿ ತಾವು ಈಗ ಈ ಹಂತ ತಲುಪಿರುವುದಾಗಿ ತಮಗೆ ಸಹಾಯ ಮಾಡಿದವರ ಉಪಕಾರವನ್ನು ಸ್ಮರಿಸಿದರು. ಅಲ್ಲದೇ, ತಮಗೆ ಈಗ ದೊರಕಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಬಿ ಎಲ್ ಡಿ ಇ ಸಂಸ್ಥೆ ಹಾಗೂ ಅದರ ವ್ಯಾಪ್ತಿಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಅರ್ಪಿಸುವುದಾಗಿ ಪ್ರಕಟಿಸಿದರು. ಈ ಮೂಲಕ ತಮಗೆ ಜೀವನ ರೂಪಿಸಲು ನೆರವಾದ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಸಂಶೋದಕ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ಮಾತನಾಡಿ, ಪ್ರೊ. ಎ. ಎಸ್. ಹಿಪ್ಪರಗಿ ಮತ್ತು ಡಾ. ಎಂ. ಎಂ. ಕಲಬುರ್ಗಿ ಅವರ ಮಾರ್ಗದರ್ಶನ ಮತ್ತು ಬಿ ಎಲ್ ಡಿ ಇ ಸಂಸ್ಥೆ ತಮಗೆ ಸೇವೆ ಮಾಡಲು ಅವಕಾಶ ನೀಡಿದ್ದರಿಂದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಆಶೀರ್ವಾದದಿಂದ ಈಗ ಈ ಪ್ರಶಸ್ತಿ ಲಭಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮವನ್ನು ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರ, ಚಿಂತನ ಸಾಂಸ್ಕೃತಿ ಬಳಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿ. ಎಂ. ಪಾಟೀಲ ವಚನ ಗಾಯನ ಮಾಡಿದರು. ಡಾ. ವಿ. ಡಿ. ಐಹೊಳ್ಳಿ ಪರಿಚಯಿಸಿದರು. ಕಾರ್ಯದರ್ಶಿ ಡಾ. ಎಂ. ಎಸ್. ಮದಭಾವಿ ಅಭಿನಂದನೆ ಭಾಷಣ ಮಾಡಿದರು. ಬಿ. ಎಲ್. ಡಿ. ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಉಪಸ್ಥಿತರಿದ್ದರು. ಹಿರೇಮಠ ವಚನ ಗಾಯನ ಹೇಳಿದರು. ಪ್ರೊ. ಎ. ಬಿ. ಬೂದಿಹಾಳ ಕಾರ್ಯಕ್ರಮ ನಿರೂಪಿಸಿದರು. ಡಾ. ಡಿ. ಆರ್. ನಿಡೋಣಿ ವಂದಿಸಿದರು.