ಬಿ ಎಲ್ ಡಿ ಇ ಡೀಮ್ಡ್ ವಿವಿಗೆ ನ್ಯಾಕ್ ನಿಂದ ‘ಎ’ ಗ್ರೇಡ್ ಮಾನ್ಯತೆ- ಎಂ. ಬಿ. ಪಾಟೀಲ

ವಿಜಯಪುರ: ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಮಂಡಳಿ(NAAC) ‘ಎ’ ಗ್ರೇಡ್ ಮಾನ್ಯತೆ ದೊರೆತಿದೆ ಎಂದು ಬಿ ಎಲ್ ಡಿ ಇ ಅಧ್ಯಕ್ಷ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು ನ. 11 ರಿಂದ 13ರ ವರೆಗೆ ನ್ಯಾಕ್ ಸದಸ್ಯರು ವಿಜಯಪುರದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದರು.‌ ಇಲ್ಲಿನ ಮೂಲಭೂತ ಸೌಕರ್ಯಗಳು, ಪಠ್ಯಕ್ರಮ ಮತ್ತು ಅದರ ಅನುಷ್ಠಾನ, ಬೋಧನೆ ಮತ್ತು ಕಲಿಕೆಯ ವಿಧಾನಗಳು, ವಿದ್ಯಾರ್ಥಿಗಳು ಕಲಿಕೆಯಲ್ಲಿ ಪಾಲ್ಗೊಳ್ಳುವಿಕೆ ಹಾಗೂ ಸೇವೆಗಳು, ಆಡಳಿತ, ಸಂಶೋಧನ ಚಟುವಟಿಕೆಗಳು ಒಳಗೊಂಡಂತೆ ಇತರೆ ದಾಖಲೆಗಳನ್ನು ವಿವರವಾಗಿ ಮೌಲ್ಯಮಾಪನ ಮಾಡಿದ್ದಾರೆ. ಅಲ್ಲದೇ, ಗ್ರಾಮೀಣ ಪ್ರದೇಶಗಳಲ್ಲಿ ಸಂಸ್ಥೆ ಸಲ್ಲಿಸಿದ ಸೇವೆಗಳನ್ನು ಪರಿಗಣಿಸಿ, ನಮ್ಮ ವಿಶ್ವವಿದ್ಯಾಲಯಕ್ಕೆ ‘ಎ’ ಗ್ರೇಡ್ ನೀಡಿದ್ದಾರೆ.

ಅಲ್ಲದೇ, ಜೆರಿಯಾಟ್ರಿಕ್ ಕ್ಲಿನಿಕ್‍ನ ಸೇವೆಗಳು, ವಿಶ್ವವಿದ್ಯಾನಲಯದಲ್ಲಿ ಅಭಿವೃದ್ಧಿ ಪಡಿಸಿದ ಕ್ಯೂಆರ್ ಕೋಡ್ ವ್ಯವಸ್ಥೆ ಮತ್ತು ಡಿ ಡಿ ಆರ್ ಸಿ ಬಗ್ಗೆ ನ್ಯಾಕ್ ತಂಡ ಹೆಚ್ಚಿನ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಹಿಂದೆ ‘ಬಿ’ ಗ್ರೇಡ್ ಹೊಂದಿದ್ದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ ‘ಎ’ ಗ್ರೇಡ್ ಗೆ ಮಾನ್ಯತೆ ಹೊಂದಿರುವುದು ಸಂತಸ ತಂದಿದೆ. ಇದಕ್ಕಾಗಿ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ಡೀನ್ ಡಾ. ಅರವಿಂದ ಪಾಟೀಲ ಸೇರಿದಂತೆ ವಿಶ್ವವಿದ್ಯಾಲಯ, ಕಾಲೇಜು ಹಾಗೂ ಆಸ್ಪತ್ರೆಯ ಎಲ್ಲ ಸಿಬ್ಬಂದಿಗೆ ಎಂ. ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.

ಬಿ ಎಲ್ ಡಿ ಇ ಆಸ್ಪತ್ರೆಗೆ ಕೂಡ ಎನ್ ಎ ಬಿ ಎಚ್ ಮಾನ್ಯತೆಗೆ ಪ್ರವೇಶಾತಿ ದೊರೆತಿದ್ದು, ಇದರಿಂದ ಆಸ್ಪತ್ರೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಎಲ್ಲ ಆರೋಗ್ಯ ಯೋಜನೆಗಳು ಮತ್ತು ಇನ್ಶುರೇನ್ಸ್ ಕಂಪನಿಗಳ ಸೇವೆಗಳು ರೋಗಿಗಳಿಗೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಅಲ್ಲದೇ ಬಿ. ಎಂ. ಪಾಟೀಲ್ ವೈದ್ಯಕೀಯ ಕಾಲೇಜಿನ ಪ್ರಥಮ ಎಂ ಬಿ ಬಿ ಎಸ್ ತರಗತಿಗೆ ಈಗಿರುವ 150 ವಿದ್ಯಾರ್ಥಿಗಳ ಪ್ರವೇಶಾತಿಯನ್ನು 200 ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿದ್ದಾರೆ ಎಂದು ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌