ಹಾಸಿಂಪೀರ ವಾಲಿಕಾರ ಗೆಲ್ಲಿಸಿ ಎಲ್ಲ ವಾದಗಳಿಗೆ ಕಸಾಪ ಚುನಾವಣೆ ಮೂಲಕ ಉತ್ತರ ನೀಡಿದ ಮತದಾರರು

ವಿಜಯಪುರ: ಕನ್ನಡ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶ ಎಲ್ಲಾ ವಾದಿಗಳ ತರ್ಕವನ್ನು ತಲೆಕೆಳಗು ಮಾಡಿದೆ.

ಈ ಚುನಾವಣೆಯಲ್ಲಿ ಮತದಾರರು ಪಕ್ಷಾತೀತ, ಜಾತ್ಯಾತೀತ ಮತ್ತು ಧರ್ಮಾತೀತವಾಗಿ ಹಾಸಿಂಪೀರ ವಾಲಿಕಾರ ಅವರನ್ನು ಮತ ಹಾಕಿ ಗೆಲ್ಲಿಸುವ ಮೂಲಕ ವಾದಿಗಳಿಗೆ ವ್ಯಾದಿಗೆ ಪರೋಕ್ಷ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲ, ಯಾರಾರು, ಯಾವ್ಯಾವ ಲೆಕ್ಕಾಚಾರ ಹಾಕಿದ್ದರೋ ಅದನ್ನೆಲ್ಲ ಉಲ್ಟಾಪಲ್ಟಾ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಹಾಸಿಂಪೀರ ವಾಲಿಕಾರ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಮತ್ತು ನಿಕಟಪೂರ್ವ ಅಧ್ಯಕ್ಷ ಹಾಗೂ ಜೆಡಿಎಸ್ ಹಾಲಿ ಜಿಲ್ಲಾಧ್ಯಕ್ಷರೂ ಆಗಿರುವ ಮಲ್ಲಿಕಾರ್ಜುನ ಯಂಡಿಗೇರಿ ಅವರನ್ನು 629 ಮತಗಳ ಭಾರಿ ಅಂತರದಿಂದ ಸೋಲಿಸುವ ಮೂಲಕ ಮತದಾರರು ಎಷ್ಟೊಂದು ಪ್ರಜ್ಞಾವಂತರಿದ್ದಾರೆ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.


ಈ ಚುನಾವಣೆಯಲ್ಲಿ ಹಾಸಿಂಪೀರ ವಾಲಿಕಾರ ಅವರಿಗೆ 2490 ಮತಗಳು ಬಂದರೆ, ಮಲ್ಲಿಕಾರ್ಜುನ ಯಂಡಿಗೇರಿ ಪರ 1861 ಮತಗಳು ಚಲಾವಣೆಯಾಗಿವೆ. ಉಳಿದ ಸ್ಪರ್ಧಿಗಳಾದ ಮಲ್ಲಿಕಾರ್ಜುನ ಭೃಂಗಿಮಠ ಅವರಿಗೆ 1176, ಕಲ್ಲಪ್ಪ ಯಲ್ಲಪ್ಪ ಶಿವಶರಣ ಅವರಿಗೆ 30 ಮತ್ತು ಶ್ರೀಶೈಲ ಸಿದ್ದಪ್ಪ ಆಳೂರ ಅವರಿಗೆ 15 ಮತಗಳು ಬಂದಿವೆ. 48 ಮತಗಳು ತಿರಸ್ಜೃತವಾಗಿವೆ.

ರಾಜಕೀಯ ಚುನಾವಣೆಗೆ ಹೋಲಿಸಿದರೆ ಕಸಾಪ ಚುನಾವಣೆ ವಿಭಿನ್ನವಾಗಿದ್ದರೂ, ರಾಜಕೀಯ ಚುನಾವಣೆಗಿಂತಲೂ ಹೆಚ್ಚು ತಂತ್ರ-ಪ್ರತಿತಂತ್ರಗಳು ಮತ್ತು ಭಿನ್ನವಾದ ಸೋಶಿಯಲ್ ಎಂಜಿನಿಯರಿಂಗ್ ನಡೆದಿದೆ.

ಈ ಚುನಾವಣೆಯಲ್ಲಿ ಕೆಲವರು ಜನ ಜಾತಿ ಲೆಕ್ಕಾಚಾರ ಹಾಕಿದ್ದರೆ, ಮತ್ತೆ ಹಲವರು ಧರ್ಮ ಹಾಗೂ ಪಕ್ಷದ ಲೆಕ್ಕಾಚಾರ ಹಾಕಿ ತಾವಂದುಕೊಂಡಂತೆ ಎಲ್ಲ ಫಲಿತಾಂಶ ಬರಲಿದೆ ಎಂಬ ಹುಮ್ಮಸ್ಸಿನಲ್ಲಿದ್ದರು. ಆದರೆ ಹಾಸಿಂಪೀರ ವಾಲಿಕಾರ ಅವರು ಎಲ್ಲ ಸಮುದಾಯ ಮತ್ತು ಧರ್ಮದವರೊಂದಿಗೆ ಧರ್ಮದ ಹೊಂದಿದ್ದ ಬಾಂಧವ್ಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಾಸಿಂಪೀರ ವಾಲಿಕಾರ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೂ, ಹಿಂದೂ ಸೇರಿದಂತೆ ಇತರ ಧರ್ಮೀಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಶರಣರ, ವಚನಗಳು, ಆಚರಣೆಗಳು ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರಶಸ್ತಿಗಳನ್ನು ನೀಡುವ ಮೂಲಕ ಗಮನ ಸೆಳೆದಿದ್ದರು. ಅಲ್ಲದೇ, ನಾನಾ ಸ್ವಾಮೀಜಿಗಳ ಜೊತೆಗೆ ಹೊಂದಿದ್ದ ಪ್ರೀತಿ ಬಾಂಧವ್ಯ ಅವರಿಗೆ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಷ್ಟೇ ಅಲ್ಲ, ಮುಂಬರುವ ಚುನಾವಣೆಗಳಿಗೆ ತಮ್ಮದೇ ಆದ ವಾದದ ಇಟ್ಟುಕೊಂಡಿರುವವರಿಗೆ ಈ ಪಲಿತಾಂಶ ಎಚ್ಚರಿಕೆ ಗಂಟೆಯೂ ಆಗಿದೆ.

ತಮ್ಮ ಗೆಲುವಿನ ಬಳಿಕ ಬಸವ ನಾಡು ವೆಬ್ ಜೊತೆ ಮಾತನಾಡಿರುವ ಹಾಸಿಂಪೀರ ವಾಲಿಕಾರ, ಇದು ಸರ್ವರಿಗೂ ಸಂದ ಜಯವಾಗಿದೆ. ಎಲ್ಲ ಮತದಾರರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಮುಂಬರುವ ದಿನಗಳಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸುತ್ತೇನೆ. ಕಸ್ತೂರಿ ಕನ್ನಡದ ಕಂಪನ್ನು ಮತ್ತಷ್ಟು ಪಸರಿಸಲು ಶ್ರಮಿಸುತ್ತೇನೆ. ಗೆಲುವಿಗೆ ಸಹಕರಿಸಿದ ಎಲ್ಲರಿಗೂ ಮನಸಾರೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಅಷ್ಟೇ ಅಲ್ಲದೇ, ಧರ್ಮ ಗುರುಗಳ ಉಪಕಾರವನ್ನು ತಮ್ಮ ಜೀವಮಾನದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಈ ಚುನಾವಣೆ ಫಲಿತಾಂಶದ ಮೂಲಕ ಶರಣರ ನಾಡು ಸೂಫಿ ಸಂತರ ಬೀಡು, ಬಸವಣ್ಣನವರ ತವರು ವಿಜಯಪುರ ಜಿಲ್ಲೆಯ ಮತದಾರರು ಬಸವ ನಾಡಿನಲ್ಲಿ ಸರ್ವಧರ್ಮ ಸಹಿಷ್ಣುತೆ ಇನ್ನೂ ಇದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌