ಎಸ್. ಆರ್. ಪಾಟೀಲಗೆ ಟಿಕೆಟ್ ಸಿಗದಿರಲು ಕಾರಣ ಬಿಚ್ಚಿಟ್ಟ ಮಾಜಿ ಸಚಿವ ಸಿ. ಎಸ್. ನಾಡಗೌಡ- ಸುನೀಲಗೌಡ ಪಾಟೀಲ ಗೆಲ್ಲಿಸಲು ಉಭಯ ಜಿಲ್ಲೆಗಳ ಕಾಂಗ್ರೆಸ್ ನಾಯಕರ ಸಂಕಲ್ಪ

ವಿಜಯಪುರ: ವಿಧಾನ ಪರಿಷತ ಪ್ರತಿಪಕ್ಷದ ನಾಯಕ ಎಸ್. ಆರ್. ಪಾಟೀಲ ಅವರಿಗೆ ಈ ಬಾರಿ ಟಿಕೆಟ್ ತಪ್ಪು ಕಾರಣ ಏನು ಎಂಬುದು ಎಲ್ಲರಿಗೂ ಕುತೂಹಲ ಕೆರಳಿಸಿತ್ತು.  ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಮಾಜಿ ಸಚಿವ ಸಿ. ಎಸ್. ನಾಡಗೌಡ ಏನು ಕಾರಣ ಎಂಬುದನ್ನು ಮಾರ್ಮಿಕವಾಗಿ ಬಿಚ್ಚಿಟ್ಟಿದ್ದಾರೆ.

ವಿಜಯಪುರದಲ್ಲಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, 2018ರಲ್ಲಿ ವಿಧಾನ ಪರಿಷತ್ ಬೈ ಎಲೆಕ್ಷನ್ ನಲ್ಲಿ ಸುನೀಲಗೌಡ ಪಾಟೀಲ ಅವರಿಗೆ ಒತ್ತಾಯದಿಂದ ಕಣಕ್ಕಿಳಿಸಿದ್ದೇವು. ಅಲ್ಲದೇ ಮುಂದಿನ ಬಾರಿಯೂ ನಿಮಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದೇವು ಎಂದು ಅವರು ತಿಳಿಸಿದ್ದಾರೆ.

2018ರಲ್ಲಿ ವಿಜಯಪುರ ನಗರ ಶಾಸಕರಾಗಿ ಆಯ್ಕೆಯಾದ ಯತ್ನಾಳ ಸಾರ್ವತ್ರಿಕ ಚುನಾವಣೆಗೂ ಮುಂಚೆ ವಿಧಾನ ಪರಿಷತ ಸದಸ್ಯತ್ವಕ್ಕೆ ರಾಜೀನಾಮೆ ಮೀಡಿದ್ದರು.  ಯತ್ನಾಳ ಅವರ ರಾಜೀನಾಮೆಯಿಂದ ವಿಧಾನ ಪರಿಷತ್‍ಗೆ ಉಪಚುನಾವಣೆ ಘೋಷಣೆಯಾಗಿತ್ತು.  ಆಗ ಸುನೀಲಗೌಡ ಪಾಟೀಲ ಅವರು ಸ್ಪರ್ಧಿಸಲು ಮುಂದಾಗಿರಲಿಲ್ಲ. ಅವರ ಸಹೋದರ ಎಂ.ಬಿ.ಪಾಟೀಲ್ ಕೂಡ ಬೇರೆಯವರಿಗೆ ಅವಕಾಶ ನೀಡುವಂತೆ ಸಲಹೆ ನೀಡಿದ್ದರು.  ಆದರೆ ವಿಜಯಪುರ ಮತ್ತು ಬಾಗಲಕೋಟೆ ಕಾಂಗ್ರೆಸ್ ನಾಯಕರು ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಸೇರಿಕೊಂಡು ಸುನೀಲಗೌಡ ಪಾಟೀಲ  ಅವರಿಗೆ ಟಿಕೆಟ್ ನೀಡಿದೇವು. ಅಲ್ಲದೇ ಮುಂದಿನ ಬಾರಿಯೂ ನಿಮಗೆ ಅವಕಾಶ ನೀಡುವುದಾಗಿ ಸ್ಪಷ್ಟ ಭರವಸೆ ಕೊಟ್ಟಿದ್ದೇವು. ಆದರೆ, ಈ ಬಾರಿ ವಿಜಯಪುರದಿಂದ ಸುನೀಲಗೌಡ ಪಾಟೀಲ ಅವರಿಗೆ ಅವಕಾಶ ನೀಡಲು ಒತ್ತಾಯಿಸಿದ್ದೇವು. ಬಾಗಲಕೋಟೆ ಮುಖಂಡರು ತಮ್ಮ ಜಿಲ್ಲೆಗೆ ಅವಕಾಶ ನೀಡುವಂತೆ ಕೇಳಿದ್ದರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಹೈಕಮಾಂಡ್ ಒಂದೇ ಟಿಕೆಟ್ ನೀಡಲು ನಿರ್ಧರಿಸಿ, ಸುನೀಲಗೌಡ ಪಾಟೀಲ್ ಅವರಿಗೆ ಅವಕಾಶ ನೀಡಿದೆ ಎಂದು ಸ್ಪಷ್ಟಪಡಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ ಈಗಾಗಲೇ ಎಸ್. ಆರ್. ಪಾಟೀಲ ಅವರ ಭವಿಷ್ಯ ಇಲ್ಲಿಗೆ ಕೊನೆಯಾಗಿಲ್ಲ.  ಪಕ್ಷದಲ್ಲಿ ಅವರಿಗೆ ಅತೀ ಹೆಚ್ಚಿನ ಗೌರವವಿದೆ.  ಭವಿಷ್ಯದಲ್ಲಿ ಅವರಿಗೆ ಯೋಗ್ಯ ಸ್ಥಾನಮಾನ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಯಾರೂ ಅಪಸ್ವರ ತೆಗೆಯುವ ಅಗತ್ಯವಿಲ್ಲ. ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲ ನಾಯಕರು ಸೇರಿಕೊಂಡು ಸುನೀಲಗೌಡ ಪಾಟೀಲ ಅವರನ್ನು ಅತೀ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಹೇಳಿದರು.

ಮಾಜಿ ಸಚಿವ ಎಂ. ಬಿ. ಪಾಟೀಲ ಮಾತನಾಡಿ, ಸೋಮವಾರ ರಾತ್ರಿ ತಡವಾಗಿ ಟಿಕೆಟ್ ಘೋಷಣೆಯಾಗಿದ್ದರಿಂದ ನಾಮಪತ್ರ ಸಲ್ಲಿಕೆ ಬಳಿಕ ಈಗ ತುರ್ತಾಗಿ ಸಭೆ ನಡೆಸಿದ್ದೇವೆ. ಶೀಘ್ರದಲ್ಲಿ ಎಲ್ಲ ನಾಯಕರು, ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ಸಭೆಯನ್ನು ಮಾಡೋಣ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ ಈ ಚುನಾವಣೆಯಲ್ಲಿ ಸುನೀಲಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗುವ ಅವಕಾಶಗಳು ಹೆಚ್ಚಿವೆ. ಆ ಸಮಯ ಬೇಗ ಬರಲಿ ಎಂದು ಆಶಿಸಿದರು. ಅಲ್ಲದೇ ಒಂದು ವೇಳೆ ಚುನಾವಣೆ ನಡೆದರೆ ಬಾಗಲಕೋಟೆ ಜಿಲ್ಲೆಯ ಎಲ್ಲ ಹಾಲಿ ಮತ್ತು ಮಾಜಿ ಶಾಸಕರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಕಾರ್ಯಕರ್ತರು ಟೋಂಕ ಕಟ್ಟಿ ನಿಂತು ಸುನೀಲಗೌಡ ಪಾಟೀಲ ಅವರನ್ನು ಎರಡನೇ ಬಾರಿ ಆಯ್ಕೆ ಮಾಡಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

ಅಲ್ಲದೇ ವಿಧಾನ ಪರಿಷತ್ ಸದಸ್ಯರಾಗಿ ಪುನರಾಯ್ಕೆಯಾದ ಮೇಲೆ ಸದನದ ಕಲಾಪಗಳಲ್ಲಿ ನಡೆಯುವ ಸಂಸದೀಯ ಚರ್ಚೆಯಲ್ಲಿ ಹೆಚ್ಚಾಗಿ ಭಾಗವಹಿಸಿ ಉತ್ತಮ ಸಂಸದೀಯ ಪಟುವಾಗಿ ಎಂದು ಎಸ್.ಜಿ.ನಂಜಯ್ಯನಮಠ ಶುಭ ಹಾರೈಸಿದರು.

ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿ ಬಾಗಲಕೋಟೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ಸುನೀಲಗೌಡ ಪಾಟೀಲ ಅವರನ್ನು ಗೆಲ್ಲಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಅವರು ಖಂಡಿತವಾಗಿ ಗೆಲ್ಲುತ್ತಾರೆ ಎಂದು ತಿಳಿಸಿದರು.

ಮಾಜಿ ಸಚಿವ ಆರ್. ಬಿ. ತಿಮ್ಮಾಪುರ ಮಾತನಾಡಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಭೌಗೋಳಿಕವಾಗಿ ಬೇರೆ ಆಗಿವೆ. ಆದರೆ ನಾವೇಲ್ಲ ವಿಭಜನೆಗಿಂತ ಮುಂಚೆಯಿಂದಲೂ ಮಾನಸಿಕವಾಗಿ ಅಣ್ಣ-ತಮ್ಮಂದಿರಂತೆ ಇದ್ದೇವೆ. ಈ ಮುಂಚೆ ಬಾಗಲಕೋಟೆ ಜಿಲ್ಲೆಗೆ ಅವಕಾಶ ನೀಡಿದಾಗ ವಿಜಯಪುರ ಮತದಾರರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಿದ್ದಾರೆ. ಈ ಬಾರಿ ಸುನೀಲಗೌಡ ಪಾಟೀಲ ಅವರನ್ನು ಗೆಲ್ಲಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಲಾ ಒಬ್ಬರಿಗೆ ಟಿಕೆಟ್ ನೀಡಿವೆ. ಮೂರ್ನಾಲ್ಕು ಜನ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.  ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಎಲ್ಲ ಕಾಂಗ್ರೆಸ್ ನಾಯಕರು ಸೇರಿಕೊಂಡು ಪಕ್ಷೇತರರನ್ನು ಕಣದಿಂದ ಹಿಂದೆ ಸರಿಸಲು ಮನವೋಲಿಸೋಣ.  ಈ ಮೂಲಕ ಸುನೀಲಗೌಡ ಪಾಟೀಲ ಅವರನ್ನು ಅವಿರೋಧವಾಗಿ ಗೆಲ್ಲಿಸಲು ಪ್ರಯತ್ನಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೊಂಡ, ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರೀಫ್, ಮಲ್ಲಣ್ಣ ಸಾಲಿ, ಬಿ.ಎಸ್.ಪಾಟೀಲ ಯಾಳಗಿ, ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ ಮಾತನಾಡಿ ಸುನೀಲಗೌಡ ಪಾಟೀಲ ಅವರನ್ನು ಬಾರಿ ಮತಗಳ ಅಂತರದಿಂದ ಗೆಲ್ಲಿಸೋಣ ಎಂದು ಹೇಳಿದರು.

ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಈಗಾಗಲೇ ತಮಗೆ ಸಿಕ್ಕ ಮೂರು ವರ್ಷಗಳ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಗೌರವ ಧನ ಹೆಚ್ಚಳ, ಪಿಂಚಣಿ ಹಾಗೂ ಉಚಿತ ಬಸ್ ಪಾಸ್ ಕುರಿತು ಅಧಿವೇಶನದಲ್ಲಿ ಧ್ವನಿ ಎತ್ತಿದ್ದೇನೆ. ಮುಂಬರುವ ದಿನಗಳಲ್ಲಿ ಇತರ ಸೌಲಭ್ಯಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಕುರಿತು ಶ್ರಮಿಸುವುದಾಗಿ ತಿಳಿಸಿದರು.

ಈ ಸಭೆಯಲ್ಲಿ ಮಾಜಿ ಸಚಿವೆ ಉಮಾಶ್ರೀ, ಅಶೋಕ ಮನಗೂಳಿ, ಐ.ಸಿ.ಪಟ್ಟಣಶೆಟ್ಟಿ, ಇಲಿಯಾಸ್ ಬೋರಮಣಿ, ಸುರೇಶ ಘೋಣಸಗಿ, ಎಸ್.ಎಂ.ಪಾಟೀಲ ಗಣಿಯಾರ, ಈರಗೊಂಡ ಬಿರಾದಾರ, ಸಿದ್ದು ಗೌಡನವರ, ವೈಜನಾಥ ಕರ್ಪೂರಮಠ, ಮಾಜಿ ಮೇಯರ್ ಸರ್ಜಾದೆ ಪೀರಾ ಮುಶ್ರೀಫ್, ವಸಂತ ಹೊನಮೊಡೆ, ಅಭಯಕುಮಾರ ನಾಂದ್ರೆಕರ, ಸುಭಾಷ ಛಾಯಾಗೋಳ, ಸಂಗಮೇಶ ಬಬಲೇಶ್ವರ, ಡಾ.ಗಂಗಾಧರ ಸಂಬಣ್ಣಿ, ಟಪಾಲ ಇಂಜಿಯರ್, ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌