ಹವಾಮಾನ ವೈಪರಿತ್ಯದ ಜೊತೆಗೆ ವರುಣಾಘಾತ- ರೈತರ ಪಾಲಿಗೆ ಹುಳಿಯಾದ ದ್ರಾಕ್ಷಿ- ಸಮೀಕ್ಷೆಗೆ ತಜ್ಞರ ಸಮಿತಿ ರಚಿಸಿದ ಜಿಲ್ಲಾಡಳಿತ

ವಿಜಯಪುರ: ಬಸವ ನಾಡು ದ್ರಾಕ್ಷಿ ಬೆಳೆಯ ತವರು ಜಿಲ್ಲೆ ಎಂದೇ ಹೆಸರಾಗಿರುವ ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರ ಗೋಳು ಮುಂದುವರೆಯುತ್ತಲೇ ಇದೆ.  ಹವಾಮಾನ ವೈಪರಿತ್ಯ ಮತ್ತು ವರುಣನ ಅವಕೃಪೆಯಿಂದಾಗಿ ರೈತರ ಬಾಳನ್ನು ಸಿಹಿಯಾಗಿಸಬೇಕಿದ್ದ ದ್ರಾಕ್ಷಿ ಹುಳಿಯಾಗಲಾರಂಭಿಸಿದೆ.

ರಾಜ್ಯದಲ್ಲಿಯೇ ಅತೀ ಹೆಚ್ಚು ದ್ರಾಕ್ಷಿ ಬೆಳೆಯುವ ಜಿಲ್ಲೆ ವಿಜಯಪುರ.  ಇಲ್ಲಿ ಸುಮಾರು 17000 ಹೆಕ್ಟೇರ್ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಿದ್ದು, ಇದರಲ್ಲಿ ಸುಮಾರು 15000 ಎಕರೆಯಲ್ಲಿ ಈ ಬಾರಿ ಉತ್ತಮ ದ್ರಾಕ್ಷಿ ಇಳುವರಿ ನಿರೀಕ್ಷಿಸಲಾಗಿತ್ತು.  ಆದರೆ, ಕಳೆದ ಸುಮಾರು ದಿನಗಳಿಂದ ಉಂಟಾಗಿರುವ ಹವಾಮಾನ ವೈಪರಿತ್ಯದಿಂದಾಗಿ ಮೋಡ ಮುಸುಕಿದ ವಾತಾವರಣ, ಆಗಾಗ ಸುರಿಯುತ್ತಿರುವ ಮಳೆ, ಬೀಸುತ್ತಿರುವ ಶೀತ ಮಾರುತ ದ್ರಾಕ್ಷಿ ಬೆಳೆಗಾರರ ಪಾಲಿಗೆ ಅಕ್ಷರಶಃ ಮರ್ಮಾಘಾತ ನೀಡಿದೆ.

 

ಈ ಹವಾಮಾನ ವೈಪರಿತ್ಯದಿಂದಾಗಿ ದ್ರಾಕ್ಷಿ ಬೆಳೆಗೆ ಡೌನಿಮಿಲ್ಡ್ ಅಂದರೆ ಕೊಳೆ ರೋಗ ಕಾಣಿಸಿಕೊಂಡಿದ್ದು, ರೈತರು ಕಂಗಾಲಾಗಿದ್ದಾರೆ.  ಅದರಲ್ಲೂ ಈಗ ದ್ರಾಕ್ಷಿ ಹೂವು ಬಿಡುವ ಹಂತದಲ್ಲಿರುವ ರೈತರಿಗೆ ಈ ಮಳೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ.  ಇದರಿಂದಾಗಿ ಸಾಲಸೋಲ ಮಾಡಿ ಸಿಹಿಯಾದ ದ್ರಾಕ್ಷಿ ಪಡೆಯುವ ನಿರೀಕ್ಷೆಯಲ್ಲಿದ್ದ ರೈತರು ಅಕ್ಷರಶಃ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.

 

ವಿಜಯಪುರ ಜಿಲ್ಲೆಯಲ್ಲಿ ತಿಕೋಟಾ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ ಅತೀ ಹೆಚ್ಚು ದ್ರಾಕ್ಷಿ ಬೆಳೆಯಲಾಗುತ್ತದೆ.  ಈಗ ದ್ರಾಕ್ಷಿ ಬೆಳೆಗಾರರಿಗೆ ಬೆಳೆಹಾನಿ ಆತಂಕ ಶುರುವಾಗಿದೆ. ಬಬಲೇಶ್ವರ ತಾಲೂಕಿನ ನಿಡೋಣಿ ಗ್ರಾಮದಲ್ಲಿಯೂ ಕಳೆದ ಒಂದು ವಾರದಿಂದ ಆಗಾಗ ಸುರಿದ ಮಳೆ ಹೂವೂ ಬಿಡುವ ಹಂತದಲ್ಲಿದ್ದ ಮತ್ತು ಕಾಳು ಬಿಟ್ಟಿದ್ದ ಗೊನೆಗಳು ಸಂಪೂರ್ಣ ಕೊಳೆತು ಹಾಳಾಗುವಂತೆ ಮಾಡಿದೆ.  ಈ ರೋಗ ನಿಯಂತ್ರಿಸಲು ರೈತರು ಪ್ರತಿನಿತ್ಯ ದುಬಾರಿ ಬೆಲೆಯ ಔಷಧಿ ಸಿಂಪಡಣೆ ಮಾಡಿದರೂ ನಿಯಂತ್ರಣ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸವೂ ರೈತರಲ್ಲಿ ಇಲ್ಲವಾಗಿದೆ.  ಈ ಬಾಗದ ರೈತರಿಗೆ ಅದರಲ್ಲೂ ದ್ರಾಕ್ಷಿ ಬೆಳೆಗಾರರಿಗೆ ಪ್ರತಿ ವರ್ಷ ಪ್ರಾಕೃತಿಕ ಹೊಡೆತಗಳು ಬೀಳುತ್ತಲೇ ಇವೆ.  ಈ ಹಿನ್ನೆಲೆಯಲ್ಲಿ ನಿಡೋಣಿ ಗ್ರಾಮದ ದ್ರಾಕ್ಷಿ ಬೆಳೆಗಾರರಾದ ಸೋಮಶೇಖರ ಕೋಟ್ಯಾಳ, ರಾಘವೇಂದ್ರ ನವಣಿ, ಮಚ್ಚಂದ್ರ ಮಾಳಿ, ಸುರೇಶ ಮಾಳಿ, ಅರ್ಜುನ ಗುಣದಾಳ ಮುಂತಾದ ರೈತರು ಕೂಡಲೇ ವಿಜಯಪುರ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ದ್ರಾಕ್ಶಿ ಬೆಳೆಹಾನಿಯ ಕುರಿತು ಸಮೀಕ್ಷೆ ನಡೆಸುವಂತೆ ಆಗ್ರಹಿಸಿದ್ದಾರೆ.

ತೋಟಗಾರಿಕೆ ಇಲಾಖೆ ಮಾಹಿತಿ

ಈ ಮಧ್ಯೆ, ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯದಿಂದಾಗಿ ದ್ರಾಕ್ಷಿ ಬೆಳೆಗಾರರಿಗೆ ಆಗಿರುವ ಹಾನಿಯ ಕುರಿತು ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಸೂಚನೆಯಂತೆ ತೋಟಗಾರಿಕೆ ವಿಶ್ವವಿದ್ಯಾಲಯದ ತಜ್ಞರ ಎರಡು ಸಮಿತಿಗಳನ್ನು ರಚನೆ ಮಾಡಲಾಗಿದೆ.  ಗುರುವಾರದಿಂದ ಈ ಎರಡು ಸಮಿತಿಗಳು ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಸಂಚರಿಸಿ ದ್ರಾಕ್ಷಿ ಬೆಳೆಹಾನಿ ಕುರಿತು ಸಮೀಕ್ಷೆ ನಡೆಸಲಿವೆ.  ಈ ಸಮಿತಿಗಳು ವರದಿ ನೀಡಿದ ನಂತರ ಶನಿವಾರ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗವುದು.  ಅಲ್ಲದೇ, ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಸೂಕ್ತ ಪರಿಹಾರಕ್ಕೆ ಮನವಿ ಮಾಡಲಾಗುವುದು ಎಂದು ವಿಜಯಪುರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಸ್. ಎಂ. ಬರಗಿಮಠ ದೂರವಾಣಿ ಮೂಲಕ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.

 

Leave a Reply

ಹೊಸ ಪೋಸ್ಟ್‌