ಪ್ರಬುದ್ದ, ಜಾಗರೂಕ ಮತದಾರರಿಂದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ- ಪಿಯು ಡಿಡಿ ಎಸ್. ಎನ್. ಬಗಲಿ

ವಿಜಯಪುರ: ಪ್ರಜಾಪಭುತ್ವದ ಯಶಸ್ಸು ಪ್ರಬುದ್ದ ಮತ್ತು ಜಾಗರೂಕ ಮತದಾರರಿಂದಲೇ ಸಾಧ್ಯ. ಉತ್ತಮ ನಾಗರಿಕನಾಗಿ ಸುಭದ್ರ ಸರಕಾರದ ರಚನೆಗಾಗಿ ಇಂದಿನ ಯುವಕರಿಗೆ ಸೂಕ್ತ ತರಬೇತಿ ಅಗತ್ಯ. ಮತದ ಮಹತ್ವ ತಿಳಿಸಲು ಪ್ರೌಢ ಹಾಗೂ ಪದವಿ ಪೂರ್ವ ಹಂತದಿಂದಲೇ ತರಭೇತಿ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಮಂಡಳಿ ಉಪ ನಿರ್ದೇಶಕ ಎಸ್.‌ಎನ್. ಬಗಲಿ ಹೇಳಿದ್ದಾರೆ.

ವಿಜಯಪುರ ನಗರದ ಬಾಲಕಿಯರ ಸರಕಾರಿ ಪಿಯು ಕಾಲೇಜಿನ ಶಾರದಾ ಸಭಾ ಭವನದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ರು ಪದವಿ ಪೂರ್ವ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಜಿಲ್ಲಾ ಮಟ್ಟದ ನಾನಾ ಸ್ಪರ್ಧೆಯ ಚಟುವಟಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಪ್ರಬಂಧ, ಚಿತ್ರಕಲೆ, ರಸಪ್ರಶ್ನೆಯಂಥ ಅನೇಕ ಸ್ಫರ್ದೆ ಆಯೋಜಿಸಬೇಕು ಎಂದು ಅವರು ಹೇಳಿದರು.

ಭಾರತ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡ ಹಾಗೂ ಯಶಸ್ವಿ ಪ್ರಜಾಪ್ರಭುತ್ವ ಹೊಂದಿದ ರಾಷ್ಟ್ರ. ಇದನ್ನು ಮುಂದುವರಿಸಲು 18 ವರ್ಷ ತುಂಬಿದ ಎಲ್ಲ ಯುವಕ-ಯುವತಿಯರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡು ಮತ ಚಲಾಯಿಸಬೇಕು. ಈ ಮೂಲಕ ಇತರರಿಗೆ ಮತ ಚಲಾಯಿಸುವಂತೆ ಪ್ರೇರಣೆ ನೀಡಬೇಕು ಎಂದು ಕರೆ ನೀಡಿದರು.

ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಇ ಎಲ್ ಸಿ ನೋಡಲ್ ಅಧಿಕಾರಿ ಪ್ರೊ. ಎಂ. ಬಿ. ರಜಪೂತ ಪ್ರಾಸ್ತಾವಿಕ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ಸಿಗೆ ಮತದಾನವೇ ಕಾರಣ. ಒಂದು ಮತ ದೇಶದ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಒಂದೇ ಮತದಲ್ಲಿ ಸರಕಾರಗಳೇ ಬದಲಾಗುವ ಸಾಧ್ಯತೆ ಇರುತ್ತದೆ. ನನ್ನದೊಂದು ಮತದಿಂದ ಏನಾಗುತ್ತದೆ ಎಂಬ ತಾತ್ಸಾರ ಮನೋಭಾವ ಬಿಟ್ಟು ಎಲ್ಲರೂ ಮತ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತದೆ. ಬಂದೂಕಿನ ಬುಲೆಟ್ಟಿಗಿಂತ ಬ್ಯಾಲೆಟ್(ಮತ) ಅತ್ಯಂತ ಶಕ್ತಿಶಾಲಿ‌ ಎಂದು ಮತದ ಮಹತ್ವವನ್ನು ವಿವರಿಸಿದರು.

ಕಾಲೇಜಿನ ಪ್ರಾಚಾರ್ಯರಾದ ಚಿದಾನಂದ ಬಿ. ನಾಟೀಕಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗ ಸಂಕೀರ್ಣವಾಗಿರುವ ಜಗತ್ತಿನಲ್ಲಿ ಉತ್ತಮ ಸರಕಾರ ರಚನೆಯಾದರೆ ಮಾತ್ರ ಪ್ರಗತಿ ಸಾಧ್ಯ. ಹೀಗಾಗಿ ನಾಗರಿಕರಿಗೆ ಮಾಹಿತಿ ನೀಡಲು ಇಂಥ ಕಾರ್ಯಕ್ರಮಗಳುಲನ್ನು ಕಾಲೇಜು ಹಂತದಲ್ಲಿ ನಡೆಸಲೇಬೇಕು. 18 ವರ್ಷ ತುಂಬಿದ ತಕ್ಷಣ ಪ್ರತಿಯೊಬ್ಬರು ಫಾರ್ಮ ನಂ. 6 ನ್ನು ತುಂಬಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಇ ಎಲ್ ಸಿ ನೋಡಲ್ ಅಧಿಕಾರಿಗಳಾದ ಪ್ರೊ. ಎನ್. ಬಿ. ಪೂಜಾರಿ,‌ ಪ್ರೊ. ಲಕ್ಷ್ಮೀನರಸಯ್ಯ, ಪ್ರೊ. ಎಸ್. ಎಸ್. ಸಿದರಡ್ಡಿ, ವಿಜಯಲಕ್ಷ್ಮಿ ಹಿರೇಮಠ, ಭಾಗ್ಯಲಕ್ಷ್ಮಿ, ಕೆ. ಎ. ಹೊಸಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರೊ. ಆರ್. ಸಿ. ಹಿರೇಮಠ ಸ್ವಾಗತಿಸಿದರು
ಎಂ. ಎಸ್. ಮಾಲಿಪಾಟೀಲ ವಂದಿಸಿದರು. ಪ್ರೊ. ಎಸ್. ಸಿ. ತೋಳನೂರ ಕಾರ್ಯಕ್ರಮ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌